Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಸಿ, ಎಸ್‌ಪಿ ಕಚೇರಿ ಪಕ್ಕದಲ್ಲೇ ಅಪ್ರಾಪ್ತೆ ಮೇಲೆ 'ಹುಚ್ಚು ಪ್ರೇಮಿ' ಭೀಕರ ಹಲ್ಲೆ

Advertisement
Advertisement

 ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ನಗರದ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದ ಜಿಲ್ಲಾ ಕ್ರೀಡಾಂಗಣದಲ್ಲೇ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಉನ್ಮಾದಿತ ಯುವಕನೊಬ್ಬ ಭೀಕರ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಸಾರ್ವಜನಿಕರ ಸಮಯೋಚಿತ ಮಧ್ಯಪ್ರವೇಶದಿಂದಾಗಿ ವಿದ್ಯಾರ್ಥಿನಿ ದೊಡ್ಡ ಅಪಾಯದಿಂದ ಪಾರಾಗಿದ್ದು, ಸ್ಥಳದಿಂದ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ರೋಹಿತ್ ಬಂಧಿತ ಆರೋಪಿ. ಕಡೂರು ಮೂಲದ ಅಪ್ರಾಪ್ತ ಬಾಲಕಿಯು ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು.

ಘಟನೆಯ ವಿವರ:
ಆರೋಪಿ ರೋಹಿತ್ ಕಳೆದ ಕೆಲವು ದಿನಗಳಿಂದ ಬಾಲಕಿಯನ್ನು ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಬಾಲಕಿ ಆತನ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ರೋಹಿತ್, ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕಿಯನ್ನು ಅಡ್ಡಗಟ್ಟಿ, ನೆಲಕ್ಕೆ ಕೆಡವಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣವೇ ಆಕೆಯ ನೆರವಿಗೆ ಧಾವಿಸಿದ್ದಾರೆ. ಜನ ಬರುತ್ತಿರುವುದನ್ನು ಕಂಡು ಆರೋಪಿ ಓಡಲಾರಂಭಿಸಿದ್ದಾನೆ. ಬಿಡದ ಸಾರ್ವಜನಿಕರು ಆತನನ್ನು ಎಸ್‌ಪಿ ನಿವಾಸದ ಸಮೀಪದವರೆಗೂ ಬೆನ್ನಟ್ಟಿ ಹಿಡಿದು ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊದಲೇ ಕಿರುಕುಳ ನೀಡಿದ್ದ ಆರೋಪಿ!: ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ರೋಹಿತ್ ಬಾಲಕಿಗೆ ಕಿರುಕುಳ ನೀಡುತ್ತಿರುವುದು ಇದೇ ಮೊದಲಲ್ಲ.

ಪೋಷಕರಿಗೂ ಧಮ್ಕಿ: ಈ ಹಿಂದೆ ಬಾಲಕಿಯ ಮನೆಗೇ ಹೋಗಿ ಪ್ರೀತಿಸುವಂತೆ ಬೆದರಿಕೆ ಹಾಕಿದ್ದಲ್ಲದೆ, ಆಕೆಯ ಪೋಷಕರಿಗೂ ಫೋನ್ ಮಾಡಿ ಧಮ್ಕಿ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ.

ಹಾಸ್ಟೆಲ್ ಬಳಿ ಗಲಾಟೆ: ವಿದ್ಯಾರ್ಥಿನಿ ವಾಸವಿದ್ದ ಹಾಸ್ಟೆಲ್ ಬಳಿಗೂ ಬಂದು ಈತ ಈ ಹಿಂದೆ ರಂಪಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ವಾರ್ಡನ್ ಕೂಡ ಬಾಲಕಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಆರೋಪಿ ಜೈಲು ಪಾಲು: ನಗರ ಠಾಣಾಧಿಕಾರಿ ಪ್ರತಿಕ್ರಿಯೆ
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು, "ಭಯಭೀತಳಾಗಿದ್ದ ಅಪ್ರಾಪ್ತ ಬಾಲಕಿ ನೀಡಿದ ದೂರಿನನ್ವಯ ಆರೋಪಿ ರೋಹಿತ್ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ದೂರದ ಸಂಬಂಧಿಕರಾಗಿದ್ದು, ಈ ಹಿಂದೆಯೂ ಕಿರುಕುಳ ನೀಡಿದ್ದ ಅಂಶ ಬೆಳಕಿಗೆ ಬಂದಿದೆ. ಆರೋಪಿಯನ್ನು ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.

ಜಿಲ್ಲೆಯ ಅತ್ಯುನ್ನತ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳಿರುವ ಹೈ-ಸೆಕ್ಯುರಿಟಿ ವಲಯದಲ್ಲೇ ಈ ದೌರ್ಜನ್ಯ ನಡೆದಿರುವುದು ಸಾರ್ವಜನಿಕರಲ್ಲಿ, ವಿಶೇಷವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಲ್ಲಿ ಭದ್ರತೆಯ ಕುರಿತು ತೀವ್ರ ಆತಂಕ ಮೂಡಿಸಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.