ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ಬಡ ಮಕ್ಕಳ ಶಿಕ್ಷಣ ಹಾಗೂ ಪ್ರಗತಿಯಲ್ಲಿ ಸ್ವರ್ಗವನ್ನು ಕಂಡವರು ಕೆಸಿ ರಂಗಯ್ಯನವರು. ಕೆ ಸಿ ರಂಗಯ್ಯನವರು ದಲಿತ, ಹಿಂದುಳಿದ, ಆರ್ಥಿಕವಾಗಿ ಕಷ್ಟದಲ್ಲಿದ್ದವರಿಗೆ ಚಾಮರಾಜನಗರದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ, ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ. ಸಮಾಜದ ಪ್ರಗತಿಗೆ ಪೂರಕವಾದ ಬಡವರ ಸಹಾಯ ನಿಷ್ಠೆ ಹೊಂದಿದ್ದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕೆಸಿಆರ್ ಅವರ 99ನೇ ಜನ್ಮದಿನೋತ್ಸವ ಹಾಗೂ ಚಾಮರಾಜನಗರಕ್ಕೆ ಅವರ ಶಿಕ್ಷಣ ಕೊಡುಗೆಗಳ ಕುರಿತು ಮಾತನಾಡುತ್ತಾ ಚಾಮರಾಜನಗರ ಹಿಂದುಳಿದ ಪ್ರದೇಶವಾಗಿತ್ತು.ಕಳೆದ ನಾಲ್ಕೈದು ದಶಕಗಳ ಹಿಂದೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿದವರು. ಸದಾಕಾಲ ಖಾದಿ ವಸ್ತ್ರಧಾರಿಗಳಾಗಿ,ಸರಳ ಜೀವನವನ್ನು ನಡೆಸಿ ಪ್ರತಿ ಮನೆಗೂ ಶಿಕ್ಷಣ ಹಾಗೂ ಉದ್ಯೋಗವನ್ನು ದೊರಕಿಸಿ ಕೊಡುವಲ್ಲಿ ಅವರ ಪಾತ್ರ ಅಪಾರವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸುವ ಕಾರ್ಯಕ್ರಮವನ್ನು ಮಾಡುವ ಮೂಲಕ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕಾಗಲವಾಡಿ ರಂಗಸ್ವಾಮಿ ಮಾತನಾಡಿ ಕೆ ಸಿ ರಂಗಯ್ಯನವರು ಕಾಗಲವಾಡಿ ಗ್ರಾಮದವರು.ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ಆಯ್ಕೆ ಹೊಂದಿದವರು. ಬಾಲ್ಯದಿಂದಲೂ ನೊಂದವರ ಬಡ ಜನರ ಪರವಾಗಿದ್ದ ಕೆ ಸಿ ರಂಗಯ್ಯನವರು ಚಾಮರಾಜನಗರದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಅನ್ನ ಮತ್ತು ಅಕ್ಷರ ನೀಡಿದ ಮಹಾತ್ಮರು. ಕನ್ನಡ ಸಾಹಿತ್ಯ ಪರಿಷತ್ತು ಕೆಸಿ ರಂಗಯ್ಯನವರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ರೂಪಿಸಿದ ಅಧ್ಯಕ್ಷರಾದ ಋಗ್ವೇದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಮುಖಂಡರು ಹಾಗೂ ಜನಪದ ರವಿಚಂದ್ರ ಪ್ರಸಾದ್ ಕಹಳೆ ಮಾತನಾಡಿ ಕೆ ಸಿ ರಂಗಯ್ಯನವರು ದಲಿತರ ಆಶಾಕಿರಣರಾಗಿದ್ದವರು . ಶ್ರೀರಾಮಚಂದ್ರ ಶಿಕ್ಷಕರ ತರಬೇತಿ ಶಾಲೆ ಪ್ರೌಢಶಾಲೆ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿ ಸಾವಿರಾರು ಜನರಿಗೆ ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿ ಮಾಡಿ ಸಾವಿರಾರು ಜನರ ಅಭಿವೃದ್ಧಿಗೆ ಕಾರಣರಾದವರು ಅವರ ಶತಮಾನೋತ್ಸವ ಮುಂದಿನ ವರ್ಷ ಆಗಲಿದ್ದು ಸರ್ವರೂ ಸೇರಿ ವಿಶೇಷವಾಗಿ ಆಚರಿಸುವ ಕಾರ್ಯ ಮಾಡೋಣ ಎಂದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಮಾಜಿ ರಾಜ್ಯಪಾಲರಾದ ಬಿ ರಾಚಯ್ಯನವರ ಒಡನಾಡಿಗಳಾಗಿದ್ದ ಕೆಸಿ ರಂಗಯ್ಯನವರು ಚಾಮರಾಜನಗರ ಜಿಲ್ಲೆಯಲ್ಲಿ ವಿಶೇಷ ಪ್ರಭಾವ ಹೊಂದಿದ ವ್ಯಕ್ತಿ. ಮಕ್ಕಳಿಗೆ ಸ್ಪೂರ್ತಿ ಯಾಗಿದ್ದವರು ಎಂದು ತಿಳಿಸಿದರು.
ಕೆ ಸಿ ರಂಗಯ್ಯ ಕುರಿತು ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಶಿವಲಿಂಗ ಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಮೇಶ್ ರವಿ,ಮುರುಗೇಶ್, ನಂಜಪ್ಪ, ಬಸವರಾಜ್ ಮುಂತಾದವರು ಇದ್ದರು.



