ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು 'ದೇಶದ್ರೋಹಿಗಳು' ಎಂದು ಕರೆದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರ ಈ ನಡವಳಿಕೆ ಅವರ 'ಭಾರತ ವಿರೋಧಿ ಮತ್ತು ದೇಶದ್ರೋಹಿ ಮನಸ್ಥಿತಿ'ಯನ್ನು ಅನಾವರಣಗೊಳಿಸಿದೆ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಕಾಂಗ್ರೆಸ್ ಪಕ್ಷದ ಇತಿಹಾಸ ಹಾಗೂ ಹಗರಣಗಳನ್ನು ಪಟ್ಟಿ ಮಾಡಿ ರಾಹುಲ್ ಗಾಂಧಿ ಮತ್ತು ಎಐಸಿಸಿ ವಿರುದ್ಧ ತೀಕ್ಷ್ಣವಾದ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ವಿಜಯೇಂದ್ರ ಅವರು ಎತ್ತಿರುವ ಪ್ರಮುಖ ಪ್ರಶ್ನೆಗಳು ಮತ್ತು ಆರೋಪಗಳು:ಭಯೋತ್ಪಾದನೆಯ ಪೋಷಣೆ: "ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಗಳಿಸಿದ ಭವ್ಯ ಭಾರತದಲ್ಲಿ ಭಯೋತ್ಪಾದನೆಯ ಬೀಜ ಬಿತ್ತಿದವರು ಯಾರು? ಅದಕ್ಕೆ ನೀರೆರೆದು ಪೋಷಿಸಿದವರು ಯಾರು? ಎಂಬುದು ದೇಶದ ಜನತೆಗೆ ತಿಳಿದಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಶಾಂತಿಯ ನೆಲೆಯಾಗಿದ್ದ ಭಾರತದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕಲಾಯಿತು" ಎಂದು ಆರೋಪಿಸಿದ್ದಾರೆ.
ಕಾಶ್ಮೀರಿ ಪಂಡಿತರ ನರಮೇಧ: ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ನಡೆದಾಗ ಮತ್ತು ಅವರನ್ನು ಮೂಲೋತ್ಪಾಟನೆ ಮಾಡಿದಾಗ ಕಾಶ್ಮೀರವನ್ನು ರಕ್ಷಿಸಲು ವಿಫಲವಾದ ನೀವು ದೇಶಪ್ರೇಮಿಯೋ ಅಥವಾ ದೇಶದ್ರೋಹಿಯೋ ಎಂದು ಪ್ರಶ್ನಿಸಿದ್ದಾರೆ.
ವಿದೇಶದಲ್ಲಿ ಭಾರತದ ನಿಂದನೆ: ವಿದೇಶಿ ಮಣ್ಣಿನಲ್ಲಿ ನಿಂತು ಭಾರತದ ಗೌರವವನ್ನು ಹರಾಜು ಹಾಕುವ ರಾಹುಲ್ ಗಾಂಧಿ ಅವರ ನಡವಳಿಕೆಯನ್ನು ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಶಸ್ತ್ರಾಸ್ತ್ರ ಖರೀದಿಯಲ್ಲಿ ಕಮಿಷನ್: ದೇಶವನ್ನು ರಕ್ಷಿಸುವ ಬೊಫೋರ್ಸ್ ಫಿರಂಗಿ ಹಗರಣದಂತಹ ಶಸ್ತ್ರಾಸ್ತ್ರಗಳ ಖರೀದಿಯಲ್ಲೂ ಕಮಿಷನ್ ನುಂಗಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ನೆನಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಗರಣ: ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪರಿಶ್ರಮದ ಹಣದಿಂದ ಕಟ್ಟಿದ 'ನ್ಯಾಷನಲ್ ಹೆರಾಲ್ಡ್' ಸಂಸ್ಥೆಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
"ದೇಶದ್ರೋಹಿ ಮನಸ್ಥಿತಿಗೆ ಕೊನೆಯಿಲ್ಲ":
"ಕಾಂಗ್ರೆಸ್ ಪಕ್ಷದ ದೇಶದ್ರೋಹಿ ಮನಸ್ಥಿತಿಯ ನಡವಳಿಕೆಗಳನ್ನು ಪಟ್ಟಿ ಮಾಡಲು ಹೋದರೆ ಅದಕ್ಕೆ ಕೊನೆಯೇ ಇಲ್ಲ. ಜಗತ್ತಿನ ಎದುರು ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿದು, ದೇಶವನ್ನು ಸಂರಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜೀ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ದೇಶದ್ರೋಹಿಗಳು ಎನ್ನುವ ಮೂಲಕ ರಾಹುಲ್ ಗಾಂಧಿ ತಾವೊಬ್ಬ 'ಭಾರತ ವಿರೋಧಿ' ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ" ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ಹಾಗೂ ಗೃಹ ಸಚಿವರ ವಿರುದ್ಧ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ದೇಶದ ರಾಜಕೀಯ ವಲಯದಲ್ಲಿ ಈಗ ತೀವ್ರ ಸಂಚಲನ ಹಾಗೂ ವಾಗ್ವಾದಕ್ಕೆ ಕಾರಣವಾಗಿದೆ.



