ಚಂದ್ರವಳ್ಳಿ ನ್ಯೂಸ್, ಮೈಸೂರು:
"ನಾನು ಲಾಟರಿ ಬ್ಯಾನ್ ಮಾಡಿದಾಗ ತಮಿಳುನಾಡಿನಿಂದ ಹಣದ ಬ್ಯಾಗ್ ಹಿಡಿದುಕೊಂಡು ಬಂದವರನ್ನೇ ಉಗಿದು ಕಳುಹಿಸಿದ್ದೇನೆ. ನನ್ನನ್ನು ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ, ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರತಿಯೊಂದು ಯೋಜನೆಯಲ್ಲೂ ಹಣ ಲೂಟಿ ಮಾಡುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಬಿಡದಿ ಟೌನ್‌ಶಿಪ್ ಹೆಸರಲ್ಲಿ ಲೂಟಿ - ಹೆಚ್‌ಡಿಕೆ ಆರೋಪ:
"ಬಿಡದಿ ಪ್ರಾಜೆಕ್ಟ್‌ನ ಭೂಮಿ ಫಲವತ್ತಾಗಿದೆ ಎಂದು ಕಾಂಗ್ರೆಸ್ ಸದನ ಸಮಿತಿ ವರದಿಯಲ್ಲೇ ಇದೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಹಣ ಲೂಟಿ ಮಾಡಲು ಹೊರಟಿದ್ದಾರೆ.
ಈ ಹಿಂದೆ ಸದನ ಸಮಿತಿಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಇದೆಲ್ಲಾ ಗೊತ್ತಿದೆ. ನಾನು ಕಿಕ್ ಬ್ಯಾಕ್ ಪಡೆದಿದ್ದರೆ ಧೈರ್ಯವಾಗಿ ತನಿಖೆ ಮಾಡಿಸಲಿ. ದೇವೇಗೌಡರನ್ನಾಗಲಿ ಅಥವಾ ನನ್ನನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಬಿಡದಿ ಟೌನ್‌ಶಿಪ್ ಹೆಸರಿನ ಅಕ್ರಮಕ್ಕೆ ಜಮೀನು ಬಿಟ್ಟುಕೊಡಲು ರೈತರು ಸಿದ್ಧರಿಲ್ಲ" ಎಂದು ಸ್ಪಷ್ಟಪಡಿಸಿದರು.
ನೈಸ್ ಅಕ್ರಮ ಟೋಲ್: ಪ್ರಿಯಾಂಕ್ ಖರ್ಗೆಗೆ ತಿರುಗೇಟು:
ನೈಸ್ ರಸ್ತೆಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಕೀಲರೇ ಹೇಳಿದ್ದಾರೆ. ಹೀಗಾಗಿ ನೈಸ್ ರಸ್ತೆಯಲ್ಲಿ ಟೋಲ್ ನೀಡದಂತೆ ನಾನು ರೈತರಿಗೆ ಕರೆ ನೀಡಿದ್ದೇನೆ. "ಕೇಂದ್ರ ಸರ್ಕಾರವೇ ಟೋಲ್ ಸಂಗ್ರಹಿಸುತ್ತಿದೆ" ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, "ಯಾರು ಟೋಲ್ ವಸೂಲಿ ಮಾಡುತ್ತಿದ್ದಾರೆ ಎಂಬ ಕನಿಷ್ಠ ಅರಿವಿನೊಂದಿಗೆ ಮಾತನಾಡಲಿ" ಎಂದು ಟೀಕಿಸಿದರು.
ಅಧಿಕಾರದ ಮದದಿಂದ ಸರ್ಕಾರ ವಿರೋಧ ಪಕ್ಷಗಳ ಧ್ವನಿಯನ್ನು ಹತೋಟಿಗೆ ತರಲು ಯತ್ನಿಸುತ್ತಿದೆ. ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಸರ್ಕಾರಕ್ಕೆ ಇನ್ನು ಕೇವಲ ಒಂದೂವರೆ ವರ್ಷಗಳ ಅಧಿಕಾರಾವಧಿ ಮಾತ್ರ ಬಾಕಿ ಇದ್ದು, ಭ್ರಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ನಮ್ಮ ಶಾಸಕರು ಮತ್ತು ಜನತೆ ಸಿದ್ಧರಾಗಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.



