ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯ ಆದರ್ಶ ನಗರದ ಅಗ್ನಿಶಾಮಕ ಠಾಣೆ ಹತ್ತಿರ ನೂತನವಾಗಿ ಸ್ಥಾಪಿಸಲಾದ ಆಧಾರ್ ಸೇವಾ ಕೇಂದ್ರವನ್ನು ಮಂಗಳವಾರ ಚಿತ್ರದುರ್ಗ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಯುಐಡಿಎಐ ಸಂಸ್ಥೆಯು ಜನಸ್ನೇಹಿ ಸೇವಾ ಪ್ರಯತ್ನ ಶ್ಲಾಘಿಸಿ, ತಾಲ್ಲೂಕು ಕಚೇರಿ ಹಾಗೂ ನಾಡ ಕಚೇರಿಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಆಧಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿರುತ್ತದೆ.
ಚಿತ್ರದುರ್ಗದಲ್ಲಿ ನೂತನವಾಗಿ ಯುಐಡಿಎಐ ವತಿಯಿಂದ ಪ್ರಾರಂಭಿಸಿರುವ ಆಧಾರ್ ಸೇವಾ ಕೇಂದ್ರದಿಂದ ಹೆಚ್ಚಿನ ಸಮಸ್ಯೆಗಳನ್ನು ಇಲ್ಲೇ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಬೆಂಗಳೂರಿನ ಆಧಾರ್ ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಗುಲ್ಶನ್ ಕುಮಾರ್ ಸಿಂಗ್ ಮಾತನಾಡಿ, ನೂತನ ಆಧಾರ್ ಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದರು. ಆಧಾರ್ ನೋಂದಣಿ, ಬಯೋಮೆಟ್ರಿಕ್ ನವೀಕರಣ, ಮೊಬೈಲ್ ಸಂಖ್ಯೆ ಮತ್ತು ವಿಳಾಸ ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳನ್ನು ಕೇಂದ್ರದ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಆನ್‍ಲೈನ್ ಆಧಾರ್ ಅಪಾಯಿಂಟ್‍ಮೆಂಟ್ ಫೋರ್ಟಲ್ ಹಾಗೂ ಎಂ-ಆಧಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಮುಂಗಡವಾಗಿ ಸಮಯ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆ ಕುರಿತು ವಿವರಿಸಿದರು. ಡಿಜಿಟಲ್ ಸೇವೆಗಳ ಸದುಪಯೋಗ ಪಡೆದು ಸುಲಭವಾಗಿ ಆಧಾರ್ ಸಂಬಂಧಿತ ಸೇವೆಗಳನ್ನು ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಬೆಂಗಳೂರಿನ ಆಧಾರ್ ಪ್ರಾದೇಶಿಕ ಕಚೇರಿಯ ಸಹಾಯಕ ವ್ಯವಸ್ಥಾಪಕ ಚೇತನ್ ಕುಮಾರ್, ಆಧಾರ್ ಜಿಲ್ಲಾ ಸಮಾಲೋಚಕ ಎ.ರಂಗನಾಥ್, ರಾಜ್ಯ ವ್ಯವಸ್ಥಾಪಕ ಗಜೇಂದ್ರ, ಚಿತ್ರದುರ್ಗ ಆಧಾರ್ ಸೇವಾ ಕೇಂದ್ರದ ವ್ಯವಸ್ಥಾಪಕ ಕೆ.ಎ.ಶ್ರೀನಿವಾಸ್ ಇದ್ದರು.



