ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೃಷಿ ಇಲಾಖೆಯ ಸಭಾಂಗಣದಲ್ಲಿ ತಾಲ್ಲೂಕಿನ ರೈತರು ಹಾಗೂ ರೈತ ಮುಖಂಡರುಗಳ ಸಮ್ಮುಖದಲ್ಲಿ ಮಹತ್ವದ ರೈತರ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ರೈತರ ಸಮಸ್ಯೆಗಳು ಹಾಗೂ ಇಲಾಖಾವಾರು ಸೌಲಭ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಜುಲೈ 31 ಬೆಳೆ ವಿಮೆಗೆ ಕೊನೆ ದಿನ: ಅಶೋಕ್
ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಅವರು ಮಾತನಾಡಿ, "ಪ್ರಸಕ್ತ ಸಾಲಿನ ಬೆಳೆ ವಿಮೆ ಯೋಜನೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಹೀಗಾಗಿ ತಾಲ್ಲೂಕಿನ ಎಲ್ಲಾ ರೈತರು ತಪ್ಪದೇ ನಿಗದಿತ ಅವಧಿಯೊಳಗೆ ಬೆಳೆ ವಿಮೆ ಮಾಡಿಸಬೇಕು" ಎಂದು ಮನವಿ ಮಾಡಿದರು.
"ಪ್ರಸ್ತುತ ಮಳೆ ಕೊರತೆ ಎದುರಾಗಿದ್ದು, ಜುಲೈ 31ರವರೆಗೆ ಶೇಂಗಾ ಬಿತ್ತನೆ ಮಾಡಲು ಅವಕಾಶವಿದೆ. ಒಂದು ವೇಳೆ ಆಗಸ್ಟ್ ತಿಂಗಳಲ್ಲಿ ಮಳೆಯಾದರೆ, ರೈತರು ಪರ್ಯಾಯ ಬೆಳೆಗಳಾದ ಸಿರಿಧಾನ್ಯಗಳು, ಸಜ್ಜೆ, ರಾಗಿ, ಹುರುಳಿ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು" ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ಹೊಸ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ರಸಗೊಬ್ಬರ ಖರೀದಿ ಮಾಡುವ ವಿಧಾನದ ಬಗ್ಗೆಯೂ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.
ಇಲಾಖಾ ಸೌಲಭ್ಯಗಳ ಮಾಹಿತಿ:
ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಬಾಬು ಅವರು ಮಾತನಾಡಿ, ತಮ್ಮ ತಮ್ಮ ಇಲಾಖೆಗಳಿಂದ ರೈತರಿಗೆ ದೊರೆಯುವ ವಿವಿಧ ಯೋಜನೆಗಳು, ಸಬ್ಸಿಡಿಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ರೈತರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.
ಅಧಿಕಾರಿಗಳು ಸ್ಪಂದಿಸದಿದ್ದರೆ ಪ್ರತಿಭಟನೆ: ರೈತ ಮುಖಂಡರ ಆಗ್ರಹ
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹೊರಕೇರಪ್ಪ ಮಾತನಾಡಿ, ಬೆಳೆ ವಿಮೆ ಅಧಿಕಾರಿಗಳು ತೊಂದರೆಯಲ್ಲಿರುವ ರೈತರಿಗೆ ಸೂಕ್ತವಾಗಿ ಸ್ಪಂದಿಸಬೇಕು. ತೀವ್ರ ಮಳೆ ಕೊರತೆ ಇರುವುದರಿಂದ ಸರ್ಕಾರ ತಕ್ಷಣವೇ ಬೆಳೆ ನಷ್ಟ ಪರಿಹಾರವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪ್ರತಿ ಎರಡು ತಿಂಗಳಿಗೊಮ್ಮೆ ಇಂತಹ ಸಭೆಗಳನ್ನು ನಡೆಸಿ ರೈತರ ಕುಂದುಕೊರತೆಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ವಿತರಿಸಲಾಗುವ ಕೃಷಿ ಪರಿಕರಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಹಾಗೂ ಬೆಳೆ ವಿಮೆ ಪರಿಹಾರವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರಿಗೆ ತಲುಪಬೇಕು ಎಂದರು. ಹೊಸ ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಖರೀದಿ ಮಾಡುವ ವ್ಯವಸ್ಥೆಯು ರೈತರಿಗೆ ಹೆಚ್ಚು ಸಹಕಾರಿಯಾಗಿದ್ದು, ಎಲ್ಲರೂ ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕಾತ್ರೀಕೇನಹಳ್ಳಿ ಮಾತನಾಡಿ, ಹೊಲಗಳಲ್ಲಿ ಕೆಲಸ ಮಾಡುವಾಗ ವಿಷ ಜಂತುಗಳ ಕಡಿತದಿಂದ ಮರಣ ಹೊಂದುವ ರೈತರ ಕುಟುಂಬಕ್ಕೆ ನೀಡುವ ಪರಿಹಾರ ಧನವನ್ನು ಸದ್ಯದ 2 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಪ್ರಮುಖ ಸಭೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಿಕಾಂತ್, ಪ್ರಮುಖ ಮುಖಂಡರುಗಳಾದ ವೆಂಕಟೇಶ್, ಗಡಾರಿ ಕೃಷ್ಣಪ್ಪ, ಚೇತನ್, ಪುನೀತ್ ಸೇರಿದಂತೆ ತಾಲ್ಲೂಕಿನ ನೂರಾರು ರೈತರು ಹಾಗೂ ಕೃಷಿ ಆಸಕ್ತರು ಭಾಗವಹಿಸಿದ್ದರು.



