ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮವಸ್ತ್ರ, ಶೂ, ಸಾಕ್ಸ್, ಪಠ್ಯಪುಸ್ತಕ, ಹಾಲು ಹಾಗೂ ಮಧ್ಯಾಹ್ನದ ಬಿಸಿಊಟ ನೀಡುತ್ತಿದ್ದರೂ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಕೊರಗುತ್ತಿರುವುದು ಕಳವಳಕಾರಿ ಸಂಗತಿ" ಎಂದು ನಂದ ಫೀಡ್ಸ್ ಮಾಲೀಕ ನಂದಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಮೇಟಿಕುರ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂದ ಫೀಡ್ಸ್ ವತಿಯಿಂದ ಶಾಲೆಗೆ ಉಚಿತವಾಗಿ ಚೇರ್, ಟೇಬಲ್ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಅವರು ಮಾತನಾಡಿದರು. "ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಅಧಿಕಾರ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲಿಸಿದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ," ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹುಸೇನ್ ಸಾಬ್ ಮಾತನಾಡಿ, "ಸರ್ಕಾರಿ ಶಾಲೆಗಳಲ್ಲಿ ನುರಿತ ಅನುಭವಿ ಶಿಕ್ಷಕರು ಹಾಗೂ ಉಚಿತ ಸೌಲಭ್ಯಗಳಿವೆ. ನಂದ ಫೀಡ್ಸ್ ಸಂಸ್ಥೆಯು ನಮ್ಮ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಅಪಾರ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ," ಎಂದು ಧನ್ಯವಾದ ಸಲ್ಲಿಸಿದರು.
ಸಮಾರಂಭದಲ್ಲಿ ನಂದಕುಮಾರ್ ಅವರ ಮೊಮ್ಮಗ ಅಭಯ್, ಮ್ಯಾನೇಜರ್ ದಿನೇಶ್, ಡಾ. ಪಟ್ಟಾಭಿರಾಮ್, ಫಾರ್ಮ್ ಮ್ಯಾನೇಜರ್ ರುದ್ರಮುನಿ, ಹೆಚ್.ಆರ್. ಮುಖ್ಯಸ್ಥೆ ಸುಮತಿ, ಸನದ್, ಎಸ್‌ಡಿಎಂಸಿ ಅಧ್ಯಕ್ಷೆ ಪಲ್ಲವಿ, ವೈದ್ಯಾಧಿಕಾರಿ ಡಾ. ತಾಸಿಂ, ನಿವೃತ್ತ ಶಿಕ್ಷಕಿ ನೇತ್ರ, ಶಿಕ್ಷಕಿಯರಾದ ಸಂಧ್ಯಾ, ನಾಗವೀಣ, ಚೈತ್ರ, ಶಿಕ್ಷಕ ಸಿದ್ದೇಶ್, ನಂದ ಫೀಡ್ಸ್‌ನ ಸಿಬ್ಬಂದಿ ಹಾಗೂ ಕಾರ್ಮಿಕರು, ಗ್ರಾಮ ಪಂಚಾಯಿತಿ ಸದಸ್ಯರು, ಪೋಷಕರು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



