ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಜೊತೆಗೆ ಕಾಯಕ ನಿಷ್ಠೆಯಿಂದ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ನೇಕಾರ ಸಹೋದರ-ಸಹೋದರಿಯರ ಹಿತರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಶುಕ್ರವಾರ ನಗರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ನೇಕಾರ ಪ್ರಕೋಷ್ಠ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಧಕ ನೇಕಾರರನ್ನು ಸನ್ಮಾನಿಸಿ ಅವರು ಮಾತನಾಡಿದರು.
"ಪೀಳಿಗೆಯಿಂದ ಪೀಳಿಗೆಗೆ ನೇಯಲಾಗುವ ಪ್ರತಿಯೊಂದು ನೂಲಿನಲ್ಲೂ ಭಾರತೀಯತೆಯ ಜೀವಂತಿಕೆ ಹಾಗೂ ಕಲಾತ್ಮಕತೆಯ ಸ್ಪರ್ಶವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಕರೆಗೆ ಓಗೊಟ್ಟು, ನಮ್ಮ ಸ್ವದೇಶಿ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಎಸ್. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಪ್ರಮುಖ ನಾಯಕರು ಹಾಗೂ ನೇಕಾರ ಬಂಧುಗಳು ಭಾಗವಹಿಸಿದ್ದರು.



