ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ಮಿತ್ರಪಕ್ಷ ಡಿಎಂಕೆಗೆ ಕೈಕೊಟ್ಟು, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿರುವ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಯಾವುದೇ ಸಿದ್ಧಾಂತವಿಲ್ಲ, ಅಧಿಕಾರವೇ ಅದರ ಪರಮ ಗುರಿ ಎಂದು ಟೀಕಿಸಿದರು.
ಕಾಂಗ್ರೆಸ್ ಅಸಲಿ ಬಣ್ಣ ಬಯಲು: ಮೈತ್ರಿ ದ್ರೋಹ: "ಕಾಂಗ್ರೆಸ್ ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಚಾಳಿ ಹೊಂದಿದೆ. ಚುನಾವಣೆಯಲ್ಲಿ ಡಿಎಂಕೆಗೆ ಸೋಲಾಗುತ್ತಿದ್ದಂತೆ, ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಟಿವಿಕೆ ಬೆಂಬಲಕ್ಕೆ ನಿಂತಿದೆ. ಇದು ಡಿಎಂಕೆಗೆ ಮಾಡಿದ ದೊಡ್ಡ ದ್ರೋಹ," ಎಂದು ಅಶೋಕ್ ಕಿಡಿಕಾರಿದರು.
ಇಂಡಿ ಒಕ್ಕೂಟಕ್ಕೆ ಎಚ್ಚರಿಕೆ: ಬೆನ್ನಿಗೆ ಚೂರಿ ಹಾಕುವುದು ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ಇದನ್ನು ಕಂಡು 'ಇಂಡಿ' ಒಕ್ಕೂಟದ ಇತರ ಪಕ್ಷಗಳು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಹುಲ್ ಗಾಂಧಿಗೆ 'ಬ್ರೇನ್ ಮ್ಯಾಪಿಂಗ್' ಅಗತ್ಯ!:
ಚುನಾವಣಾ ಅಕ್ರಮಗಳ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರ ಹೇಳಿಕೆಗಳಿಗೆ ಅಶೋಕ್ ವ್ಯಂಗ್ಯವಾಡಿದ್ದಾರೆ.
ಇವಿಎಂ ದ್ವಂದ್ವ: "ಸೋತರೆ ಇವಿಎಂ ತೊಂದರೆ, ಗೆದ್ದರೆ ಎಲ್ಲವೂ ಸರಿ ಎನ್ನುವುದು ಕಾಂಗ್ರೆಸ್ ವಾದ. ರಾಹುಲ್ ಗಾಂಧಿ ಅವರಿಗೆ ಅಸ್ಸಾಂನಲ್ಲಿ ಮತಗಳ್ಳತನ ಕಂಡರೆ ಕೇರಳದಲ್ಲಿ ಪ್ರಜಾಪ್ರಭುತ್ವ ಕಾಣುತ್ತದೆ. ಅವರ ಇಂತಹ ಗೊಂದಲದ ಹೇಳಿಕೆಗಳನ್ನು ನೋಡಿದರೆ ಅವರಿಗೆ ಬ್ರೇನ್ ಮ್ಯಾಪಿಂಗ್ ಮಾಡಿಸುವುದು ಅನಿವಾರ್ಯ ಎನಿಸುತ್ತಿದೆ," ಎಂದರು.
ಡಕಾಯಿತಿ ಆರೋಪ: ಶೃಂಗೇರಿಯಲ್ಲಿ ಮತ ಡಕಾಯಿತಿಯಾಗಿದೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಯಾರು ವೋಟ್ ಚೋರಿ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ, ಡಕಾಯಿತಿ ಬಗ್ಗೆ ನಿರ್ಧರಿಸಲು ನ್ಯಾಯಾಲಯವಿದೆ," ಎಂದು ಉತ್ತರಿಸಿದರು.
ಡಿಕೆಶಿ 'ಶಿಲೆ'ಯೋ ಅಥವಾ 'ಮೆಟ್ಟಿಲೋ'?:
ರಾಜ್ಯ ರಾಜಕೀಯದ ಸಿಎಂ ಬದಲಾವಣೆ ಚರ್ಚೆಯ ಬಗ್ಗೆಯೂ ಅಶೋಕ್ ಲೇವಡಿ ಮಾಡಿದರು.
"ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ಕೇಳಿಬರುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳು ಮೌನವಾಗಿವೆ. ಕೆತ್ತಿದರೆ ಶಿಲ್ಪಿಯಾಗುವೆ ಎಂದಿದ್ದ ಕನಕಪುರ ಬಂಡೆ (ಡಿಕೆಶಿ) ಒಂದು ವರ್ಷದಿಂದ ಕೆತ್ತಿಸಿಕೊಳ್ಳುತ್ತಲೇ ಇದ್ದಾರೆ. ಆ ಶಿಲೆ ಶಿಲ್ಪಿಯಾಗುವ ಬದಲು ವಿಧಾನಸೌಧದ ಮೆಟ್ಟಿಲಾದರೆ ಸಾಕು."
ತಮಿಳುನಾಡಿನಲ್ಲಿ ಧಗಧಗಿಸುತ್ತಿದೆ 'ಕೈ' ದ್ರೋಹದ ಕಿಚ್ಚು:
ಇತ್ತ ತಮಿಳುನಾಡಿನಲ್ಲಿ ಕಾಂಗ್ರೆಸ್ ವಿರುದ್ಧ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಕಿಡಿಕಾರಿದ್ದಾರೆ. "ಚುನಾವಣಾ ಪ್ರಕ್ರಿಯೆ ಮುಗಿಯುವ ಮುನ್ನವೇ ಕಾಂಗ್ರೆಸ್ ನಿಷ್ಠೆ ಬದಲಿಸಿದೆ. ಕೇವಲ 2 ಸಚಿವ ಸ್ಥಾನಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಬಲಿ ಕೊಡಲು ಹೊರಟಿದೆ. ಇದು ತಮಿಳುನಾಡಿನ ಜನತೆಗೆ ಮಾಡಿದ ದ್ರೋಹ," ಎಂದು ಅವರು ಗುಡುಗಿದ್ದಾರೆ.
ತಮಿಳುನಾಡಿನ ಮೈತ್ರಿ ಬಿರುಕು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗದೆ, ದಕ್ಷಿಣ ಭಾರತದಾದ್ಯಂತ ಕಾಂಗ್ರೆಸ್‌ನ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಅಧಿಕಾರಕ್ಕಾಗಿ ಹಳೆಯ ಮಿತ್ರನನ್ನು ಬಿಟ್ಟು ಹೊಸ ಮಿತ್ರನನ್ನಪ್ಪಿಕೊಂಡ ಕಾಂಗ್ರೆಸ್ ನಡೆಗೆ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.


