ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಅಂಬೇಡ್ಕರ್ ವಿಚಾರಧಾರೆಯ ಹಲವು ಹೋರಾಟಗಾರರ, ಸಂಘಟನೆಗಳ ಬೌದ್ಧಿಕ ಶ್ರೇಷ್ಠತೆಯ ವ್ಯಸನದಿಂದಾಗಿ ಅಂಬೇಡ್ಕರ್ ಚಳುವಳಿ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಅಧ್ಯಕ್ಷ ಬಿಪಿ ತಿಪ್ಪೇಸ್ವಾಮಿ ಹೇಳಿದರು.
ಇಂದು ಕೋಟೆ ನಾಡು ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಗ್ರಾಮಾಂತರ ಪ್ರದೇಶಗಳಲ್ಲಿ ಬುದ್ಧ ವಿಹಾರಗಳ ಸ್ಥಾಪನೆ ಕುರಿತ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಪ್ರಪಂಚದಲ್ಲಿ ಮಿತಿಯಿಲ್ಲದಷ್ಟು ಜೀವಿಗಳಿವೆ, ನಮ್ಮಲ್ಲಿ ಲೆಕ್ಕವಿಲ್ಲದಷ್ಟು ವಿಕಲತೆಗಳಿವೆ, ಪ್ರಪಂಚದಲ್ಲಿ ಕೊನೆಯಿಲ್ಲದಷ್ಟು ಸತ್ಯಗಳಿವೆ . ಅವುಗಳನ್ನೆಲ್ಲ ಗ್ರಹಿಸಿಕೊಳ್ಳಲು" ಅನುಪಮ ಬೌದ್ಧ ಮಾರ್ಗವಿದೆ "ಎಂದು ಬಾಬಾ ಸಾಹೇಬರು ಹೇಳಿದ್ದಾರೆ ಎಂದರು .
ಅದಕ್ಕಾಗಿಯೇ ಬಾಬಾ ಸಾಹೇಬರು ತನ್ನ ಜನಗಳಿಗೆ ತಮ್ಮ ಆದಾಯದ ಕನಿಷ್ಠ 20 ಭಾಗವನ್ನಾದರೂ ಬುದ್ಧ ಧಮ್ಮ ಪ್ರಚಾರಕ್ಕೆ ಮೀಸಲಿಡಬೇಕೆಂದು ಕರೆಕೊಟ್ಟಿದ್ದರು.
ಬುದ್ಧ ಧಮ್ಮ ವನ್ನು ಮಾತಿನಿಂದ, ಭಾಷಣದಿಂದ ಕಟ್ಟಲು ಸಾಧ್ಯವಿಲ್ಲ. ಧಮ್ಮಕ್ಕೆ ವೈಜ್ಞಾನಿಕ ದೃಷ್ಟಿಕೋನದ ಜೊತೆಗೆ ತನ್ನದೇ ಆದ ರೀತಿ ನೀತಿ ಆಚರಣೆಗಳ ಅವಶ್ಯಕತೆ ಇದೆ. ಆದುದರಿಂದಲೇ ಬಾಬಾ ಸಾಹೇಬರು ತಮ್ಮ ದಮ್ಮ ದೀಕ್ಷೆಯ ಸಮಯದಲ್ಲಿ ಆ ಎಲ್ಲ ವಿಧಿ ವಿಧಾನಗಳನ್ನು ಅಳವಡಿಸಿಕೊಂಡಿದ್ದರು.
ಅಂಬೇಡ್ಕರ್ ಗೆ ಗೌರವ ಕೊಡುವ ಎಲ್ಲ ದಲಿತ ಹೋರಾಟಗಾರರು ತಮ್ಮ ಗ್ರಾಮಗಳಲ್ಲಿ ಬುದ್ಧ ವಿಹಾರಗಳನ್ನು ಸ್ಥಾಪನೆ ಮಾಡುವ ಮೂಲಕ ಅಲ್ಲಿ ಪ್ರತಿ ಬಾನುವಾರವೂ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ವಿಚಾರಗಳನ್ನು ಮಕ್ಕಳಿಗೆ ಬೋಧಿಸುವ ಮೂಲಕ ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಕಾಯುವ ಸಿಪಾಯಿಗಳನ್ನು ರೂಪಿಸಬೇಕಾಗಿದೆ ಎಂದರು.
ಈಗ ಕರ್ನಾಟಕ ಸರ್ಕಾರವು ನೊಂದಾಯಿತ ಬುದ್ಧ ವಿಹಾರಗಳಲ್ಲಿ ಕಾರ್ಯನಿರ್ವಹಿಸುವ ದಮ್ಮ ಚಾರಿಗಳಿಗೆ ಮಾಸಿಕ 6,000ಗಳ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ಯೋಜನೆಯನ್ನು ಬಳಸಿಕೊಳ್ಳುವ ಮುಖಾಂತರ ಗ್ರಾಮಾಂತರ ಪ್ರದೇಶದಲ್ಲಿ ಧರ್ಮ ಕಟ್ಟುವ ಪ್ರಯತ್ನ ಆರಂಭಿಸಬಹುದಾಗಿದೆ.
ಈ ರೀತಿಯಾಗಿ ಬುದ್ಧ ವಿಹಾರಗಳನ್ನು ಸ್ಥಾಪಿಸುವ ಮತ್ತು ಅಲ್ಲಿ ಕಾರ್ಯನಿರ್ವಹಿಸುವ ದ ಮ್ಮ ಚಾರಿಗಳಿಗೆ ಬೇಕಾಗಿರುವಂತಹ ಎಲ್ಲ ರೀತಿಯ ಸಹಕಾರವನ್ನು ಹಾಗೂ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಗೌತಮ ಬುದ್ಧ ಪ್ರತಿಷ್ಠಾನದ ಕೋಟೆನಾಡು ಬುದ್ಧ ವಿಹಾರ ಸದಾ ನಿಮ್ಮ ಜೊತೆಯಲ್ಲಿ ಇರುತ್ತದೆ ಎಂದರು.
ಈ ಸಭೆಯಲ್ಲಿ ಹಿರಿಯದಲಿತ ಮುಖಂಡ ಭೀಮನಕೆರೆ ಶಿವಮೂರ್ತಿ, ಉಪನ್ಯಾಸಕ ಈ ನಾಗೇಂದ್ರಪ್ಪ, ಗೌಡಪ್ಪ,ಶಿಕ್ಷಕಿ ಗಿರಿಜಾ, ಬಿಎಸ್ಐ ಮಹಿಳಾ ಜಿಲ್ಲಾಧ್ಯಕ್ಷ ಶಕುಂತಲಾ, ಹಿರಿಯ ಉಪಾಸಕಿ ಲಕ್ಷ್ಮೀದೇವಿ, ಗಿರಿಜಾ ನಾಗಭೂಷಣ್ ಉಷಾ,ಶಾಂತಮ್ಮ, ಮುಂತಾದವರು ಉಪಸ್ಥಿತರಿದ್ದರು.




