ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗೌರಿಬಿದನೂರಿನ ಹಿರಿಯ ವಕೀಲರಾದ ಸಣ್ಣಕ್ಕಿ ವೆಂಕಟರಮಣಪ್ಪ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ವತಿಯಿಂದ ಬುಧವಾರ ದೊಡ್ಡಬಳ್ಳಾಪುರ ನ್ಯಾಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಕೀಲರು ತಮ್ಮ ವೈಯಕ್ತಿಕ ಆರೋಗ್ಯವನ್ನೂ ಲೆಕ್ಕಿಸದೆ ಕಕ್ಷಿದಾರರಿಗೆ ನ್ಯಾಯ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಇಂತಹ ಜವಾಬ್ದಾರಿಯುತ ವೃತ್ತಿಯನ್ನು ನಿರ್ವಹಿಸುವ ವಕೀಲರು ಮಾನಸಿಕ ಒತ್ತಡದ ನಡುವೆಯೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳು ಅತ್ಯಂತ ದುರದೃಷ್ಟಕರ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ರಕ್ಷಣೆಗಾಗಿ ಅಡ್ವಕೇಟ್ ಪ್ರೊಟೆಕ್ಷನ್ ಆಕ್ಟ್ ಜಾರಿಯಲ್ಲಿದ್ದರೂ ಇಂತಹ ಆಘಾತಕಾರಿ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವಕೀಲರ ಮೇಲೆ ನಡೆಯುವ ಹಲ್ಲೆಗಳನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಕನಕರಾಜ್, ಉಪಾಧ್ಯಕ್ಷ ಜಗನ್ನಾಥ್ ಕೆ., ಖಜಾಂಚಿ ಗೀತಾ, ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ, ಪದಾಧಿಕಾರಿಗಳು, ಹಿರಿಯ ವಕೀಲರಾದ ಕೃಷ್ಣಮೂರ್ತಿ, ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಬೈರೇಗೌಡ, ಮಾಜಿ ಉಪಾಧ್ಯಕ್ಷ ಎಂ.ಆರ್. ಸುರೇಶ್ ಸೇರಿದಂತೆ ಸಂಘದ ಎಲ್ಲಾ ವಕೀಲ ಸದಸ್ಯರು ಹಾಜರಿದ್ದರು.



