ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಸ್ವಾರ್ಥರಹಿತವಾಗಿ ಸುಮಾರು ಐದು ದಶಕಗಳ ಕಾಲ ಜನಪರ ಮತ್ತು ನೀರಾವರಿ ವಿಚಾರಗಳ ಬರಹಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಜಿ.ಎಸ್. ಉಜ್ಜಿನಪ್ಪನವರ ಸೇವೆ ಅಮರವಾಗಿದೆ. ಅವರು ಬರಹಗಾರರಾಗಿ, ಸಾಹಿತಿಯಾಗಿ ಹಾಗೂ ಆಂಗ್ಲ ಭಾಷೆಯ ಸಮರ್ಥ ವರದಿಗಾರರಾಗಿ ಸಲ್ಲಿಸಿರುವ ಸೇವೆ ಎಂದಿಗೂ ಸ್ಮರಣೀಯ" ಎಂದು ಹಿರಿಯ ಪತ್ರಕರ್ತ ಎನ್.ಎಲ್. ಬಸವರಾಜ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪನವರ ಸ್ಮರಣಾರ್ಥ ಆಯೋಜಿಸಿದ್ದ 'ನುಡಿನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೈಜ ವರದಿಗಾರಿಕೆಗೆ ಮಾರ್ಗದರ್ಶಕರಾಗಿದ್ದರು
ಚಿತ್ರದುರ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಜಿ.ಎಸ್. ಉಜ್ಜಿನಪ್ಪನವರ ಕಾರ್ಯವೈಖರಿಯನ್ನು ಸ್ಮರಿಸಿದ ಬಸವರಾಜ್ ಅವರು, "ಉಜ್ಜಿನಪ್ಪನವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾಗಲೂ ಅತ್ಯಂತ ಲವಲವಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸುದ್ದಿ ಸಂಗ್ರಹಿಸುತ್ತಿದ್ದರು.
ನಾಡಿನ ಪ್ರಸಿದ್ಧ ಕವಿಗಳು ಬರೆದ ಕವಿತೆ ಮತ್ತು ಹಾಡುಗಳನ್ನು ಹಾಡುತ್ತಾ, ಅವುಗಳ ಆಳವಾದ ಅರ್ಥವನ್ನು ವಿಶ್ಲೇಷಿಸುತ್ತಿದ್ದ ಅವರ ಮಾತುಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಗುನುಗುತ್ತಿವೆ. ಅವರ ನೈಜ ವರದಿಗಳು, ಶಿಸ್ತು ಮತ್ತು ಸ್ನೇಹಪರ ಚಿಂತನೆಗಳು ಇಂದಿನ ಯುವ ಬರಹಗಾರರಿಗೆ ಹಾಗೂ ಪತ್ರಕರ್ತರಿಗೆ ಸದಾ ಮಾರ್ಗದರ್ಶನ ನೀಡುತ್ತವೆ" ಎಂದು ಗುಣಗಾನ ಮಾಡಿದರು.
ಈ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಲ್. ಗಿರಿಧರ್, ಪ್ರಧಾನ ಕಾರ್ಯದರ್ಶಿ ಚಿದಾನಂದ್ ಎಂ. ಮಸ್ಕಲ್, ಪತ್ರಕರ್ತರಾದ ಖಂಡೇನಹಳ್ಳಿ ಬಸವರಾಜ್, ರಮೇಶ್ ಬಿದರಿಕೆರೆ, ರಾಜಣ್ಣ, ಶಿವಶಂಕರ್ ಮಠದ್, ಪ್ರಸನ್ನ, ಹನುಮಂತರಾಯ, ಸಾಮಾಜಿಕ ಕಾರ್ಯಕರ್ತ ಚಮನ್ ಷರಿಪ್, ಡಾ. ತ್ರಿವೇಣಿ ಸೇರಿದಂತೆ ಹಲವು ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದು ಮೃತರಿಗೆ ಆದರದ ನಮನ ಸಲ್ಲಿಸಿದರು.



