ಚಂದ್ರವಳ್ಳಿ ನ್ಯೂಸ್, ಮಾಲೂರು:
ದೇವೇಗೌಡರ ಕುಟುಂಬವನ್ನು ಅತಿಯಾಗಿ ನಿಂದಿಸಿದ್ದಕ್ಕಾಗಿಯೇ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಅವರಿಗೆ ಕಾಂಟ್ರಾಕ್ಟ್ ರೂಪದಲ್ಲಿ ಸಚಿವ ಸ್ಥಾನ ನೀಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಬಾಲಕೃಷ್ಣ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವೈಯಕ್ತಿಕ ನಿಂದನೆ ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಿ: ಸಚಿವ ಸ್ಥಾನ ಸಿಕ್ಕ ನಂತರ ಜನಸೇವೆ ಮಾಡುವುದನ್ನು ಬಿಟ್ಟು ಬಾಲಕೃಷ್ಣ ಅವರು ಮತ್ತೆ ದೇವೇಗೌಡರ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ನಿಂದನೆಯನ್ನು ಜನ ಸಹಿಸುವುದಿಲ್ಲ, ಅದರ ಬದಲು ಕೆಲಸ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲಿ ಎಂದು ಸವಾಲು ಹಾಕಿದರು.
ನೈಸ್ ಯೋಜನೆ ಅಕ್ರಮ ಬಹಿರಂಗ: ನೈಸ್ ಯೋಜನೆಯಲ್ಲಿ ನಡೆದಿರುವ ಅಕ್ರಮಗಳಿಂದಾಗಿ ರೈತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ಈ ಯೋಜನೆಯಲ್ಲಿನ ಅಕ್ರಮಗಳನ್ನು ಇನ್ನು ಒಂದು ವಾರದೊಳಗೆ ಬಹಿರಂಗಪಡಿಸಲಿದ್ದು, ಸಂತ್ರಸ್ತ ರೈತರಿಗೆ ನ್ಯಾಯ ಕೊಡಿಸಲು ನಿರಂತರ ಹೋರಾಟ ನಡೆಸಲಾಗುವುದು ಎಂದರು.
ಕೇಂದ್ರ ಸಚಿವರಿಗೆ ರಾಜ್ಯ ಸರ್ಕಾರದ ಅಸಹಕಾರ: ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರ ಸೂಕ್ತ ಭೂಮಿ, ವಿದ್ಯುತ್ ಹಾಗೂ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸದೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.




