ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಕರೇನಳ್ಳಿಯಲ್ಲಿರುವ ಮಂಗಳ ವಿದ್ಯಾ ಮಂದಿರ ಶಾಲೆಯನ್ನು ಮುಚ್ಚಿ ಅಲ್ಲಿನ ಆಡಳಿತ ಸಮಿತಿಯವರು ಆಂಗ್ಲಮಾಧ್ಯಮ ಶಾಲೆ ತೆರೆಯಲು ಮುಂದಾಗಿದ್ದಾರೆ ಎಂಬ ವಿಷಯ ತಿಳಿದುಬಂದಿದೆ , 273 ಮಕ್ಕಳಿರುವ ಸರ್ಕಾರಿ ಅನುದಾನಿತ ಶಾಲೆಯ ಹೆಸರಿನಲ್ಲಿ ದಾನಿಗಳಿಂದ ಸರ್ಕಾರದಿಂದ ಹಲವು ಸವಲತ್ತುಗಳನ್ನು ಪಡೆದು ಈಗ ಏಕಾಏಕಿ ಶಾಲೆ ಮೆಚ್ಚಲು ಮುಂದಾಗಿರುವುದು ಸರಿಯಲ್ಲ ಈ ವರ್ತನೆಯನ್ನು ಕರುನಾಡ ರಾಷ್ಟ್ರೀಯ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಬಿ ಶಿವಶಂಕರ್ ತಿಳಿಸಿದರು.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಂತರ ಮಾತನಾಡಿದ ಅವರು ಅನುದಾನಿತ ಸರ್ಕಾರಿ ಶಾಲೆ ಹೆಸರಿನಲ್ಲಿ ಪಡೆದಿರುವ ಭೂಮಿ, ಸರ್ಕಾರ ಮತ್ತು ವಿವಿಧ ಸಂಸ್ಥೆಗಳಿಂದ ಪಡೆದಿರುವ ಎಲ್ಲಾ ಅನುದಾನಗಳನ್ನು ಹಿಂದಿರುಗಿಸಿ ತಮ್ಮ ಸ್ವಂತ ಬಂಡವಾಳ ಹೂಡಿಕೆ ಮಾಡಿ ಭೂಮಿಯನ್ನು ಖರೀದಿಸಿ ಕಟ್ಟಡ ನಿರ್ಮಿಸಿಕೊಂಡು ಶಾಲೆ ನಡೆಸಲಿ ಅದನ್ನು ಬಿಟ್ಟು ಚೆನ್ನಾಗಿ ನಡೆಯುತ್ತಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹುನ್ನಾರ ಮಾಡಿದರೆ ನಾವು ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರೇನಳ್ಳಿಯ ಶ್ರೀ ಮಂಗಳ ವಿದ್ಯಾ ಮಂದಿರದಲ್ಲಿ ಸುಮಾರು 273 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಈ ವಿಧ್ಯಾರ್ಥಿ ಗಳೆಲ್ಲರೂ ಕರೇನಳ್ಳಿ, ದರ್ಗಾಜೋಗಿಹಳ್ಳಿ , ಇಸ್ಲಾಂಪುರ ಭಾಗದವರಾಗಿದ್ದಾರೆ ಈ ಪ್ರದೇಶಗಳು ಅತ್ಯಂತ ಬಡವರು, ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು, ಶ್ರಮಿಕ ವರ್ಗದವರು ವಾಸಮಾಡುವ ಪ್ರದೇಶಗಳಾಗಿರುತ್ತವೆ ಈ ಶಾಲೆಯಲ್ಲಿ ಸರ್ಕಾರದಿಂದ ನೇಮಕಗೊಂಡ 5 ಜನ ಶಿಕ್ಷಕರು 3 ಜನ ಬಿಸಿ ಊಟ ತಯಾರಕರು ಆಡಳಿತ ಮಂಡಳಿಯವರು ನೇಮಿಸಿ ಕೊಂಡಿರುವ 4 ಜನ ಶಿಕ್ಷಕರು ಸೇರಿದಂತೆ ಒಟ್ಟು 9 ಜನ ಶಿಕ್ಷಕರಿದ್ದು ಈ ಶಾಲೆಯನ್ನು ಮುಚ್ಚಲು ಇಲ್ಲಿನ ಆಡಳಿತ ಮಂಡಳಿಯವರು ಹುನ್ನಾರ ನಡೆಸಿದ್ದು ಈ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದರು.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ನಮ್ಮ ಮನವಿಗೆ ಸಕಾರಾತ್ಮಕವಾಗಿ ಅಧಿಕಾರಿಗಳು ಸ್ಪಂದಿಸಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿ ಕೊರತೆಯಾಗುವುದಿಲ್ಲ, ಶಾಲೆ ಮುಚ್ಚಲು ಬಿಡುವುದಿಲ್ಲ ಎಂಬ ಭರವಸೆ ಕೊಟ್ಟಿದ್ದಾರೆ ಎಂದರು.
ಈ ವೇಳೆ ಕರುನಾಡ ರಾಷ್ಟ್ರೀಯ ಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿ ನರಸಿಂಹಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜಿತಾ, ರಾಜ್ಯ ಖಜಾಂಚಿ ಕುಮಾರ್, ರಾಜ್ಯ ಸಮಿತಿ ನಿರ್ದೇಶಕರಾದ ಚಂದ್ರಿಕಾ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.



