ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಬಿಗ್ ಅಪ್ಡೇಟ್ ನೀಡಿದೆ.
ವಿಡಿಯೋದಲ್ಲಿ ಬರುವ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಕಟ್ಟುಕಥೆ ಎಂದು ಹೇಳಿರುವ ಸಿಸಿಬಿ, ಮಾಜಿ ಸಿಎಂ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಿಂಬಿಸಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಸಂಪೂರ್ಣ ಸುಳ್ಳು. ಇದು ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಸಿಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ತನಿಖೆಯಲ್ಲಿ ಬಯಲಾದ ಪ್ರಮುಖ ಅಂಶಗಳು: ಸಾಕ್ಷ್ಯಾಧಾರಗಳ ಕೊರತೆ: ವಿಡಿಯೋದಲ್ಲಿ ಚಿತ್ರಿಸಿರುವಂತಹ ಯಾವುದೇ ಘಟನೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ.
ವಿಸ್ತೃತ ವಿಚಾರಣೆ: ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಗುರುತಿಸಿ, ಸಮಗ್ರವಾಗಿ ವಿಚಾರಣೆ ನಡೆಸಲಾಗಿದೆ. ಅಗತ್ಯವಿದ್ದವರನ್ನು ಒಂದಕ್ಕಿಂತ ಹೆಚ್ಚು ಬಾರಿಯೂ ವಿಚಾರಣೆಗೆ ಒಳಪಡಿಸಲಾಗಿದೆ.
ಆರೋಪಗಳು ಕಟ್ಟುಕಥೆ: ವಿಚಾರಣೆ ವೇಳೆ ಪಡೆದ ಹೇಳಿಕೆಗಳು ಮತ್ತು ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ, ಉಲ್ಲೇಖಿತ ವ್ಯಕ್ತಿಗಳ ವಿರುದ್ಧ ಮಾಡಲಾದ ಆರೋಪಗಳು ಆಧಾರರಹಿತ ಹಾಗೂ ಹೆಣೆದ ಕಥೆ ಎಂಬುದು ದೃಢಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕೋನಗಳಿಂದಲೂ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.



