ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗ ಪೂಜೆ ವೇಳೆ ಹಿಂದೂ ಭಕ್ತರ ಮೇಲೆ ದಾಳಿ ನಡೆಸಿದ್ದ ಮುಸ್ಲಿಂ ಕೋಮುವಾದಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಅವರು ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿ.ಟಿ. ರವಿ, ಕಾಂಗ್ರೆಸ್ ಸರ್ಕಾರವು ಕೇವಲ 'ವೋಟ್ ಬ್ಯಾಂಕ್' ರಾಜಕಾರಣಕ್ಕಾಗಿ ಕೋಮುವಾದಿ ಹಾಗೂ ಕ್ರಿಮಿನಲ್ ಶಕ್ತಿಗಳಿಗೆ ಅಧಿಕೃತವಾಗಿ ಬೆಂಬಲ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿಂದೂ ಕಾರ್ಯಕರ್ತರಿಗೆ ಕಿರುಕುಳ, ಮುಸ್ಲಿಂ ಗೂಂಡಾಗಳಿಗೆ ಮುಕ್ತಿ:
ರಾಜ್ಯ ಸರ್ಕಾರವು ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ ರೌಡಿ ಶೀಟರ್‌ಗಳನ್ನು ತೆರೆದು ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಂಭೀರ ಪ್ರಕರಣಗಳ ಮನ್ನಾ:
ಇನ್ನೊಂದೆಡೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟುಮಾಡಿದ, ಬೆಂಕಿ ಹಚ್ಚಿದ ಮುಸ್ಲಿಂ ಮೂಲಭೂತವಾದಿ ಗೂಂಡಾಗಳ ವಿರುದ್ಧದ ಗಂಭೀರ ಸ್ವರೂಪದ ಕೇಸ್‌ಗಳನ್ನು ಸರ್ಕಾರ ಹಿಂಪಡೆಯುತ್ತಿದೆ. ಇಂತಹ ದ್ವೇಷದ ಮತ್ತು ಹಿಂಸಾತ್ಮಕ ಕೃತ್ಯಗಳ ಪ್ರಕರಣಗಳನ್ನು ರದ್ದುಗೊಳಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸಮಾಜಕ್ಕೆ ಎಂತಹ ಸಂದೇಶ ನೀಡಲು ಹೊರಟಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಕಮ್ಯುನಲ್-ಕ್ರಿಮಿನಲ್‌ಗಳ ಪರ:
ಜನರ ನೆಮ್ಮದಿಗೆ ಕೊಳ್ಳಿ ಇಟ್ಟ ಮತಾಂಧರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ತನಗೆ ಕೇವಲ ವೋಟ್ ಬ್ಯಾಂಕ್ ಅಷ್ಟೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ತಾನು ಕಮ್ಯುನಲ್ ಮತ್ತು ಕ್ರಿಮಿನಲ್‌ಗಳ ಪರವಾಗಿ ನಿಂತಿದ್ದೇನೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಿ.ಟಿ. ರವಿ ನೇರ ವಾಗ್ದಾಳಿ ನಡೆಸಿದ್ದಾರೆ.
'ಆದೇಶ ತಕ್ಷಣವೇ ಕೈಬಿಡಿ-
"ಕಲಬುರಗಿಯ ಆಳಂದದಲ್ಲಿ ನಡೆದ ಘಟನೆಗಳು ಅತ್ಯಂತ ಗಂಭೀರ ಸ್ವರೂಪದ ಕ್ರಿಮಿನಲ್ ಕೃತ್ಯಗಳಾಗಿವೆ. ಈ ಪ್ರಕರಣಗಳನ್ನು ಹಿಂಪಡೆಯುವ ತನ್ನ ನಿರ್ಧಾರ ಮತ್ತು ಆದೇಶವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಒಂದು ವೇಳೆ ಸರ್ಕಾರ ಹಠಕ್ಕೆ ಬಿದ್ದು ಪ್ರಕರಣಗಳನ್ನು ಹಿಂಪಡೆದರೆ, ಕೋಮುವಾದಿ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಬೆಂಬಲ ನೀಡಿದಂತಾಗುತ್ತದೆ" ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.
ಹಿನ್ನೆಲೆ:
ಕಲಬುರಗಿ ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿ ವೇಳೆ ಪೂಜೆ ಸಲ್ಲಿಸುವ ವಿಚಾರವಾಗಿ 2022ರಲ್ಲಿ ಭಾರಿ ಕೋಮು ಗಲಭೆ ನಡೆದಿತ್ತು.
ಈ ವೇಳೆ ಕಲ್ಲು ತೂರಾಟ, ವಾಹನಗಳ ಜಖಂ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಮುದಾಯದ ಯುವಕರ ಮೇಲಿನ ಕೇಸ್‌ಗಳನ್ನು ಹಿಂಪಡೆಯಲು ಇತ್ತೀಚೆಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಸದ್ಯ ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.



