ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ಎನ್.ಜಿ. ಹಳ್ಳಿ (ನಾರಾಯಣಗೊಂಡನಹಳ್ಳಿ) ಉಪಕೇಂದ್ರದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿದ್ಯುತ್ ಪ್ರಸರಣ ಮಾರ್ಗವನ್ನು ಆಗಸ್ಟ್ 8 ರಿಂದ ಚೇತನಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಕೆಪಿಟಿಸಿಎಲ್ ತಿಳಿಸಿದೆ.
ಕೆಪಿಟಿಸಿಎಲ್ ವತಿಯಿಂದ 1X12.5MVA, 66/11 ಕೆವಿ ವಿದ್ಯುತ್ ಉಪಕೇಂದ್ರ ಮತ್ತು ಹಾಲಿ ಇರುವ 66 ಕೆವಿ ರಾಮಗಿರಿ - ಹೊಸದುರ್ಗ ಜೋಡಿ ಪ್ರಸರಣ ಮಾರ್ಗದಿಂದ 66/11 ಕೆವಿ ಎನ್.ಜಿ. ಹಳ್ಳಿ ವಿದ್ಯುತ್ ಉಪಕೇಂದ್ರದವರೆಗೆ 4.542 ಕಿ.ಮೀ ಉದ್ದದ 66 ಕೆವಿ ಜೋಡಿ ಪ್ರಸರಣ ಮಾರ್ಗದ ‘ಟೋಟಲ್ ಟರ್ನ್‍ಕೀ' ಕಾಮಗಾರಿ ಪೂರ್ಣಗೊಂಡಿದೆ.
ದಿನಾಂಕ 08-08-2026 ರಂದು ಅಥವಾ ತದನಂತರ ಈ 66 ಕೆವಿ ವಿದ್ಯುತ್ ಮಾರ್ಗವನ್ನು ಚೇತನಗೊಳಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ವಿದ್ಯುತ್ ಗೋಪುರಗಳನ್ನು ಮುಟ್ಟುವುದು, ಹತ್ತುವುದು, ಮರದ ರೆಂಬೆ ಅಥವಾ ಲೋಹದ ತಂತಿಗಳನ್ನು ಮಾರ್ಗದ ಮೇಲೆ ಎಸೆಯುವುದು ಮಾಡಬಾರದು. ಅಲ್ಲದೆ, ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟಬಾರದು ಎಂದು ಎಚ್ಚರಿಸಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಮಾರ್ಗದ ಮೊಗಸಾಲೆಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗುವುದು. ಈ ಸೂಚನೆಯನ್ನು ಉಲ್ಲಂಘಿಸಿ ನಡೆಯುವ ಅನಾಹುತ, ಹಾನಿ ಅಥವಾ ತೊಂದರೆಗಳಿಗೆ ಕೆಪಿಟಿಸಿಎಲ್ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲ.
ಈ ಪ್ರಸರಣ ಮಾರ್ಗವು ಜಕ್ಕನಹಳ್ಳಿ, ಗೌಡಹಳ್ಳಿ, ಹೊಸಹಟ್ಟಿ, ನಾರಾಯಣಗೊಂಡನಹಳ್ಳಿ ಮತ್ತು ಆರ್. ಗೊಲ್ಲರಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳ ಮೂಲಕ ಹಾದುಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯೋಜನೆಗಳ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.



