ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಡೆಸಿರುವ ದಾಳಿಯು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಇದು ಸಂಪೂರ್ಣವಾಗಿ 'ರಾಜಕೀಯ ಪ್ರೇರಿತ' ಹಾಗೂ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ನಡೆಸುತ್ತಿರುವ 'ಟಾರ್ಗೆಟ್ ಪಾಲಿಟಿಕ್ಸ್' ಎಂದು ಕಾಂಗ್ರೆಸ್ ಪಕ್ಷ ತೀವ್ರವಾಗಿ ಕಿಡಿಕಾರಿದೆ. ಮತ್ತೊಂದೆಡೆ, ಇದು ಕಾನೂನು ಪ್ರಕಾರ ನಡೆಯುತ್ತಿರುವ ತನಿಖೆಯಷ್ಟೇ ಎಂದು ಬಿಜೆಪಿ ವಾದ ಮಂಡಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಇಡಿ ಬಲೆಗೆ ಬಿದ್ದಿರುವ ಪ್ರಮುಖ ಕಾಂಗ್ರೆಸ್ ನಾಯಕರು ಹಾಗೂ ಶಾಸಕರ ಪಟ್ಟಿ ಇಲ್ಲಿದೆ.
ಪ್ರಮುಖ ನಾಯಕರು ಮತ್ತು ಸಚಿವರ ಮೇಲೆ ಇಡಿ ಕಣ್ಣು:
ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಮತ್ತು ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿದ್ದರು. ಡಿಕೆಶಿ ಅವರ ಬಂಧನ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಸಿದ್ದರಾಮಯ್ಯ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಮುಡಾ ಹಗರಣದ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆಯ ಹಾದಿ ಹಿಡಿದಿದ್ದರು.
ಜಿ. ಪರಮೇಶ್ವರ್: ಆಗಿನ ಸಚಿವರು ಹಾಗೂ ಪ್ರಸ್ತುತ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳು ಹಾಗೂ ನಿವಾಸಗಳ ಮೇಲೆ 2025ರಲ್ಲಿ ಇಡಿ ಅಧಿಕಾರಿಗಳು ಮುಗಿಬಿದ್ದು ದಾಳಿ ನಡೆಸಿದ್ದರು.
ಬಿ.ಝೆಡ್. ಜಮೀರ್ ಅಹಮದ್ ಖಾನ್: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರ ಬೆಂಗಳೂರಿನ ನಿವಾಸದ ಮೇಲೆ ಆಗಸ್ಟ್ 5, 2021ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಬಿ. ನಾಗೇಂದ್ರ ಮತ್ತು ಇ. ತುಕಾರಾಮ್: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಸಂಸದ ಇ. ತುಕಾರಾಮ್ ಅವರ ಮನೆಗಳ ಮೇಲೆ ಇಡಿ ಏಕಕಾಲಕ್ಕೆ ದಾಳಿ ನಡೆಸಿತ್ತು. ಈ ಪ್ರಕರಣದಲ್ಲಿ ಪ್ರಮುಖವಾಗಿ ಬಿ. ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.
ಹಲವು ಶಾಸಕರ ಮೇಲೂ ಇಡಿ ಮುನಿಸು:
ಕೇವಲ ಸಚಿವರು ಮತ್ತು ಉನ್ನತ ನಾಯಕರು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಹಾಗೂ ಪ್ರಮುಖರ ಮೇಲೂ ಇಡಿ ನೆರಳು ಮುಂದುವರಿದಿದೆ.
ಶಾಸಕ ಬಸನಗೌಡ ದದ್ದಲ್, ಶಾಸಕ ಸತೀಶ್ ಸೈಲ್, ಶಾಸಕ ಎನ್.ಎ. ಹ್ಯಾರಿಸ್, ಶಾಸಕ ನಾರಾ ಭರತ್ ರೆಡ್ಡಿ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಶಾಸಕ ಕೆ.ಸಿ. ವೀರೇಂದ್ರ.
ಹೀಗೆ ಸಾಲು ಸಾಲು ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಶಾಸಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಯಾದ ಇಡಿ ದಾಳಿ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ. ವಿರೋಧ ಪಕ್ಷದವರನ್ನು ಗುರಿಯಾಗಿಸಿಕೊಂಡೇ ಕೇಂದ್ರ ಸರ್ಕಾರ ಈ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಈ ಹಿಂದೆ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿ ತೀವ್ರ ಆಕ್ರೋಶ ಹೊರಹಾಕಿತ್ತು. ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಇತ್ತೀಚಿನ ದಾಳಿಯೊಂದಿಗೆ ಈ ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ.




