Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಣ್ಣಿನೊಳಗಿನ ಬೀಜಗಳಂತೆ, ಮನುಜರೆಲ್ಲ ಒಂದೇ ಕುಲವಲ್ಲವೇ?

ಹಣ್ಣಿನೊಳಗಿನ ಬೀಜಗಳಂತೆ, ಮನುಜರೆಲ್ಲ ಒಂದೇ ಕುಲವಲ್ಲವೇ?
"ಜಾತಿಯ ಗೋಡೆಗಳು ಮನುಷ್ಯನನ್ನು ಮನುಷ್ಯನಿಂದ ದೂರ ಮಾಡುತ್ತವೆ. ಮಾನವೀಯತೆ, ಸಮಾನತೆ ಮತ್ತು ಗುಣಕ್ಕೆ ಗೌರವ ನೀಡಿದಾಗ ಮಾತ್ರ ಸೌಹಾರ್ದಯುತ ಸಮಾಜ ನಿರ್ಮಾಣವಾ ಗುತ್ತದೆ."

ಹಣ್ಣಿನೊಳಗಿನ ಬೀಜಗಳಂತೆ
ಹುಟ್ಟಿದೆವು ಒಂದೇ ಜೀವವಾಗಿ.
ಜಾತಿಯ ಗೋಡೆ ಕುಸಿದ ದಿನ
ಮಾನವತೆ ಅರಳಲಿ ಲೋಕವಾಗಿ.

Advertisement

ಮಾನವ ಮೇಲೇನು? ಕೀಳೇನು? ಇವನೇನು? ಅವನೇನು? ಈ ಭೇದಗಳಿಗೆ ಒಪ್ಪಿಗೆ ನೀಡಿದವರು ಯಾರು?  ಏನೂ ನಮ್ಮೊಂದಿಗೆ ಬಂದಿಲ್ಲ. ಏನನ್ನೂ ನಮ್ಮೊಂದಿಗೆ ಕೊಂಡೊಯ್ಯಲೂ ಸಾಧ್ಯವಿಲ್ಲ. ಆದರೂ ಅಹಂಕಾರ, ಅಧಿಕಾರ, ಸಂಪತ್ತು, ಜಾತಿ, ಸ್ಥಾನಮಾನಗಳ ಹೆಸರಿನಲ್ಲಿ ಮನುಷ್ಯನು ಮನುಷ್ಯನನ್ನೇ ವಿಭಜಿಸಿಕೊಂಡಿದ್ದಾನೆ. ದುರಭಿಮಾನದ ಮುಖವಾಡವನ್ನು ಕಳಚಿ ಒಮ್ಮೆ ನಿನ್ನೊಳಗೆ ನೋಡು. ಅಲ್ಲಿ ಕಾಣುವುದು ಒಂದೇ ಜೀವ, ಒಂದೇ ಉಸಿರು, ಒಂದೇ ಮಾನವತ್ವ. ಮುಂದೆ, ಹಿಂದೆ, ಮೇಲೆ, ಕೆಳಗೆ ಎನ್ನುವ ಎಲ್ಲ ಭೇದಗಳೂ ಮನುಷ್ಯನ ಕಲ್ಪನೆಯಷ್ಟೇ. ಅಂತಿಮವಾಗಿ ನಾವೆಲ್ಲರೂ ಒಂದೇ ಎಂಬ ಸತ್ಯವನ್ನು ಎಂದಿಗೂ ಮರೆಯಬಾರದು.

ಜನ್ಮವು ಮನುಷ್ಯನನ್ನು ಗುರುತಿಸುವುದಿಲ್ಲ. ಗುಣವೇ ಅವನ ನಿಜವಾದ ಪರಿಚಯ. ಜಾತಿ ವಿಭಜಿಸುವಲ್ಲಿ, ಮಾನವೀಯತೆ ಒಂದಾಗಿಸುತ್ತದೆ. ಮನುಷ್ಯನ ಶ್ರೇಷ್ಠ ಕುಲ ಅವನ ಕರುಣೆ, ಪ್ರಾಮಾಣಿಕತೆ ಮತ್ತು ಸಜ್ಜನಿಕೆ ಯಲ್ಲಿದೆ. ಈ ಸರಳ ಸತ್ಯವನ್ನು ಪ್ರಕೃತಿ ಪ್ರತಿದಿನ ನಮಗೆ ಕಲಿಸುತ್ತಲೇ ಇದೆ. ಆದರೆ ಮನುಷ್ಯ ಮಾತ್ರ ಅದನ್ನು ಮರೆತು ಭೇದದ ಗೋಡೆಗಳನ್ನು ಕಟ್ಟಿಕೊಂಡಿದ್ದಾನೆ.

ಈ ಸತ್ಯವನ್ನು ಅರಿಯಲು ಒಂದು ಸೀಬೆಹಣ್ಣನ್ನು ಕತ್ತರಿಸಿ ನೋಡಿದರೆ ಸಾಕು. ಅದರೊಳಗಿನ ಅನೇಕ ಬೀಜಗಳು ಒಂದೇ ಹಣ್ಣಿನ ಒಡಲಿನಲ್ಲಿ ಬೆಳೆಯುತ್ತವೆ. ಅವುಗಳ ನಡುವೆ ಭೇದವಿಲ್ಲ. ಹಾಗೆಯೇ ಈ ಭೂಮಿಯ ಮೇಲೆ ಹುಟ್ಟುವ ಮನುಜರೆಲ್ಲ ಒಂದೇ ಮಾನವಕುಲದವರು.

ಬಹು ಮುಖ್ಯವಾಗಿ ಒಂದು ಸೀಬೆಹಣ್ಣನ್ನು ಕತ್ತರಿಸಿ ನೋಡಿದಾಗ ಅದರೊಳಗೆ ಹತ್ತಾರು ಬೀಜಗಳು ಕಾಣುತ್ತವೆ. ಅವು ಒಂದೇ ಹಣ್ಣಿನ ಒಡಲಿನಲ್ಲಿ ಬೆಳೆಯುತ್ತ

ವೆ. ಒಂದೇ ಪೋಷಣೆಯನ್ನು ಪಡೆಯುತ್ತವೆ. ಒಂದೇ ಜೀವಸತ್ವವನ್ನು ಹೊತ್ತು ಕೊಂಡಿ ರುತ್ತವೆ. ಅವುಗಳ ನಡುವೆ ಮೇಲಿನ ಬೀಜ, ಕೆಳಗಿನ ಬೀಜ, ಶ್ರೇಷ್ಠ ಬೀಜ, ಕೀಳು ಬೀಜ ಎಂಬ ಭೇದವಿಲ್ಲ. ಪ್ರಕೃತಿ ಅಂತಹ ಯಾವುದೇ ಗುರುತ ನ್ನು ಕೊಟ್ಟಿಲ್ಲ. ಇದೇ ಪ್ರಕೃತಿಯ ಮಹಾನ್ ಸಂದೇಶ. ಆದರೆ ಈ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಾದ ಮನುಷ್ಯ ಮಾತ್ರ ತನ್ನ ಬದುಕನ್ನು ಜಾತಿ, ವರ್ಣ, ಮೇಲಾಟ, ಕೆಳಾಟ ಎಂಬ ಕೃತಕ ಗೋಡೆಗಳಿಂದ ಸುತ್ತುವರಿದಿದ್ದಾನೆ.

 ತಾಯಂದಿರ ಗರ್ಭದಲ್ಲಿ ಬೆಳೆಯುವ ಶಿಶು ಮೊದಲು ಮನುಷ್ಯ. ಅದು ಯಾವ ಜಾತಿಯ ಮಗು ಎಂದು ಗರ್ಭ ಕೇಳುವುದಿಲ್ಲ. ಗರ್ಭದಲ್ಲಿರುವ ಜೀವಕ್ಕೆ ಒಂದೇ ರಕ್ತದ ಸ್ಪಂದನವಿರುತ್ತದೆ. ಒಂದೇ ಉಸಿರಿನ ಚಲನೆಯಿರು ತ್ತದೆ. ಒಂದೇ ಜೀವದ ಬೆಳವಣಿಗೆಯಿರುತ್ತದೆ. ಹುಟ್ಟಿದ ನಂತರವೇ ಸಮಾಜ ಅದರ ಕಿವಿಯಲ್ಲಿ ಜಾತಿಯ ಹೆಸರನ್ನು ಹೇಳುತ್ತದೆ. ಜನ್ಮ ಪ್ರಕೃತಿಯ ಕೊಡುಗೆ. ಜಾತಿ ಸಮಾಜದ ನಿರ್ಮಿತಿ. ಈ ಎರಡರ ನಡುವಿನ ವ್ಯತ್ಯಾಸವನ್ನು ಅರಿಯದವರೆಗೆ ಮಾನವ ಸಮಾಜದಲ್ಲಿ ನಿಜವಾದ ಸಮಾನತೆ ಸಾಧ್ಯವಾಗುವುದಿಲ್ಲ.

ಮನುಷ್ಯನು ಹುಟ್ಟುವಾಗ ಖಾಲಿ ಹಸ್ತನಾಗಿ ಬರುತ್ತಾನೆ. ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಮಧ್ಯದಲ್ಲಿ ಮಾತ್ರ ನಾನು ಈ ಜಾತಿಯವನು, ನೀನು ಆ ಜಾತಿಯವನು ಎಂದು ವಿಭಜನೆ ಮಾಡಿಕೊಳ್ಳು ತ್ತಾನೆ. ಈ ವಿಭಜನೆ ಪ್ರಕೃತಿಯ ನಿಯಮವಲ್ಲ. ಅದು ಮಾನವನ ಮನಸ್ಸು ಕಟ್ಟಿದ ಕಲ್ಪನೆ. ಪ್ರಕೃತಿ ಎಲ್ಲರಿಗೂ ಒಂದೇ ಸೂರ್ಯನ ಬೆಳಕನ್ನು ನೀಡುತ್ತದೆ. ಒಂದೇ ಮಳೆಯ ನೀರನ್ನು ಸುರಿಸುತ್ತದೆ. ಒಂದೇ ಭೂಮಿಯಲ್ಲಿ ಅನ್ನ ಬೆಳೆಯುತ್ತದೆ. ಒಂದೇ ಗಾಳಿಯನ್ನು ಎಲ್ಲರೂ ಉಸಿರಾಡುತ್ತಾರೆ. ಪ್ರಕೃತಿ ಎಲ್ಲಿಯೂ ಭೇದ ಮಾಡುವುದಿಲ್ಲ. ಭೇದವನ್ನು ಸೃಷ್ಟಿಸುವುದು ಮನುಷ್ಯನ ಮನಸ್ಸು.

ನಾವು ಆಸ್ಪತ್ರೆಯೊಂದಕ್ಕೆ ಹೋದಾಗ ವೈದ್ಯರು ಮೊದಲು ರೋಗಿಯ ಜಾತಿಯನ್ನು ಕೇಳುವುದಿಲ್ಲ. ಅವನ ಆರೋಗ್ಯವನ್ನು ನೋಡುತ್ತಾರೆ. ರಕ್ತ ಬೇಕಾದಾಗ ರಕ್ತದ ಗುಂಪು ಮುಖ್ಯವಾಗುತ್ತದೆ. ಜಾತಿ ಮುಖ್ಯವಾಗುವುದಿಲ್ಲ. ಅಪಘಾತದಲ್ಲಿ ಗಾಯಗೊಂಡವನನ್ನು ರಕ್ಷಿಸುವವರು ಮೊದಲು ಜೀವವನ್ನು ಉಳಿಸುತ್ತಾರೆ. ಅವನ ಕುಲವನ್ನು ಹುಡುಕುವುದಿಲ್ಲ. ಸಂಕಷ್ಟದ ಕ್ಷಣದಲ್ಲಿ ಮಾನವತೆ ಮಾತ್ರ ಮಾತನಾಡುತ್ತದೆ. ಹಾಗಾದರೆ ನೆಮ್ಮದಿಯ ದಿನಗಳಲ್ಲಿ ಮಾತ್ರ ಜಾತಿ ಏಕೆ ಮಾತನಾಡಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡಲೇಬೇಕು.

 news_1784304431_0_347.jpg

 

news_1784303691_4_779.jpg

 

ಹಸಿವು ಎಲ್ಲರಿಗೂ ಒಂದೇ. ನೋವು ಎಲ್ಲರಿಗೂ ಒಂದೇ. ಕಣ್ಣೀರು ಎಲ್ಲರಿಗೂ ಒಂದೇ. ತಾಯಿಯ ಮಮತೆ ಎಲ್ಲರಿಗೂ ಒಂದೇ. ಮಗುವಿನ ನಗು ಎಲ್ಲರಿಗೂ ಒಂದೇ. ಮರಣವೂ ಎಲ್ಲರಿಗೂ ಒಂದೇ. ಬದುಕಿನ ಮೂಲಭೂತ ಸತ್ಯಗಳೆಲ್ಲ ಒಂದೇ ಆಗಿರುವಾಗ ಜಾತಿಯ ಹೆಸರಿನಲ್ಲಿ ಮನುಷ್ಯನ ಮೌಲ್ಯವನ್ನು ಅಳೆಯುವುದು ಎಷ್ಟು ದೊಡ್ಡ ಅಜ್ಞಾನ ಎಂಬುದನ್ನು ನಾವು ಅರಿತು ಕೊಳ್ಳಬೇಕು.

ಮಹಾತ್ಮ ಬುದ್ಧರು ಮನುಷ್ಯನ ಮೌಲ್ಯವನ್ನು ಅವನ ಜನ್ಮದಿಂದಲ್ಲ, ಅವನ ಕರ್ಮದಿಂದ ಅಳೆಯಬೇಕು ಎಂದು ಬೋಧಿಸಿದರು. ಬಸವಣ್ಣ ಅವರು ಕಾಯಕ ಮತ್ತು ದಾಸೋಹದ ಮೂಲಕ ಸಮಾನತೆಯ ಸಂದೇಶ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವೇ ಪ್ರಜಾಪ್ರಭುತ್ವದ ಜೀವಾಳ ಎಂದು ತಿಳಿಸಿದರು. ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವತೆಯ ಕನಸನ್ನು ಕಂಡರು. ಈ ಎಲ್ಲ ಮಹನೀಯರ ಸಂದೇಶ ಒಂದೇ. ಮನುಷ್ಯನನ್ನು ಮನುಷ್ಯನಾಗಿ ಕಾಣಬೇಕು. ಜನ್ಮದಿಂದಲ್ಲ, ಗುಣದಿಂದ ಗೌರವಿಸಬೇಕು.

ಇಂದು ವಿಜ್ಞಾನವು ಮಾನವಕುಲದ ಮೂಲವನ್ನು ಅಧ್ಯಯನ ಮಾಡಿದೆ. ಜಗತ್ತಿನ ಎಲ್ಲ ಮನುಷ್ಯರೂ ಒಂದೇ ಮಾನವ ಜಾತಿಗೆ ಸೇರಿದವರು ಎಂಬುದನ್ನು ಸ್ಪಷ್ಟಪಡಿಸಿದೆ. ಚರ್ಮದ ಬಣ್ಣ, ಭಾಷೆ, ಪ್ರದೇಶ, ಸಂಸ್ಕೃತಿ ಬದಲಾಗಬಹುದು. ಆದರೆ ಮಾನವತ್ವ ಬದಲಾಗುವುದಿಲ್ಲ. ದೇಹದ ರಚನೆ ಒಂದೇ. ಜೀವದ ಮೌಲ್ಯ ಒಂದೇ. ಹೃದಯದ ಸ್ಪಂದನ ಒಂದೇ. ಹಾಗಿದ್ದರೂ ಶ್ರೇಷ್ಠತೆ ಮತ್ತು ಕೀಳುತನವನ್ನು ಜಾತಿಯ ಹೆಸರಿನಲ್ಲಿ ಕಟ್ಟುವುದು ವೈಜ್ಞಾನಿಕವಾಗಿಯೂ ಸರಿಯಲ್ಲ, ಮಾನವೀಯವಾಗಿಯೂ ನ್ಯಾಯವಲ್ಲ.

ದುರದೃಷ್ಟವಶಾತ್ ಇಂದಿಗೂ ಜಾತಿಯ ಹೆಸರಿನಲ್ಲಿ ಅವಮಾನ, ತಿರಸ್ಕಾರ, ದ್ವೇಷ ಮತ್ತು ಹಿಂಸೆ ನಡೆಯುತ್ತಿರುವುದು ನೋವಿನ ಸಂಗತಿ. ಶಿಕ್ಷಣ ಬೆಳೆದಿದೆ. ತಂತ್ರಜ್ಞಾನ ಮುಂದುವರಿದಿದೆ. ಆದರೆ ಮನಸ್ಸು ಇನ್ನೂ ಕೆಲವೆಡೆ ಕತ್ತಲೆಯಲ್ಲೇ ಉಳಿದಿದೆ. ನಿಜವಾದ ಪ್ರಗತಿ ಕಟ್ಟಡಗಳ ಎತ್ತರದಲ್ಲಿ ಇರುವುದಿಲ್ಲ. ಮನುಷ್ಯನ ಚಿಂತನೆಯ ಎತ್ತರದಲ್ಲಿರುತ್ತದೆ. ಸಮಾಜದ ಅಭಿವೃದ್ಧಿಯನ್ನು ಅಳೆಯ ಬೇಕಾದರೆ ಅದು ದುರ್ಬಲನನ್ನು ಹೇಗೆ ಗೌರವಿಸುತ್ತದೆ ಎಂಬುದನ್ನು ನೋಡಬೇಕು.

ಮಕ್ಕಳ ಮನಸ್ಸಿನಲ್ಲಿ ಜಾತಿಯ ಬೀಜ ಇರುವುದಿಲ್ಲ. ಅವರು ಒಟ್ಟಿಗೆ ಆಟವಾಡುತ್ತಾರೆ. ಒಟ್ಟಿಗೆ ಕಲಿಯುತ್ತಾರೆ. ಒಟ್ಟಿಗೆ ನಗುತ್ತಾರೆ. ಭೇದವನ್ನು ಅವರಿಗೆ ಕಲಿಸುವುದು ನಾವು. ಆದ್ದರಿಂದ ಮುಂದಿನ ಪೀಳಿಗೆಗೆ ಆಸ್ತಿ ಕೊಡುವುದಕ್ಕಿಂತ ಮೊದಲು ಮಾನವೀಯತೆಯನ್ನು ನೀಡಬೇಕು. ಶಿಕ್ಷಣದ ಜೊತೆಗೆ ಸಂವೇದನೆಯನ್ನು ಬೆಳೆಸಬೇಕು. ಸ್ಪರ್ಧೆಯ ಜೊತೆಗೆ ಸಹಬಾಳ್ವೆಯನ್ನು ಕಲಿಸಬೇಕು. ಗೌರವವನ್ನು ಪಡೆಯುವ ಮೊದಲು ಗೌರವ ನೀಡುವುದನ್ನು ಕಲಿಸಬೇಕು.

ನಮ್ಮ ಸಂವಿಧಾನ ಎಲ್ಲ ನಾಗರಿಕರಿಗೂ ಸಮಾನ ಹಕ್ಕನ್ನು ನೀಡಿದೆ. ಅದು ಯಾರನ್ನೂ ಮೇಲಿನವರಾಗಿ ಅಥವಾ ಕೆಳಗಿನವರಾಗಿ ನೋಡಿಲ್ಲ. ಸಮಾನ ಅವಕಾಶ, ಸಮಾನ ಗೌರವ ಮತ್ತು ಸಮಾನ ನ್ಯಾಯವೇ ಅದರ ಆತ್ಮ. ಈ ಆತ್ಮವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ.

ಜಾತಿಯನ್ನು ಅಳಿಸುವುದು ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಅದು ಮನಸ್ಸಿನ ಪರಿವರ್ತನೆಯಿಂದ ಸಾಧ್ಯ. ನಮ್ಮ ಮಾತಿನಲ್ಲಿ ಮಾನವೀಯತೆ ಇರಬೇಕು. ನಮ್ಮ ವರ್ತನೆಯಲ್ಲಿ ಸಮಾನತೆ ಇರಬೇಕು. ನಮ್ಮ ಮಕ್ಕಳಿಗೆ ಜಾತಿಯ ಹೆಮ್ಮೆಯನ್ನು ಅಲ್ಲ, ಮಾನವೀಯತೆಯ ಹೆಮ್ಮೆಯನ್ನು ಕಲಿಸಬೇಕು. ಇದೇ ಶಾಶ್ವತ ಪರಿಹಾರ.

ಒಂದು ಹಣ್ಣಿನೊಳಗಿನ ಬೀಜಗಳು ನಮಗೆ ಪ್ರತಿದಿನ ಒಂದು ಮೌನ ಸಂದೇಶವನ್ನು ನೀಡುತ್ತವೆ. ಮೂಲ ಒಂದಾಗಿದ್ದರೆ ಭೇದಕ್ಕೆ ಅರ್ಥವಿಲ್ಲ. ಇದೇ ಸಂದೇಶವನ್ನು ಮನುಷ್ಯ ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ದಿನ ಸಮಾಜದಲ್ಲಿ ದ್ವೇಷ ಕಡಿಮೆಯಾಗುತ್ತದೆ. ಪ್ರೀತಿ ಹೆಚ್ಚುತ್ತದೆ. ವಿಭಜನೆ ಕಡಿಮೆಯಾಗುತ್ತದೆ. ವಿಶ್ವಾಸ ಬೆಳೆಯುತ್ತದೆ.

ನಾವು ನಮ್ಮ ಹೆಸರಿನಿಂದ ಗುರುತಿಸಿಕೊಳ್ಳಬಹುದು. ನಮ್ಮ ಭಾಷೆಯಿಂದ ಗುರುತಿಸಿಕೊಳ್ಳಬಹುದು. ನಮ್ಮ ಸಂಸ್ಕೃತಿಯಿಂದ ಗುರುತಿಸಿಕೊಳ್ಳಬಹುದು. ಆದರೆ ನಮ್ಮ ಶ್ರೇಷ್ಠ ಗುರುತು ಒಂದೇ. ಅದು ಮಾನವತೆ. ಜಾತಿ ಕಾಲ ದೊಂದಿಗೆ ಹುಟ್ಟಿದ ಒಂದು ಸಾಮಾಜಿಕ ವ್ಯವಸ್ಥೆ. ಆದರೆ ಮಾನವತೆ ಸೃಷ್ಟಿಯ ಆರಂಭದಿಂದಲೂ ಇದೆ. ಆದ್ದರಿಂದ ಜಾತಿಗಿಂತ ಮಾನವತೆ ದೊಡ್ಡದು. ಜನ್ಮಕ್ಕಿಂತ ಗುಣ ದೊಡ್ಡದು. ಭೇದಕ್ಕಿಂತ ಪ್ರೀತಿ ದೊಡ್ಡದು.

ಮಾನವರಾದ ನಾವು ಆಲೋಚನೆ ಮಾಡಿಯಬೇಕು ಒಂದು ಸೀಬೆಹಣ್ಣಿನೊಳ ಗಿನ ಬೀಜಗಳನ್ನು ನೋಡಿದಾಗಲೆಲ್ಲ ಒಂದು ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡಬೇಕು. ಒಂದೇ ಹಣ್ಣಿನೊಳಗೆ ಬೆಳೆದ ಬೀಜಗಳು ತಮ್ಮನ್ನು ತಾವು ವಿಭಜಿಸಿಕೊಳ್ಳದಿದ್ದಾಗ, ಒಂದೇ ಭೂಮಿಯಲ್ಲಿ ಹುಟ್ಟಿದ ನಾವು ಏಕೆ ವಿಭಜಿಸಿಕೊಳ್ಳಬೇಕು? ಈ ಪ್ರಶ್ನೆಗೆ ನಮ್ಮ ಮನಸ್ಸು ಪ್ರಾಮಾಣಿಕವಾಗಿ ಉತ್ತರಿಸಿದ ದಿನವೇ ನಿಜವಾದ ಮಾನವ ಸಮಾಜದ ಉದಯವಾಗುತ್ತದೆ. ಲೇಖನ:ಕಾಶಿಗೌ, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರು, ಮೈಸೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು