ಚಂದ್ರವಳ್ಳಿ ನ್ಯೂಸ್, ಶಿಕಾರಿಪುರ:
ಅಪ್ರತಿಮ ದೇಶಭಕ್ತ, ರಾಷ್ಟ್ರೀಯ ಏಕತೆ ಹಾಗೂ ಅಖಂಡತೆಯ ಚೈತನ್ಯ ಸ್ವರೂಪ ಮತ್ತು ರಾಷ್ಟ್ರೀಯತೆಯ ಸಿದ್ಧಾಂತದ ಪ್ರೇರಣಾ ಶಕ್ತಿಯಾದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಜಯಂತಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, "ದೇಶದ ಪ್ರಗತಿ ಹಾಗೂ ಸಂಘಟನೆಯ ಬಲವರ್ಧನೆಯ ನಿಟ್ಟಿನಲ್ಲಿ ಸಮರ್ಪಿತರಾಗಿ ಕೆಲಸ ಮಾಡಲು ಮುಖರ್ಜಿ ಅವರ ಚಿಂತನೆಗಳು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸದಾ ಸ್ಫೂರ್ತಿ ನೀಡುತ್ತವೆ" ಎಂದರು.
ಕಾರ್ಯಕ್ರಮದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಿಂಬೆಗುಂದಿ ಸಿದ್ದಲಿಂಗಪ್ಪ, ಮಂಡಲ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮಾಜಿ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ರೈತ ಮೋರ್ಚಾ ಕಾರ್ಯದರ್ಶಿ ರುದ್ರೇಶ್, ಹಿರಿಯ ಮುಖಂಡರಾದ ರುದ್ರಮೂರ್ತಿ, ಕೆ.ಎಸ್. ಕುಮಾರ್, ಗೋಣಿ ಸಂದೀಪ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



