Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಮ್ಮ ದೇಶದಲ್ಲಿ ಕರ್ನಾಟಕದಲ್ಲಿ ಶೇ.79ರಷ್ಟು ಅಡಿಕೆ ಬೆಳೆ ಬೆಳೆಯುತ್ತಿದ್ದು
, ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥರಾದ ಡಾ.ನಾಗರಾಜ್ ಅಡಿವಪ್ಪರ್ ಹೇಳಿದರು.


ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಅಡಿಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ ಹಾಗೂ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಡಿಕೆ ಬೆಳೆಗೆ ನೀರು ಬಸಿದು ಹೋಗುವ ಕೆಂಪು ಮಣ್ಣು ಸೂಕ್ತವಾಗಿದ್ದು, ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣಿನ ಪ್ರದೇಶಗಳು ಅಡಿಕೆಗೆ ಸೂಕ್ತವಲ್ಲ. ಮಣ್ಣಿನ ರಸಸಾರ 6 ರಿಂದ 7 ಸೂಕ್ತ. ಅಡಿಕೆಯನ್ನು 9*9 ಅಡಿ ಅಂತರದಲ್ಲಿ 2*2*2 ಅಡಿ ಅಳತೆಯ ಗುಂಡಿಯಲ್ಲಿ ನಾಟಿ ಮಾಡುವುದು ಸೂಕ್ತವೆಂದರು. ಅಡಿಕೆಯಲ್ಲಿ ಅಂತರ ಬೆಳೆಯಾಗಿ ಬಾಳೆ, ವೀಳ್ಯೆದೆಳೆ, ಜಾಯಿಕಾಯಿ, ಅರಿಶಿಣ ಮತ್ತು ಕರಿಮೆಣಸು ಚಿತ್ರದುರ್ಗ ಜಿಲ್ಲೆಗೆ ಸೂಕ್ತವಾಗಿದೆ ಎಂದು ಹೇಳಿದರು.

ತೋಟಗಾರಿಕೆ ತಜ್ಞ ಡಾ.ಸುದೀಪ್ ಮಾತನಾಡಿ, ಅಡಿಕೆಯ ವಿವಿಧ ತಳಿಗಳು ಮತ್ತು ವಿಶೇಷತೆ ಗುಣಗಳು, ಸಸ್ಯಾಭಿವೃದ್ದಿಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ, ಹಸಿರೆಲೆ ಗೊಬ್ಬರದ ನಿರ್ವಹಣೆ, ಹಾಗೂ ನೀರು ಮತ್ತು ಬಸಿಗಾಲುವೆಯ ನಿರ್ವಹಣೆ ಕುರಿತು ತಿಳಿಸಿದರು.

ರೋಗಶಾಸ್ತ್ರಜ್ಞ ಡಾ.ಕಿರಣ್ ಅವರು, ಅಡಿಕೆಯಲ್ಲಿ ಬರುವ ಪ್ರಮುಖ ರೋಗಗಳಾದ ಸುಳಿ ಕೊಳೆ, ಹಿಂಗಾರು ಒಣಗುವ ರೋಗ, ದುಂಡಾಣು ಎಲೆ ಪಟ್ಟಿ ರೋಗ, ಅಣಬೆ ರೋಗ, ಎಲೆ ಚುಕ್ಕಿ ಮತ್ತು ಹಿಡಿಮುಂಡಿಗೆ ಲಕ್ಷಣ ಮತ್ತು ನಿರ್ವಹಣೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಹಿರಿಯೂರು ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರು ಅಡಿಕೆಯನ್ನು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದು,

ಈ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉತ್ತಮ ತಳಿಗಳ ಆಯ್ಕೆ, ಬೇಸಾಯ ಕ್ರಮ, ಫೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆಯ ತಾಂತ್ರಿಕ ಮಾಹಿತಿ ಅಗತ್ಯವಿದೆ. ಇದಲ್ಲದೆ ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್  ಮಾಡುವ ವಿಧಾನದ ಮಾಹಿತಿಯೊಂದಿಗೆ ಪ್ತಾತ್ಯಕ್ಷಿಕೆ ಮಾಡುವುದು ಸಹ ಈ ತರಬೇತಿಯ ಪ್ರಮುಖ ವಿಷಯವಾಗಿದ್ದು, ಇದರಿಂದ ಅಡಿಕೆ ಸಿಪ್ಪೆಯನ್ನು ಎಲ್ಲೆಂದರಲ್ಲೆ ಬಿಸಾಕುವುದು ಹಾಗೂ ಇದರಿಂದಾಗುವ ಅವಘಡಗಳನ್ನು ತಪ್ಪಿಸಲು ಮತ್ತು ರೈತರು ಸ್ವತಃ ತಮ್ಮ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದಾಗಿರುವುದರಿಂದ ಈ ತರಬೇತಿಯು ಸಹಕಾರಿಯಾಗಲಿದೆ ಎಂದರು.

ಕೀಟಶಾಸ್ತ್ರ ತಜ್ಞೆ ಡಾ.ಸ್ವಾತಿ ಅವರು, ಪ್ರಮುಖ ಕೀಟಗಳಾದ ನುಸಿ, ರುಗೋಸ್ ಸುರಳಿ ಸುತ್ತುವ ಬಿಳಿನೊಣ, ಸುಳಿ ತಿಗಣೆ, ಹಿಂಗಾರು ತಿನ್ನುವ ಹುಳುಗಳ ಹಾನಿಯ ಲಕ್ಷಣ ಮತ್ತು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸುವ ವಿಧಾನದ ಕುರಿತು ವಿಷಯ ಮಂಡನೆ ಮಾಡಿದರು. ತದನಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ,

ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ರೈತರಿಗೆಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ವಿಧಾನವನ್ನು ಕಾಂಪೋಸ್ಟ್ ಘಟಕದಲ್ಲಿ ತೆಳುವಾಗಿ ಒಣ ಎಲೆ, ಕೆಂಪು ಮಣ್ಣು ಹರಡಿ ಅದರ ಮೇಲೆ 1/3 ಭಾಗ ಅಡಿಕೆ ಸಿಪ್ಪೆ ತುಂಬಿ ನಂತರ 1 ಕೆಜಿ ಸೂಕ್ಷ್ಮ ಜೀವಿಗಳ ಮಿಶ್ರಣ (ಕಾಂಪೋಸ್ಟ್ ಕಲ್ಚರ್), ಸಗಣಿ ಬಗ್ಗಡ ಸಿಂಪಡಿಸಿ ಪುನಃ 2 ಬಾರಿ ಮೇಲಿನಂತೆ ಕ್ರಮಗಳನ್ನು ಅನುಸರಿಸಿ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು. ಈ ಕಾಂಪೋಸ್ಟ್ ಘಟಕದ ಮೇಲ್ಬಾಗವನ್ನು ತೆಂಗಿನ ಗರಿಯಿಂದ ಮುಚ್ಚಿ ಅಥವಾ ಚಪ್ಪರ ಹಾಕಿ 2-3 ದಿನಗಳಿಗೊಮ್ಮೆ ನೀರನ್ನು ಹಾಕಿ ತೇವಾಂಸವನ್ನು ಕಾಪಾಡಿಕೊಳ್ಳಬೇಕು.

ತಿಂಗಳಿಗೊಮ್ಮೆ 3 ತಿಂಗಳವರೆಗೆ ಗುದ್ದಲಿ ಸಹಾಯದಿಂದ ಅಡಿಕೆ ಸಿಪ್ಪೆಯನ್ನು ತಿರುವಿ ಹಾಕಬೇಕು. 3 ತಿಂಗಳ ನಂತರ 20*5*5 ಅಡಿ ಇರುವ ಘಟಕಕ್ಕೆ 5 ಕೆಜಿ ಎರೆಹುಳು ಬಿಡಬೇಕು. ಪ್ರತಿ ವಾರ ತೆಳುವಾಗಿ ಸಗಣಿ ಬಗ್ಗಡ ಹಾಕಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು. ಎರೆಹುಳು ಹಾಕಿದ ನಂತರ ಯವುದೇ ರೀತಿಯ ಮಿಶ್ರಣ ಮಾಡಬಾರದು. ಮಳೆಗಾಲದಲ್ಲಿ ನೀರು ನಿಂತರೆ ಕೆಳಭಾಗದಲ್ಲಿ ಒಂದು ಪೈಪ್ ಹಾಕಿ ಹೆಚ್ಚಾದ ನೀರನ್ನು ತೆಗೆಯಬೇಕು. ಈ ರೀತಿ ಮೇಲಿನ ಎಲ್ಲ ಪ್ರಕ್ರಿಯೆಗಳನ್ನು ಮಾಡಿದರೆ 6 ತಿಂಗಳಲ್ಲಿ ಉತ್ಕ್ರಷ್ಟವದ ಗೊಬ್ಬರ ತಯಾರಾಗುತ್ತದೆಂದರು.

ನಂತರ ತರಬೇತಿಯ ಅಂಗವಾಗಿ ರೈತರಿಗೆ ತುಮಕೂರು ಜಿಲ್ಲೆಯ ಬೆಳ್ಳಾವಿ ಕ್ರಾಸ್ ಹತ್ತಿರವಿರುವ ಕುರಿಕೆಂಪನಹಳ್ಳಿ ಗ್ರಾಮದ ಹಫಿಜ್ ಉಲ್ಲಾಖಾನ್ ಇವರ ನೈಸರ್ಗಿಕ ಕೃಷಿಯಲ್ಲಿ ಅಡಿಕೆ ತೋಟದಲ್ಲಿ ಅಂತರ ಮತ್ತು ಮಿಶ್ರ ಬೆಳೆಯಾಗಿ ಜಾಕಾಯಿ, ಅರಿಶಿಣ, ಕರಿಮೆಣಸುಬೆಳೆದ ತಮ್ಮ ಅನುಭವವನ್ನು ಹಂಚಿ ಕೊಂಡರು. ನಂತರ ಮಷಣಾಪುರ ಗ್ರಾಮದ ಮೃತ್ಯುಂಜಯಪ್ಪ ಮತ್ತು ಚನ್ನಕೇಶವಸ್ವಾಮಿ ಇವರ 100 ಕ್ಕೂ ಅಧಿಕ ಹಣ್ಣು ಮತ್ತು ಸಂಬಾರು ಬೆಳೆಯನ್ನು ತೆಂಗಿನಲ್ಲಿ ಅಂತರ ಬೆಳೆಯನ್ನು ಬೆಳೆದ ತಮ್ಮ ಯಶೋಗಾಥೆಯನ್ನು ಆಗಮಿಸಿದ ರೈತರಿಗೆ ವಿವರಿಸಿದರು.

ತುಮಕೂರಿನ ಮಲ್ಟಿಪ್ಲೇಕ್ಸ್ ಬಯೋಟೆಕ್ ಪ್ರೈವೇಟ್ ಲಿನ ತಾಂತ್ರಿಕ ಮುಖ್ಯಸ್ಥರಾದ ಕುಮಾರ್ ಅವರು ಸಾವಯವ ಕೃಷಿಯ ಅವಶ್ಯಕತೆ, ಕೃಷಿಯಲ್ಲಿ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಣು ಜೀವಿಗಳ ಪಾತ್ರ, ಜೈವಿಕಗೊಬ್ಬರಗಳಾದ ಅಝಟೋಬ್ಯಾಕ್ಟರ್, ರೈಜೋಬಿಯಂ, ಪಿಎಸ್‍ಬಿ, ಎನ್‍ಪಿಕೆ ಕನ್ಸರ್‍ಷಿಯಾ ಹಾಗೂ ವಿವಿಧ ಜೈವಿಕ ಪೀಡೆನಾಶಕಗಳಾದ ಟ್ರೈಕೋಡರ್ಮ , ಸುಡೋಮೊನಾಸ್ ಗಳ ಪಾತ್ರ ಮತ್ತು ಕೃಷಿಯಲ್ಲಿ ಇವುಗಳ ಮಹತ್ವ ಕುರಿತು ಮಾಹಿತಿನೀಡಿ ಸೂಕ್ಷ್ಮ ದರ್ಶಕದಲ್ಲಿಯೂ ಸಹ ಇವುಗಳನ್ನು ರೈತರು ವೀಕ್ಷಿಸಲು ಅವಕಾಶ ಮಾಡಿದರು. ಇದರಿಂದ ರೈತರಲ್ಲಿ ಅನಾವಶ್ಯಕವಾಗಿ ಮಣ್ಣಿಗೆ ರಸಾಯನಿಕ ಗೊಬ್ಬರ ಮತ್ತು ವಿವಿಧ ಪೀಡನಾಶಕಗಳನ್ನು ಬಳಸಿದರೆ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಜೀವಿಗಳು ನಶಿಸಿ ಹೋಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆಂದು ಮನದಟ್ಟಾಯಿತು. ಈ ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 50 ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ