ಚಂದ್ರವಳ್ಳಿ ನ್ಯೂಸ್, ಬಿಡದಿ (ರಾಮನಗರ):
ರಾಜ್ಯ ಸರ್ಕಾರದ ಉದ್ದೇಶಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಾಗೂ ಸ್ಥಳೀಯ ರೈತರ ಕೃಷಿ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭವಾಗಿರುವ ಬೃಹತ್ ಪಾದಯಾತ್ರೆಗೆ ಭೈರಮಂಗಲದಲ್ಲಿ ಚಾಲನೆ ನೀಡಲಾಯಿತು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ಈ ಐತಿಹಾಸಿಕ ಪಾದಯಾತ್ರೆಗೆ ಚಾಲನೆ ನೀಡಿದರು. 'ನಮ್ಮ ಭೂಮಿ, ನಮ್ಮ ಹಕ್ಕು' ಎಂಬ ಶೀರ್ಷಿಕೆಯಡಿ ಬಿಡದಿಯ ಬೈರಮಂಗಲ ವೃತ್ತದಿಂದ ಆರಂಭಗೊಂಡಿರುವ ಈ 38 ಕಿಲೋಮೀಟರ್ ಬೃಹತ್ ಪಾದಯಾತ್ರೆಯು ಮೂರು ದಿನಗಳ ಕಾಲ ಸಾಗಲಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ.
ನಾಯಕರ ಬೃಹತ್ ದಂಡು ಭಾಗಿ:
ಈ ಪಾದಯಾತ್ರೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ. ಸುರೇಶ್ ಬಾಬು, ಮಾಗಡಿ ಕ್ಷೇತ್ರದ ಮಾಜಿ ಶಾಸಕರಾದ ಎ. ಮಂಜುನಾಥ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಹಾಲಿ ಹಾಗೂ ಮಾಜಿ ಶಾಸಕರು, ಪ್ರಮುಖ ಜನಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಮತ್ತು ಬಿಡದಿ ಭಾಗದ ನೂರಾರು ರೈತ ಬಾಂಧವರು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದರು.
ರೈತರ ಪರ ಮಿತ್ರಪಕ್ಷಗಳ ಒಗ್ಗಟ್ಟು:
ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆಯಿಲ್ಲದೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಎನ್‌ಡಿಎ ನಾಯಕರು ಒಮ್ಮತದ ಧ್ವನಿ ಎತ್ತಿದ್ದಾರೆ. ಸರ್ಕಾರದ ಯೋಜನೆ ವಿರುದ್ಧ ವಿಧಾನಮಂಡಲದ ಒಳಗೂ ಮತ್ತು ಹೊರಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ನಾಯಕರು ಸ್ಪಷ್ಟಪಡಿಸಿದರು.



