Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹದವೇ ಆರೋಗ್ಯದ ಹೃದಯ

ಹದವೇ ಆರೋಗ್ಯದ ಹೃದಯ
"ಆರೋಗ್ಯವು ಔಷಧಿಗಳಿಂದ ಮಾತ್ರವಲ್ಲ, ಆಹಾರದಲ್ಲಿ ಹದ, ಜೀವನದಲ್ಲಿ ಸಂಯಮ ಮತ್ತು ನಡೆನುಡಿಯಲ್ಲಿ ಶಿಸ್ತಿನಿಂದ ರೂಪುಗೊಳ್ಳುವ ಅಮೂಲ್ಯ ಸಂಪತ್ತು. ಹದವನ್ನು ಅರಿತು ಬದುಕುವ ವ್ಯಕ್ತಿಯೇ ಆರೋಗ್ಯವಂತ ಸಮಾಜಕ್ಕೂ, ಸಾರ್ಥಕ ಜೀವನಕ್ಕೂ ಗಟ್ಟಿಯಾದ ಅಡಿಪಾಯ ಹಾಕಬಲ್ಲನು."

ಮನುಷ್ಯನು ಆಹಾರವನ್ನು ಹಿತವಾಗಿ, ಮಿತವಾಗಿ ಮತ್ತು ಹದವಾಗಿ ಸೇವಿಸಿದಾಗ ದೇಹದಲ್ಲಿ ಸುಯೋಗ ನೆಲೆಸುತ್ತದೆ. ಹದ ತಪ್ಪಿದಲ್ಲಿ ಯೋಗ ದೂರವಾಗಿ ರೋಗ ಹತ್ತಿರವಾಗುತ್ತದೆ. ರೋಗ ಬೆಳೆದರೆ ಅನಾರೋಗ್ಯ ಜೀವನವನ್ನು ಆವರಿಸುತ್ತದೆ. ಆದ್ದರಿಂದ ಹಿತ, ಮಿತ ಮತ್ತು ಹದವೇ ಆರೋಗ್ಯದ ಹೃದಯ. ಇವುಗಳನ್ನು ಕಾಪಾಡಿಕೊಂಡ ಬದುಕೇ ಸುಯೋಗದ ಬದುಕು. ಅದುವೇ ಸಾರ್ಥಕ ಜೀವನದ ಮಹಾಯೋಗ.

Advertisement

ಹದ ಇದರರ್ಥ ಅತಿಯಾಗಿಯೂ ಅಲ್ಲ, ಕೊರತೆಯಾಗಿಯೂ ಅಲ್ಲದ ಸಮತೋಲನದ ಜೀವನ."  ದೇಹಕ್ಕೆ ಬೇಕಾದಷ್ಟೇ ಆಹಾರ, ಸಾಕಷ್ಟು ವಿಶ್ರಾಂತಿ, ನಿಯಮಿತ ಕೆಲಸ, ನಿಯಂತ್ರಿತ ಆಸೆಗಳು ಮತ್ತು ಶಿಸ್ತಿನ ಜೀವನವೇ ಹದ. ಈ ಹದವನ್ನು ಕಾಪಾಡಿದಾಗಲೇ ಆರೋಗ್ಯ ಉಳಿಯುತ್ತದೆ.

ಮನುಷ್ಯನ ಆರೋಗ್ಯದ ಮೂಲ ರಹಸ್ಯವು ಆಹಾರ, ನಿದ್ರೆ, ಕೆಲಸ ಮತ್ತು ಜೀವನಶೈಲಿಯ ಎಲ್ಲ ಕ್ಷೇತ್ರಗಳಲ್ಲೂ ಹದ ಅಥವಾ ಸಮತೋಲನ ಕಾಪಾಡಿ ಕೊಳ್ಳುವುದರಲ್ಲಿ ಅಡಗಿದೆ. ಅತಿಯಾಗಿಯೂ ಅಲ್ಲ, ಕೊರತೆಯಾಗಿಯೂ ಅಲ್ಲದ ಮಿತಿಯ ಜೀವನವೇ ದೇಹವನ್ನು ಆರೋಗ್ಯವಂತವಾಗಿರಿಸಿ, ಮನಸ್ಸನ್ನು ನೆಮ್ಮದಿಯುತವಾಗಿರಿಸಿ, ಬದುಕನ್ನು ಸಾರ್ಥಕಗೊಳಿಸುತ್ತದೆ. ಆದ್ದರಿಂದ ಹದವೇ ಆರೋಗ್ಯವನ್ನು ಜೀವಂತವಾಗಿಡುವ ಹೃದಯ ಎಂಬ ವಿಚಾರವನ್ನು ಮಾನವರಿಗೆ ಇದು ಸಾರುತ್ತದೆ.

ಮನುಷ್ಯನ ಜೀವನದಲ್ಲಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಸಂಪತ್ತನ್ನು ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು. ಹುದ್ದೆಯನ್ನು ಪುನಃ ಪಡೆಯಬಹುದು. ಆದರೆ ಆರೋಗ್ಯ ಕುಸಿದರೆ ಉಳಿದ ಎಲ್ಲ ಸಾಧನೆಗಳೂ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ನಮ್ಮ ಪೂರ್ವಜರು ಆರೋಗ್ಯವನ್ನು ಕೇವಲ ದೇಹದ ಸ್ಥಿತಿಯಾಗಿ ನೋಡದೆ, ಜೀವನದ ಶಿಸ್ತು, ಸಂಯಮ ಮತ್ತು ವಿವೇಕದ ಪ್ರತಿಫಲವೆಂದು ಬೋಧಿಸಿದರು. ಆರೋಗ್ಯವು ಔಷಧಿಯಿಂದ ಮಾತ್ರವಲ್ಲ, ಪ್ರತಿದಿನದ ಜೀವನಶೈಲಿಯಿಂದ ರೂಪುಗೊಳ್ಳುತ್ತದೆ.

ಇಂದಿನ ಜಗತ್ತು ಆಹಾರದ ವೈವಿಧ್ಯದಿಂದ ಸಮೃದ್ಧವಾಗಿದೆ. ರುಚಿಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಆದರೆ ಆಹಾರ ಹೆಚ್ಚಾದಂತೆ ಆರೋಗ್ಯ ಕಡಿಮೆಯಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಿದ್ದರೂ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತಿಲ್ಲ. ಕಾರಣ ಒಂದೇ. ನಾವು ಆಹಾರವನ್ನು ಆಯ್ಕೆ ಮಾಡುತ್ತಿದ್ದೇವೆ. ಆದರೆ ಆಹಾರದ ಹದವನ್ನು ಮರೆತಿದ್ದೇವೆ.

ಪ್ರಕೃತಿಯು ಪ್ರತಿಯೊಂದು ಜೀವಿಗೂ ಒಂದು ಮಿತಿಯನ್ನು ಕೊಟ್ಟಿದೆ. ಆ ಮಿತಿಯೊಳಗೆ ಬದುಕಿದಾಗ ಸಮತೋಲನ ಉಳಿಯುತ್ತದೆ. ಅದನ್ನು ಮೀರುವಾಗ ಅಸಮತೋಲನ ಆರಂಭವಾಗುತ್ತದೆ. ಇದೇ ನಿಯಮ ಆಹಾರಕ್ಕೂ ಅನ್ವಯಿಸುತ್ತದೆ. ಅತಿಯಾದ ಆಹಾರವೂ ಹಾನಿಕರ. ಅಗತ್ಯಕ್ಕಿಂತ ಕಡಿಮೆ ಆಹಾರವೂ ಹಾನಿಕರ. ದೇಹಕ್ಕೆ ಬೇಕಾದಷ್ಟನ್ನು, ಸರಿಯಾದ ಸಮಯದಲ್ಲಿ ಸೇವಿಸುವುದೇ ಆರೋಗ್ಯದ ಮೂಲಮಂತ್ರ.

news_1784304431_0_347.jpg

 

news_1784303691_4_779.jpg

 

ಮಾನವನ ನಾಲಿಗೆ ಕ್ಷಣಿಕ ಸಂತೋಷವನ್ನು ಬಯಸುತ್ತದೆ. ಆದರೆ ದೇಹವು ದೀರ್ಘಕಾಲದ ಆರೋಗ್ಯವನ್ನು ಬಯಸುತ್ತದೆ. ಈ ಸಂಘರ್ಷದಲ್ಲಿ ಅನೇಕ ಬಾರಿ ನಾಲಿಗೆಯೇ ಗೆಲ್ಲುತ್ತದೆ. ಅದರ ಪರಿಣಾಮವನ್ನು ದೇಹ  ಅನುಭವಿ ಸುತ್ತದೆ. ಕ್ಷಣಿಕ ಆಸೆಗಾಗಿ ಶಾಶ್ವತ ನೆಮ್ಮದಿಯನ್ನು ಕಳೆದುಕೊಳ್ಳುವುದು ವಿವೇಕವಲ್ಲ.

ಆಹಾರವು ಹೊಟ್ಟೆ ತುಂಬಿಸುವ ಸಾಧನವಲ್ಲ. ಅದು ಜೀವವನ್ನು ಪೋಷಿಸುವ ಶಕ್ತಿ. ನಾವು ತಿನ್ನುವ ಪ್ರತಿಯೊಂದು ಉಂಡೆಯೂ ದೇಹಕ್ಕೆ ಬಲ, ಮನಸ್ಸಿಗೆ ಚೈತನ್ಯ ನೀಡುತ್ತದೆ. ಆದ್ದರಿಂದ ಅನ್ನವನ್ನು ಗೌರವದಿಂದ ಸ್ವೀಕರಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಬೇಕು. ಅನ್ನವನ್ನು ವ್ಯರ್ಥ ಮಾಡದಿರುವುದು ನೈತಿಕ ಹೊಣೆಗಾರಿಕೆಯೂ ಹೌದು ಅಲ್ಲವೇ.

ಒಂದು ಅಕ್ಕಿ ಕಾಳಿನ ಹಿಂದೆ ರೈತನ ಬೆವರು, ಮಣ್ಣಿನ ಸಹನೆ, ಮಳೆಯ ಕೃಪೆ, ಸೂರ್ಯನ ಶಕ್ತಿ ಮತ್ತು ಅನೇಕ ಕೈಗಳ ಪರಿಶ್ರಮ ಅಡಗಿದೆ. ಕೃತಜ್ಞತೆಯಿಂದ ಸ್ವೀಕರಿಸಿದ ಆಹಾರ ಮನಸ್ಸನ್ನೂ ಪೋಷಿಸುತ್ತದೆ. ನಿರ್ಲಕ್ಷ್ಯದಿಂದ ಸ್ವೀಕರಿಸಿದ ಆಹಾರ ಹೊಟ್ಟೆಯನ್ನು ಮಾತ್ರ ತುಂಬಿಸುತ್ತದೆ.

ಆರೋಗ್ಯವೆಂದರೆ ರೋಗವಿಲ್ಲದ ಸ್ಥಿತಿ ಮಾತ್ರವಲ್ಲ. ಉತ್ಸಾಹ, ಸ್ಪಷ್ಟ ಚಿಂತನೆ, ಮಾನಸಿಕ ನೆಮ್ಮದಿ ಮತ್ತು ಕಾರ್ಯಶಕ್ತಿಯ ಸಮನ್ವಯವೇ ನಿಜವಾದ ಆರೋಗ್ಯ. ಮನಸ್ಸು ಮತ್ತು ದೇಹ ಒಂದಕ್ಕೊಂದು ಪೂರಕ. ಒಂದರ ಅಸ್ವಸ್ಥತೆ ಮತ್ತೊಂದರ ಮೇಲೂ ಪರಿಣಾಮ ಬೀರುತ್ತದೆ.

ಇಂದಿನ ಜೀವನದ ವೇಗವು ಮನುಷ್ಯನನ್ನು ಪ್ರಕೃತಿಯ ಲಯದಿಂದ ದೂರ ಮಾಡುತ್ತಿದೆ. ಸಮಯದ ಅಭಾವದಲ್ಲಿ ಅಸ್ತವ್ಯಸ್ತ ಆಹಾರ ಪದ್ಧತಿ ರೂಢಿಯಾಗುತ್ತಿದೆ. ಇದು ದೇಹದ ಸಹಜ ಕ್ರಮವನ್ನು ಹಾಳುಮಾಡುತ್ತದೆ. ಪ್ರಕೃತಿಯ ನಿಯಮಗಳನ್ನು ನಿರ್ಲಕ್ಷಿಸುವ ಪ್ರತಿಯೊಂದು ಹೆಜ್ಜೆಯೂ ಆರೋಗ್ಯದ ವಿರುದ್ಧದ ಹೆಜ್ಜೆಯಾಗಿದೆ.

ಸಂಯಮವು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅಗತ್ಯ. ಆಹಾರದಲ್ಲಿ ಸಂಯಮ ಇದ್ದರೆ ಆರೋಗ್ಯ ಬೆಳೆಯುತ್ತದೆ. ಮಾತಿನಲ್ಲಿ ಸಂಯಮ ಇದ್ದರೆ ಸಂಬಂಧಗಳು ಗಟ್ಟಿಯಾಗುತ್ತವೆ. ಆಲೋಚನೆಯಲ್ಲಿ ಸಂಯಮ ಇದ್ದರೆ ವಿವೇಕ ಬೆಳೆಯು ತ್ತದೆ.ಆಸೆಯಲ್ಲಿ ಸಂಯಮ ಇದ್ದರೆ ನೆಮ್ಮದಿ ನೆಲೆಸುತ್ತದೆ.

ಕುಟುಂಬದಲ್ಲಿ ಮಕ್ಕಳಿಗೆ ಆರೋಗ್ಯಕರ ಆಹಾರ ಪದ್ಧತಿ, ಅನ್ನದ ಗೌರವ ಮತ್ತು ಶಿಸ್ತಿನ ಜೀವನಶೈಲಿಯನ್ನು ಬಾಲ್ಯದಲ್ಲಿಯೇ ಕಲಿಸಬೇಕು. ಆಸ್ತಿ ಬಿಟ್ಟು ಹೋಗುವುದಕ್ಕಿಂತ ಆರೋಗ್ಯದ ಸಂಸ್ಕಾರವನ್ನು ಬಿಟ್ಟು ಹೋಗುವುದು ಶ್ರೇಷ್ಠ.

ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಆರೋಗ್ಯ ಸಲಹೆಗಳಿದ್ದರೂ, ಜೀವನದ ಅನುಶಾಸನಕ್ಕೆ ಪರ್ಯಾಯವಿಲ್ಲ. ಸರಳ ಆಹಾರ, ನಿಯಮಿತ ಜೀವನ, ಪರಿಶ್ರಮ, ವಿಶ್ರಾಂತಿ ಮತ್ತು ಸಂಯಮವನ್ನು ಯಾವ ಔಷಧಿಯೂ ಬದಲಾಯಿಸಲಾರದು.

ಆರೋಗ್ಯವಂತ ವ್ಯಕ್ತಿ ಕುಟುಂಬಕ್ಕೆ ಆಸರೆ. ಆರೋಗ್ಯವಂತ ಕುಟುಂಬ ಸಮಾಜಕ್ಕೆ ಬಲ. ಆರೋಗ್ಯವಂತ ಸಮಾಜ ರಾಷ್ಟ್ರದ ಶಕ್ತಿ. ಆದ್ದರಿಂದ ಆರೋಗ್ಯವನ್ನು ಕಾಪಾಡುವುದು ವೈಯಕ್ತಿಕ ಕರ್ತವ್ಯ ಮಾತ್ರವಲ್ಲ, ಸಾಮಾಜಿಕ ಹೊಣೆಗಾರಿಕೆಯೂ ಹೌದು.

ಇಂದಿನ ಪೀಳಿಗೆಗೆ ಅತ್ಯಗತ್ಯವಾದ ಪಾಠವೆಂದರೆ ಹದದ ಅರಿವು. ಆಹಾರದಲ್ಲಿ, ನಿದ್ರೆಯಲ್ಲಿ, ಮಾತಿನಲ್ಲಿ, ಆಸೆಯಲ್ಲಿ ಮತ್ತು ಸಂಪತ್ತಿನ ಬಳಕೆಯಲ್ಲಿ ಹದವಿದ್ದರೆ ಬದುಕು ಸಮತೋಲನವಾಗುತ್ತದೆ. ಅತಿಯಾದುದು ಯಾವತ್ತೂ ಹಿತಕರವಲ್ಲ ಎಂಬ ಪ್ರಕೃತಿಯ ಪಾಠವನ್ನು ಮರೆಯಬಾರದು.

ಆರೋಗ್ಯದ ದಾರಿ ದೊಡ್ಡ ಸಾಧನೆಗಳಿಂದಲ್ಲ, ಸಣ್ಣ ಅಭ್ಯಾಸಗಳಿಂದ ಆರಂಭವಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ನಿಧಾನವಾಗಿ ಜಗಿದು ತಿನ್ನುವುದು, ಆಹಾರವನ್ನು ವ್ಯರ್ಥ ಮಾಡದಿರುವುದು ಮತ್ತು ಪರಿಶ್ರಮಕ್ಕೆ ಜೀವನದಲ್ಲಿ ಸ್ಥಾನ ನೀಡುವುದು ಆರೋಗ್ಯದ ಭದ್ರ ಅಡಿಪಾಯ.

ಹದವನ್ನು ಅರಿತ ಬದುಕು ಕೇವಲ ಆರೋಗ್ಯವನ್ನಷ್ಟೇ ಅಲ್ಲ, ನೆಮ್ಮದಿ, ಚೈತನ್ಯ ಮತ್ತು ಸಮತೋಲನವನ್ನು ನೀಡುತ್ತದೆ. ಆದ್ದರಿಂದ ಆರೋಗ್ಯದ ಮಹಾ ಮಂತ್ರ ಒಂದೇ.ಹದವನ್ನು ಅರಿತು ಬದುಕುವುದು. ಹದವೇ ಆರೋಗ್ಯದ ಹೃದಯ. ಹದವೇ ಸಾರ್ಥಕ ಬದುಕಿನ ಶಾಶ್ವತ ಆಧಾರ.
ಲೇಖನ
:ಕಾಶಿಗೌ, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರು, ಮೈಸೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು