ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಕೇವಲ ವೋಟ್ ಬ್ಯಾಂಕ್ ತುಷ್ಟೀಕರಣ ಮತ್ತು ಕ್ಷುಲ್ಲಕ ಓಲೈಕೆ ರಾಜಕೀಯಕ್ಕಾಗಿ ದೇಶದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಕಾಂಗ್ರೆಸ್ ನಾಯಕರು ಹೀಯಾಳಿಸುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ಶತ ಶತಮಾನಗಳಿಂದ ಬೆಳೆದುಬಂದ ನಾಗರಿಕತೆಯ ಮೂಲಬೇರುಗಳನ್ನು ಹೀಯಾಳಿಸಿ, ಮತಬ್ಯಾಂಕ್‌ಗಾಗಿ ಹಿಂದುತ್ವವನ್ನು ವ್ಯಾಖ್ಯಾನಿಸುವ ಇಂತಹ ಕುತಂತ್ರದ ಯತ್ನಗಳು ಖಂಡನೀಯ. 'ಹಿಂದುತ್ವ ಎಂದರೆ ಜೀವನ ವಿಧಾನ' ಎಂದು ಸರ್ವೋಚ್ಚ ನ್ಯಾಯಾಲಯವೇ ಸ್ಪಷ್ಟಪಡಿಸಿದೆ" ಎಂದು ತಿರುಗೇಟು ನೀಡಿದರು.
"ಸಿಂಧು-ಸರಸ್ವತಿ ನಾಗರಿಕತೆಯಿಂದ ಹಿಡಿದು ರಾಮಾಯಣ, ಮಹಾಭಾರತದ ಮೌಲ್ಯಗಳು ಈ ನೆಲದ ಜನಮಾನಸದಲ್ಲಿ ಜೀವಂತವಾಗಿವೆ. ರಾಷ್ಟ್ರಗೀತೆ, 'ವಂದೇ ಮಾತರಂ' ಹಾಗೂ 'ಸತ್ಯಮೇವ ಜಯತೇ' ಧ್ಯೇಯವಾಕ್ಯಗಳೆಲ್ಲವೂ ದೇಶದ ಗಟ್ಟಿ ಸಾಂಸ್ಕೃತಿಕ ಬೇರುಗಳಿಗೆ ಸಾಕ್ಷಿಯಾಗಿವೆ. ಕಾಂಗ್ರೆಸ್‌ನವರು ತಮ್ಮ ಕೀಳು ಓಲೈಕೆಯ ಅಜೆಂಡಾಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದನ್ನು ಬಿಡಬೇಕು" ಎಂದು ಹೇಳಿದರು.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, "ತಮ್ಮ ಆಡಳಿತ ವೈಫಲ್ಯ, ಭ್ರಷ್ಟಾಚಾರ, ರೈತ ವಿರೋಧಿ ನೀತಿ ಹಾಗೂ ಅಭಿವೃದ್ಧಿ ಶೂನ್ಯತೆಯನ್ನು ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿಂದೂ ಸಮುದಾಯದ ನಂಬಿಕೆಗಳಿಗೆ ಅಪಮಾನ ಮಾಡುತ್ತಿರುವ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ" ಎಂದು ಎಚ್ಚರಿಸಿದರು.



