Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರಕೆ ಕಥೆ ಭಾಗ-6:ಕುಮಾರ್ ಬಡಪ್ಪ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬರಮಿಗೆ ಮುತ್ತು ಕಟ್ಸೋ ಸುದ್ದಿ ಊರಾಗ ಹಬ್ಬಿ,ಗುಡಿ ಮುಂದೆ ಜನ ಜಮಾಯ್ಸಾಕ ಹತ್ತಿದ್ರು.ಇಂಥಾ ಅದೆಷ್ಟೋ ಘಟನೆಗಳ ಸರಮಾಲೆ ಈ ಹಳ್ಳಿ. ಕಾಳವ್ವನ ದರಬಾರಿನಾಗ ಎಂತೆಂಥ ಅನೈತಿಕತೆ,ಮೆಂಬರ್ ನರಸಯ್ಯ ಒಳಗೊಳಗೇ ಕತ ಕತ ಕುದಿಯತೊಡಗಿದ್ದ.

ಈ ದಿನಕ್ಕೂ ಇಂಥ ಅನಿಷ್ಟಗಳಿಗೆ ಹೇಗೆ ಸೊಪ್ಪು ಹಾಕೋದು,ಮೌಡ್ಯದ ಕತ್ತಲು ಆವರಿಸಿರೋ ಈ ಹಳ್ಳಿಗೆ ಶಾಲೆ ತರಲೇಬೇಕು. ಈ ವಿಚಾರವಾಗಿ ಆಗ್ಲೇ ನರಸಯ್ಯ,ತಹಸಿಲ್ದಾರನ್ನ ಕಂಡು ಅರ್ಜಿ ಹಾಕಿ ಗೋಮಾಳದಲ್ಲಿ ಶಾಲೆ ಕಟ್ಟೋ ಪ್ರಯತ್ನಾನು ನಡೆಸಿದ್ದ. ಪೂಜಾರಿಗೆ ಗೊತ್ತಾದ್ರೆ ಕಾಳವ್ವಗೆ ಗೊತ್ತಾದ ಹಾಗೆ,ಜನ ಸೇರಿಸಿ ದೇವಿನ ಬನ್ನಿಕಟ್ಟೆಗೆ ಕರಿಸಿ, ನನ್ನ ವಿರುದ್ಧ ಹಳ್ಳಿನ ಎತ್ತಿ ಕಟ್ಟಿ ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಗೂ ನಿಲ್ದಂಗ ಮಾಡೋ ತಾಕತ್ತು ಪೂಜಾರಿಗಿತ್ತು,ಅದೇ ಭಯ ನರಸಯ್ಯನನ್ನು ಕಾಡುತ್ತಿತ್ತು. ಜನಸಂದಣಿಯ ಮಧ್ಯೆ ತಾನು ಒಬ್ಬನಾಗಿ,ಗೊತ್ತಿದ್ರೂ ವ್ಯವಸ್ಥೆಗೆ ಹೆದರಿ ಮೌನಕ್ಕೆ ಬಿದ್ದು ಮೂಕನಾಗಿದ್ದ.

ಇನ್ನೂ ಮೈ ನೆರೆಯದ ಕಾರಣ ಈ ಪೂಜೆ ಅಷ್ಟು ವಿಶೇಷವಾಗಿರದಿದ್ರೂ, ಗೌಡನ ಪರಿವಾರದ ಪಡ್ಡೆಗಳು ಮುಂದೊಂದು ದಿನ ಇಡೀ ಊರಿನ ಮಗ್ಗುಲಿಗೆ ಬರೋ ಹೆಣ್ಣನ್ನ ಕಾಣಾಕೆ ಹಾತೊರೆಯುತ್ತಿದ್ದವು. ದ್ಯಾಮಯ್ಯನ ಜೊತೆಗೂಡಿ ಚೌಟಿಕೆ ಯಲ್ಲವ್ವನ ಸಾರತ್ಯದಲ್ಲಿ ಪೂಜೆಗೆ ಎಲ್ಲವೂ ಅಣಿಯಾಗಿತ್ತು. ಅಪ್ಪ ತಂದಿದ್ದ ಹೊಸ ಬಟ್ಟೆ ಉಟ್ಟ ಬರಮಿ, ಅವ್ವನೊಂದಿಗೆ ಗುಡಿ ಕಡೆ ಹೆಜ್ಜೆ ಹಾಕತೊಡಗಿದಳು. ಬಿತ್ತೊ ಕಾಳು ಹೆಗಲಿಗೆ ಏರಿಸಿಕೊಂಡ ಸಿದಗಯ್ಯ ಮಕ್ಕಳನ್ನು ಕರ್ಕೊಂಡು ತಾನೂ ಹೊರಟ. ಹೊಸ ಬಟ್ಟೆಯಲ್ಲಿ ಅಗಲದ ಹಣೆಗೆ ಇಟ್ಟ ಕುಂಕುಮದ ಬೊಟ್ಟು,ಚಂದದ ಬೊಂಬೆಗಿಟ್ಟ ದೃಷ್ಟಿ ಬೊಟ್ಟಿನಂತಾಗಿದ್ದರೆ.

ಹರಕೆಗಾಗಿ ಅವರಿವರು ತಂದು ಕೊಟ್ಟಿದ್ದ ಹೂವು ತಲೆ ಮುಡಿದು,ಆ ಹೊತ್ತು ವಧು ಸಿಂಗಾರದ ಕಳೆ ತಂದಿತ್ತು ಬರಮಿಗೆ, ಹಿಂದೆ ಮುತ್ತು ಕಟ್ಟಿಸಿಕೊಂಡಿದ್ದ ಹಿರಿಮುಖದ ದಾಸಿಯರ ಅಷ್ಟಷ್ಟು ದಂಡು,ಕಾಳವ್ವನ ಗುಡಿಯಾಗೆ ಚೌಟಿಕೆ ಸದ್ದಿನಲ್ಲಿ ದೇವಿ ಹಾಡುಗಳನ್ನ ಗುನುಗಿಕೊಂಡಿದ್ದರು.

ಗುಡಿಗೆ ಬಂದ ಬರಮಿಯನ್ನ ತನ್ನ ಅಸ್ತಿತ್ವಕ್ಕೆ ಪಡೆದ ಯಲ್ಲವ್ವ, ಅಪ್ಪ ಅವ್ವ ತಮ್ಮ ತಂಗಿಯನ್ನ ಜನಗಳಿರೋ ಬದಿಗೆ ಸರಿಸಿ ತನ್ನ ಪೂಜೆ ಆರಂಭಿಸಿದ್ಲು. ದೇವಿಗೆ ಹರಕೆಯಾಗಿ ಗುಡಿಯಾಗೆ ಯಾರೇ ಮುತ್ತು ಕಟ್ಟಿಸ್ಕೊಂಡ್ರು,ಅವರಿಗೆ ಗಂಡನಾಗಿ ಕೊರಳಿಗೆ ತಾಳಿ ಬಿಗಿಯೋದು ದೇವಸ್ಥಾನದ ಪೂಜಾರಿಯೇ. ಇದು ಕಾಳವ್ವನ ಕಟ್ಟಪ್ಪಣೆ, ಹಾಗಾಗಿ ಬರಮಿಯ ಪಕ್ಕ ದ್ಯಾಮಯ್ಯ ಕುಂತು ಹರಕೆ ಪದ್ಧತಿ ಆರಂಭಿಸಿದ. ದೇವದಾಸಿಯರ ದೇವಿ ಪದಗಳ ಗುಂಗಿನಲ್ಲಿ ಚೌಟಿಕೆಗಳ ಮೊರೆತ,ಮಹಾ ಮಂಗಳಾರತಿಯ ಸದ್ದಿನಲ್ಲಿ ಬರಮಿ ಕಾರ್ಯ ರಂಗೇರಿತ್ತು.

ಮುತ್ತು ಪೊಣಿಸಿ ಪೂಜೆಗಿಟ್ಟಿದ್ದ ಯಲ್ಲವ್ವ ಜನಗಳ ಕೈಗೆ ಹೂ ಪತ್ರೆಗಳನ್ನು ಕೊಟ್ಟು ದ್ಯಾಮಯ್ಯನ ಕೈಗೆ ತಾಳಿಯನ್ನು ಇಟ್ಟಳು. ಊರಿನ ವಧುವಾಗಿ ತಲೆತಗ್ಗಿಸಿ ಕುಳಿತ್ತಿದ್ದವಳೊಂದಿಗೆ ಪೂಜಾ ವಿಧಾನ ಅಂತಿಮ ಘಟ್ಟಕ್ಕೆ ಬಂದು ತಲುಪಿತ್ತು. ಒಂದು ಮಂತ್ರದೊಂದಿಗೆ ದ್ಯಾಮಯ್ಯ ಕೊರಳಿಗೆ ಮುತ್ತು ಬಿಗಿಯುತ್ತಿದ್ದ ಹಾಗೆ ಹೂ ಪತ್ರೆಗಳು ಸಾಕ್ಷಿಯಾಗಿ ಜನಗಳ ಕೈಲಿಂದ ಬರಮಿಯ ಮೈ ಮೇಲೆ ಚೆಲ್ಲಿಕೊಂಡವು,ಕಾಳವ್ವನ ಉಡಿಯಾಗಿಟ್ಟಿದ್ದ ಬಿತ್ತುವ ಕಾಳುಗಳು ಸಹ. ಯಾಕೋ ಏನೋ ನಾಗವ್ವನ ಕಣ್ಣುಗಳು ತೇವಗೊಂಡಿದ್ದವು.

ಅವ್ವನನ್ನೇ ದಿಟ್ಟಿಸಿದ್ದ ಮಕ್ಕಳ ಮುಖದಲ್ಲೂ ಅಂಥದ್ದೇ ನೋಟ, ಸಿದಗಯ್ಯ ಗುಡಿಯ ಕಂಬಕ್ಕೊರಗಿ ಮೌನಕ್ಕೆ ಬಿದ್ದಿದ್ದ. ಹರ್ಷೋದ್ಗಾರಗಳ ಮಧ್ಯೆ ಊರ ಪಡ್ಡೆಗಳಂತೂ ಬರಮಿಯ ವಯಸ್ಸಿನ ಲೆಕ್ಕಾಚಾರದಲ್ಲಿ ಮಾತಿಗೆ ಬಿದ್ದಿದ್ರು. ಪೂಜಾರಿಯದು ಅದೆಂತದೋ ಜಯಮಾಲೆ ಧರಿಸಿದ ಸಂತಸ. ಹೆಬ್ಬುಲಿಯ ಬಾಯಿಗೆ ಮರಿ ಜಿಂಕೆ ಬಿದ್ದಂತೆ.

ಬಿತ್ತನೆ ಕಾಳನ್ನು ಹೆಗಲಿಗೇರಿಸಿ ನಡೆಯುತ್ತಿದ್ದ ಅಪ್ಪನೊಡನೆ,ದ್ಯಾಮಯ್ಯನ ಜೊತೆಗೂಡಿ ದಿವ್ಯ ಮೌನದೊಂದಿಗೆ ಹೆಜ್ಜೆ ಹಾಕುತ್ತಿದ್ದ ಬರಮಿ, ಅಮಾವಾಸ್ಯೆಯ ಸರಿರಾತ್ರಿಯ ಹಾದಿಯಲ್ಲಿ ಮಹಾ ಪಯಣಕ್ಕೆ ಹೊರಟಂತಿತ್ತು. ನಿಶಾಚರಿ ಪಕ್ಷಿಗಳ ವಿಚಿತ್ರ ಸದ್ದು, ದವಳಪ್ಪನ ಗುಡ್ಡದ ಪಕ್ಕದ ಕಾಡಿನಿಂದ ಆಗಾಗ ಕೇಳಿ ಬರುವ ಕಾಡು ಪ್ರಾಣಿಗಳ ಕೂಗು,ಮತ್ತಷ್ಟು ಮೌನಕ್ಕೆ ತಳ್ಳಿ ಅಂಕಳಿ ಮಠದ ಗವಿ ಕಡೆ ದಾರಿ ಬೇಗನೆ ಸವೆದಿತ್ತು. ಸರ ಸರನೆ ಮೆಟ್ಟಿಲೇರಿ ಗವಿ ಬಾಗಿಲಿಗೆ ಬಂದ ದ್ಯಾಮಯ್ಯ ಕತ್ತಲನ್ನು ಸೀಳುವವನಂತೆ ಕೆಳ ಮೆಟ್ಟಿಲುಗಳ ಕಡೆ ಸರಿಯತೊಡಗಿದ. 
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.        ನಾಳೆಗೆ....

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ