ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ನನಗೆ ಯಾವುದೇ ಪ್ರತಿಷ್ಠೆಯಿಲ್ಲ. ಯಾರೂ ಸಹ ರಸ್ತೆ ತಡೆದು ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ಜಮೀನು ನೀಡಲು ಇಷ್ಟವಿಲ್ಲದವರು ನೀಡಬಾರದು," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಡದಿಯ ಬೈರಮಂಗಲ ರೈತರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ, "ಭೂಮಿ ನೀಡಲು ಇಷ್ಟವಿದ್ದವರು ಕೊಡುತ್ತಾರೆ, ಬೇಡವಾದವರು ಬಿಡುತ್ತಾರೆ. ಬದುಕಲು ಹಣ ಬೇಕು ಎನ್ನುವವರು ಜಮೀನು ಕೊಡಬಹುದು. ಯಾರನ್ನೂ ಒತ್ತಾಯಿಸುವುದಿಲ್ಲ," ಎಂದರು.
ಇದೇ ವೇಳೆ ವಿವಿಧ ವಿಷಯಗಳ ಕುರಿತು ಅವರು ನೀಡಿದ ಪ್ರಮುಖ ಹೇಳಿಕೆಗಳು ಇಲ್ಲಿವೆ.
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ: "ನಾವು ಹೇಳಿದ ಅಂಶಗಳನ್ನೇ ಚುನಾವಣಾ ಆಯೋಗದ ಇಬ್ಬರು ಆಯುಕ್ತರು ಒಪ್ಪಿಕೊಂಡಿದ್ದಾರೆ. ನಡವಳಿಕೆ ಸರಿಯಿಲ್ಲ ಎಂದು ಸ್ವತಃ ಆಯೋಗದವರೇ ಹೇಳಿದ್ದು, ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯ. ಆದರೆ, ಈಗ ಬೆದರಿಸಿ ವಿಷಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ," ಎಂದು ಆರೋಪಿಸಿದರು.
ದೆಹಲಿಯಲ್ಲಿ ವಿರೋಧ ಪಕ್ಷಗಳ ಮಹತ್ವದ ಸಭೆ: ವೋಟ್ ಚೋರಿ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ಚರ್ಚಿಸಲು ದೆಹಲಿಯಲ್ಲಿ ವಿಪಕ್ಷಗಳ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದ ಅಕ್ರಮಗಳು ಈಗ ಸಾಬೀತಾಗಿದ್ದು, ಈ ಕುರಿತು ದೆಹಲಿಯಲ್ಲಿ ಮುಂದಿನ ತಂತ್ರಗಾರಿಕೆ ಚರ್ಚಿಸಲಾಗುವುದು ಎಂದು ಹೇಳಿದರು.
ನಿಗಮ ಮಂಡಳಿ ನೇಮಕಾತಿ: ನಿಗಮ ಮಂಡಳಿಗಳ ನೇಮಕಾತಿ ಕುರಿತು ಈಗಾಗಲೇ ದೆಹಲಿಯಲ್ಲಿ ಹೈಕಮಾಂಡ್ ಹಂತದಲ್ಲಿ ತೀರ್ಮಾನವಾಗಿದೆ. ಮೊದಲು ಹಿರಿಯ ಶಾಸಕರಿಗೆ ಸ್ಥಾನ ಹಂಚಿಕೆಯಾಗಲಿದ್ದು, ಆ ಬಳಿಕ ತಕ್ಷಣವೇ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ನಾಪತ್ತೆಯಾದ ಕೆಆರ್‌ಐಡಿಎಲ್‌ಎಇಇ ಎಳೆದು ತರುತ್ತೇವೆ: ಗದಗ ಕೆಆರ್‌ಐಡಿಎಲ್‌ಎಇಇ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ ಅವರು, "ಸದರಿ ಅಧಿಕಾರಿಯ ಲೊಕೇಶನ್ ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ. ಅವರು ಈ ಹಿಂದೆ ಸಹ ನಾಪತ್ತೆಯಾಗಿದ್ದರು. ನಿಯಮದಂತೆ ಕಾರ್ಯಸ್ಥಳಕ್ಕೆ ಭೇಟಿ ನೀಡಿ ಕೆಲಸ ಮಾಡುವ ಬದಲು ಕರ್ತವ್ಯ ಲೋಪ ಎಸಗುತ್ತಿದ್ದಾರೆ. ತನಿಖೆಗೆ ಸಹಕರಿಸದ ಅವರನ್ನು ಶೀಘ್ರದಲ್ಲೇ ಎಳೆದು ತರಲಾಗುವುದು," ಎಂದು ಎಚ್ಚರಿಸಿದರು.




