ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಖಾಸಗಿ ಆಸ್ಪತ್ರೆಗಳು ಹಾಗೂ ಔಷಧ ಮಾರಾಟ ಜಾಲದಲ್ಲಿ ನಡೆಯುತ್ತಿರುವ ಬೃಹತ್ ದರ ಲೂಟಿಯನ್ನು ಆಹಾರ ಮತ್ತು ಔಷಧ ಆಡಳಿತ ಮಂಡಳಿ (FDA) ತನಿಖೆ ನಡೆಸುವ ಮೂಲಕ ಬಯಲಿಗೆಳೆದಿದೆ.
ಬಡ ಹಾಗೂ ಮಧ್ಯಮ ವರ್ಗದ ರೋಗಿಗಳನ್ನು ಗುರಿಯಾಗಿಸಿಕೊಂಡು, ತಯಾರಿಕಾ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚು ದರಕ್ಕೆ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಬೆಚ್ಚಿಬೀಳಿಸುವ ಸತ್ಯ ಈ ತನಿಖೆಯಿಂದ ಹೊರಬಿದ್ದಿದೆ.
ತಯಾರಿಕಾ ದರ ಮತ್ತು MRP ನಡುವಿನ ಬೃಹತ್ ಅಂತರ:
ಆಹಾರ ಮತ್ತು ಔಷಧ ಆಡಳಿತ ಮಂಡಳಿಯು ಸುಮಾರು 254 ಪ್ರಮುಖ ಔಷಧ ಕಂಪನಿಗಳ ಕರಾಳ ಮುಖವಾಡವನ್ನು ಬಿಚ್ಚಿಟ್ಟಿದ್ದು, ಮುಖ್ಯವಾಗಿ ಕ್ಯಾನ್ಸರ್‌ನಂತಹ ಜೀವಭಯ ಹುಟ್ಟಿಸುವ ಕಾಯಿಲೆಗಳ ಔಷಧಿಗಳ ಮೇಲೆಯೇ ಗರಿಷ್ಠ ಮಟ್ಟದ ಲೂಟಿ ನಡೆಯುತ್ತಿರುವುದು ಕಂಡುಬಂದಿದೆ.
₹86 ಗಳ ಔಷಧಿಗೆ ₹4,528 MRP: ಔಷಧ ಆಸ್ಪತ್ರೆಗೆ ತಲುಪುವ ದರ ₹86 ಇದ್ದರೆ, ಅದರ ಮೇಲೆ ಮುದ್ರಿತವಾಗಿರುವ ಗರಿಷ್ಠ ಮಾರಾಟ ಬೆಲೆ (MRP) ₹4,528! ಅಂದರೆ ಮೂಲ ಬೆಲೆಗಿಂತ 52 ಪಟ್ಟು ಹೆಚ್ಚು ದರ ನಿಗದಿಪಡಿಸಲಾಗಿದೆ.
₹160 ಗಳ ಔಷಧಿಗೆ ₹7,110 MRP: ₹160 ಮೂಲ ಬೆಲೆಯ ಔಷಧಿಯನ್ನು 44 ಪಟ್ಟು ಹೆಚ್ಚು ಬೆಲೆಗೆ ರೋಗಿಗಳಿಗೆ ಮಾರಾಟ ಮಾಡಲಾಗುತ್ತಿದೆ.
ಸೈಟ್ಯಾಕ್ಸ್ 100MG (ಕ್ಯಾನ್ಸರ್ ಔಷಧ): ಆಸ್ಪತ್ರೆಗೆ ತಲುಪುವ ವೆಚ್ಚ ₹342, ಆದರೆ MRP ₹3,836 — 1021% ಲಾಭ!
ನ್ಯೂಕೈನ್ 300MCG: ಆಸ್ಪತ್ರೆಗೆ ತಲುಪುವ ವೆಚ್ಚ ₹112, ಆದರೆ MRP ₹1,239 — 1006% ಲಾಭ!
ಬಿವಾಟಾಸ್ 400MG ಇಂಜೆಕ್ಷನ್: ಆಸ್ಪತ್ರೆಗೆ ತಲುಪುವ ವೆಚ್ಚ ₹5,850, ಆದರೆ MRP ₹62,690 — 971% ಲಾಭ!
ಕೊಸೇಟ್ 3 MIU ಇಂಜೆಕ್ಷನ್: ಆಸ್ಪತ್ರೆಗೆ ತಲುಪುವ ವೆಚ್ಚ ₹340, ಆದರೆ MRP ₹3,699 — 987% ಲಾಭ!
ಉಪಕರಣಗಳು ಹಾಗೂ ಕನ್ಸ್ಯೂಮೆಬಲ್ಸ್‌ಗಳಲ್ಲೂ ಲೂಟಿ:
ಈ ಲೂಟಿ ಕೇವಲ ಮಾತ್ರೆ ಮತ್ತು ಇಂಜೆಕ್ಷನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆಗಳಲ್ಲಿ ಬಳಸಲಾಗುವ ವೈದ್ಯಕೀಯ ಉಪಕರಣಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಹಾಗೂ ಸರ್ಜಿಕಲ್ ಗ್ಲೌಸ್, ಸಿರಿಂಜ್‌ನಂತಹ ಕನ್ಸ್ಯೂಮೆಬಲ್ಸ್‌ಗಳ ಮೇಲೂ ಕಂಪನಿಗಳಿಂದ ತೀರಾ ಕಡಿಮೆ ದರಕ್ಕೆ ಖರೀದಿಸಿ, ರೋಗಿಗಳಿಗೆ ಅತ್ಯಧಿಕ MRP ಆಧಾರದಲ್ಲಿ ಬಿಲ್ ನೀಡಲಾಗುತ್ತಿದೆ.
ಇದರ ಜೊತೆಗೆ, ‘ವೆಲ್‌ನೆಸ್ ಫಾರ್ಎವರ್’ ನಂತಹ ಪ್ರಸಿದ್ಧ ಮೆಡಿಕಲ್ ಸರಣಿ ಅಂಗಡಿಗಳಲ್ಲೂ ನಕಲಿ ಔಷಧಿಗಳು ಪತ್ತೆಯಾಗಿರುವುದು, ಇಡೀ ಔಷಧ ಪೂರೈಕೆ ಜಾಲದ ಮೇಲೆಯೇ ಸಾರ್ವಜನಿಕರಲ್ಲಿ ತೀವ್ರ ಅನುಮಾನ ಹಾಗೂ ಆತಂಕ ಹುಟ್ಟುಹಾಕಿದೆ.
ಕೇಂದ್ರದ NPPA ಗೆ ಕರ್ನಾಟಕ FDA ಪತ್ರ: ಒಂದೆಡೆ ನಕಲಿ ಔಷಧಿ ಮಾರಾಟ ಮಾಡಿದರೆ ಕೊಲೆ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಎಚ್ಚರಿಸುತ್ತಿದ್ದರೆ, ಇನ್ನೊಂದೆಡೆ ಅಸಲಿ ಔಷಧಿಯ ಹೆಸರಿನಲ್ಲೇ ರೋಗಿಗಳಿಂದ ಶೇ. 60 ರಿಂದ 90 ಪಟ್ಟಿಗೂ ಹೆಚ್ಚು ಹಣ ಸುಲಿಗೆ ಮಾಡಲಾಗುತ್ತಿದೆ. ಇದರಿಂದಾಗಿ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುವ ಬಡ ರೋಗಿಗಳು ತಮ್ಮ ಆಸ್ತಿ-ಪಾಸ್ತಿ ಮಾರಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಈ ಬೃಹತ್ ದರ ಲೂಟಿಗೆ ತಕ್ಷಣವೇ ಕಡಿವಾಣ ಹಾಕಲು ಹಾಗೂ ಔಷಧಿಗಳ MRP ಮೇಲಿನ ಅತಿಯಾದ ಮಾರ್ಜಿನ್‌ಗೆ ಮಿತಿ ಹೇರಲು ಕರ್ನಾಟಕ FDA ಆಯುಕ್ತ ಶ್ರೀನಿವಾಸ್ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರಕ್ಕೆ (NPPA - National Pharmaceutical Pricing Authority) ತುರ್ತು ಪತ್ರ ಬರೆದು ಗಮನ ಸೆಳೆದಿದ್ದಾರೆ. ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕರು ಆರೋಗ್ಯ ವ್ಯವಸ್ಥೆಯ ಮೇಲಿಟ್ಟಿರುವ ನಂಬಿಕೆಯೇ ಸಂಪೂರ್ಣವಾಗಿ ಕುಸಿಯುವ ಅಪಾಯವಿದೆ.




