ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಕಸಬಾ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ತಿಮ್ಮಪ್ಪ ದೊಡ್ಡ ದೇವರ ಜಾತ್ರಾ ಮಹೋತ್ಸವವು ದಿನಾಂಕ: 07-08-2026ರ ಶುಕ್ರವಾರದಿಂದ 08-08-2026ರ ಶನಿವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ 1948ನೇ ಪರಾಭವನಾಮ ಸಂವತ್ಸರದ ಆಷಾಢ ಬಹುಳ ನವಮಿ ಹಾಗೂ ದಶಮಿಯಂದು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವ ನಡೆಸಲು ಗುರು-ಹಿರಿಯರು ನಿಶ್ಚಯಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ:
ದಿನಾಂಕ: 07-08-2026 ಶುಕ್ರವಾರ: ರಾತ್ರಿ 9.00 ರಿಂದ 10.00 ಗಂಟೆಗೆ: ಕಂಟಲೆ ಪೂಜೆ ಅದ್ಧೂರಿಯಾಗಿ ನಡೆಯಿತು.
ದಿನಾಂಕ: 08-08-2026 (ಶನಿವಾರ): ಬೆಳಿಗ್ಗೆ 5.00 ರಿಂದ 6.00 ಗಂಟೆಗೆ: ಸ್ವಾಮಿ ಬಿಲ್ಲು ಗುಡಿಗೆ ತೆರಳುವುದು.
ಬೆಳಿಗ್ಗೆ 8.00 ರಿಂದ 10.00 ಗಂಟೆಗೆ: ಭಕ್ತಾದಿಗಳಿಂದ ಹೆಜ್ಜೆ ನಮಸ್ಕಾರ, ಉಂಡೆ ಹಾಗೂ ಮಂಡೆ ಸೇವೆ. ಬೆಳಿಗ್ಗೆ 11.00 ಗಂಟೆಗೆ: 101 ದೊಡ್ಡ ಎಡೆ ಪೂಜೆ ಮತ್ತು ಭೂತನ ಸೇವೆ, ನಂತರ ತೀರ್ಥ ಪ್ರಸಾದ ವಿನಿಯೋಗ. ಮಧ್ಯಾಹ್ನ 2.00 ಗಂಟೆಯಿಂದ: ಭಕ್ತಾದಿಗಳಿಗೆ ಅನ್ನಸಂತರ್ಪಣೆ.
ಈ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀ ತಿಮ್ಮಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಹಾಗೂ ಜಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿ ಜಾತ್ರಾ ಸಮಿತಿಯ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.



