ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕೇವಲ ಕಾನೂನುಬದ್ಧ ಕರ್ತವ್ಯವಾಗಿ ಉಳಿಯದೆ, ರಾಷ್ಟ್ರ ನಿರ್ಮಾಣದ ಪರಿಣಾಮಕಾರಿ ಸಾಧನವಾಗಬೇಕು. ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಹೆಚ್ಚಿನ ಕಾರ್ಪೊರೇಟ್ ಸಂಸ್ಥೆಗಳು ಕೈಜೋಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು 'ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನದ (One World One Family Mission) ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಿಎಸ್ಆರ್ ಸಮಾವೇಶ–2026ರ ಸಮಾರೋಪ ಸಮಾರಂಭದಲ್ಲಿ ಗುರುವಾರ ಆಶೀರ್ವಚನ ನೀಡಿದ ಅವರು, ಭಾರತದ ನಾಗರಿಕತೆ ಪ್ರೀತಿ, ಸೇವೆ ಹಾಗೂ ಮಾನವೀಯ ಮೌಲ್ಯಗಳ ಮೇಲೆ ನೆಲೆಗೊಂಡಿದೆ. ಈ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸರ್ಕಾರ, ಕೈಗಾರಿಕೆಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಆಧ್ಯಾತ್ಮಿಕ ಅಡಿಪಾಯ ಹೊಂದಿರುವ ಭಾರತದಲ್ಲಿ ಪಾರದರ್ಶಕತೆ ಮತ್ತು ಉತ್ತಮ ಆಡಳಿತದೊಂದಿಗೆ ಸಿಎಸ್ಆರ್ ಅನುಷ್ಠಾನಗೊಂಡಾಗ ಮಾತ್ರ ಸಮಾಜದಲ್ಲಿ ಶಾಶ್ವತ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು.
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಆಶೀರ್ವಾದದಿಂದ ಒಂದು ಜಗತ್ತು ಒಂದು ಕುಟುಂಬ ಮಿಷನ್ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಸಂಸ್ಥೆಗೆ ಶೇ.70ರಷ್ಟು ಆರ್ಥಿಕ ನೆರವು ಅನಿವಾಸಿ ಭಾರತೀಯರಿಂದ ಹಾಗೂ 150ಕ್ಕೂ ಹೆಚ್ಚು ಕಂಪನಿಗಳಿಂದ ದೊರೆಯುತ್ತಿದೆ. 2047ರೊಳಗೆ ವಿಕಸಿತ ಭಾರತ ನಿರ್ಮಿಸುವ ಗುರಿಯನ್ನು ಅದಕ್ಕೂ ಮುನ್ನವೇ ಸಾಧಿಸಬೇಕು. ದೇಶದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಹಾಗೂ ಆಹಾರ ತಲುಪಿಸುವುದು ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದರು. ಸೂಕ್ತ ಸಹಭಾಗಿತ್ವದ ಕೊರತೆಯಿಂದ ಹಲವು ಕಂಪನಿಗಳ ಸಿಎಸ್ಆರ್ ನಿಧಿ ಬಳಕೆಯಾಗದೆ ಉಳಿಯುತ್ತಿರುವುದು ವಿಷಾದನೀಯ ಎಂದರು.
ಭಗವದ್ಗೀತೆಯಲ್ಲಿರುವ ಯಜ್ಞ, ದಾನ ಮತ್ತು ತಪಸ್ಸು ತತ್ವಗಳನ್ನು ಕಾರ್ಪೊರೇಟ್ ಆಡಳಿತಕ್ಕೆ ಹೋಲಿಸಿದ ಅವರು, ಯಜ್ಞವು ಉತ್ಪಾದಕತೆ, ದಾನವು ಸಮಾಜಸೇವೆ ಹಾಗೂ ತಪಸ್ಸು ಉತ್ತಮ ಆಡಳಿತದ ಪ್ರತೀಕವಾಗಿದೆ. ಈ ಮೌಲ್ಯಗಳನ್ನು ಅಳವಡಿಸಿಕೊಂಡಾಗ ವ್ಯವಹಾರ ಮತ್ತು ಸೇವೆ ಎರಡೂ ಯಶಸ್ವಿಯಾಗುತ್ತವೆ ಎಂದು ಹೇಳಿದರು.
"ಮಕ್ಕಳ ಮೇಲಿನ ವೆಚ್ಚ ಖರ್ಚಲ್ಲ, ಅದು ರಾಷ್ಟ್ರದ ಭವಿಷ್ಯದ ಮೇಲಿನ ಅತ್ಯಮೂಲ್ಯ ಹೂಡಿಕೆ" ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ ಮಾಜಿ ಸಲಹೆಗಾರ ಎಸ್. ರಾಮದೊರೈ ಮಾತನಾಡಿ, ಸದ್ಗುರುಗಳ ದೂರದೃಷ್ಟಿ ಸ್ಫೂರ್ತಿದಾಯಕ. ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಹಾರ ಸೇವೆಗಳ ಮೂಲಕ ದೇಶದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.
ಸೆಬಿ ಮಾಜಿ ಅಧ್ಯಕ್ಷ ಎಂ. ದಾಮೋದರನ್, ಸಂಪರ್ಕ್ ಫೌಂಡೇಶನ್ ಸಂಸ್ಥಾಪಕ ವಿನೀತ್ ನಾಯರ್, ಬಾಂಬೆ ಷೇರುಪೇಟೆ ಮಾಜಿ ಅಧ್ಯಕ್ಷ ಡಾ. ಎಸ್. ರವಿ ಹಾಗೂ ದಿ ಹಿಂದೂ ಬಿಸಿನೆಸ್ ಲೈನ್ ಸಂಪಾದಕ ರಘುವೀರ್ ಶ್ರೀನಿವಾಸನ್ ಮಾತನಾಡಿ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಅಭಿಯಾನದ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಸೇವೆಗಳನ್ನು ಶ್ಲಾಘಿಸಿ, ಇಂತಹ ಸೇವಾ ಸಂಸ್ಥೆಗಳಿಗೆ ಹೆಚ್ಚಿನ ಸಿಎಸ್ಆರ್ ಬೆಂಬಲ ದೊರೆಯಬೇಕೆಂದು ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ ಸಿಎಸ್ಆರ್ ನಿಧಿಯ ಪರಿಣಾಮಕಾರಿ ಬಳಕೆ, ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಹಾಗೂ ಭಾರತೀಯ ವಲಸಿಗರ ಪಾತ್ರ ಕುರಿತು ನಾಲ್ಕು ತಾಂತ್ರಿಕ ಅಧಿವೇಶನಗಳು ನಡೆದವು. ಇದೇ ಸಂದರ್ಭದಲ್ಲಿ 'ವಿಕಸಿತ ಭಾರತಕ್ಕಾಗಿ ಸಿಎಸ್ಆರ್' ಶ್ವೇತಪತ್ರವನ್ನು ಬಿಡುಗಡೆ ಮಾಡಲಾಯಿತು. ಟಾಟಾ ಹಿಟಾಚಿ ಕನ್‌ಸ್ಟ್ರಕ್ಷನ್ ಮೆಷಿನರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಅವರಿಗೆ 'ವಿಕಸಿತ ಭಾರತ' ಪುರಸ್ಕಾರ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶೈಲೇಶ್ ತಿವಾರಿ ಸೇರಿದಂತೆ ಹಲವರಿಗೆ ಸಿಎಸ್ಆರ್ ಪುರಸ್ಕಾರ ನೀಡಿ ಗೌರವಿಸಲಾಯಿತು.



