ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಚುನಾವಣೆ ಮತ್ತು ಮತದಾನದ ವೇಳೆ ನಡೆದ ಅಡ್ಡಮತದ ಪ್ರಹಸನ ಹಾಗೂ ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಡ್ಡಮತದ ಮೂಲಕ ಗೆಲುವು ಸಾಧಿಸಿದೆವೆಂದು ಬೀಗುತ್ತಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಅವರು, "#CrossVoteCongress ಶೂನ್ಯಕ್ಕಿಳಿದಿದೆ" ಎಂದು ವ್ಯಂಗ್ಯವಾಡಿದ್ದಾರೆ.
ಅಡ್ಡಕಸಬಿಗಳ ಆತ್ಮಾವಲೋಕನದ ಸಮಯ:
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, "ಗೆದ್ದ ನಮ್ಮವರು ನಾಲ್ವರು ಅಡ್ಡಮತ ಪಡೆದ ಅಭ್ಯರ್ಥಿಗಳಲ್ಲ. ಬದಲಿಗೆ, ಪಕ್ಷಕ್ಕೆ ದ್ರೋಹ ಬಗೆದು ಅಡ್ಡಮತ ಹಾಕಿದ ಅಡ್ಡಕಸಬಿಗಳ ಆತ್ಮಾವಲೋಕನಕ್ಕೆ ಇದು ಸೂಕ್ತ ಕಾಲ" ಎಂದು ಕಟುವಾಗಿ ವೀರೋಧ ವ್ಯಕ್ತಪಡಿಸಿದ್ದಾರೆ.
ಅಡ್ಡಮತದ ಫಲಾನುಭವಿಗೆ ಎಚ್ಚರಿಕೆ:
ಕಾಂಗ್ರೆಸ್ ಪಕ್ಷವು ಹಿಂಬಾಗಿಲ ರಾಜಕಾರಣ ಹಾಗೂ ಅಡ್ಡಮತದ ಫಲಾನುಭವಿಯಾಗಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, "ಅಡ್ಡಮತದ ಫಲಾನುಭವಿಯನ್ನು ನಮ್ಮ ಎನ್‌ಡಿಎ ವೀರರು ಮುಂಬರುವ ದಿನಗಳಲ್ಲಿ ಸಮರ್ಥವಾಗಿ ಎದುರಿಸಲಿದ್ದಾರೆ" ಎಂದು ಸವಾಲು ಎಸೆದಿದ್ದಾರೆ.
ಶೂನ್ಯಕ್ಕಿಳಿದ ಕಾಂಗ್ರೆಸ್ ಲೆಕ್ಕಾಚಾರ: ಅಡ್ಡಮತದ ರಾಜಕೀಯ ತಂತ್ರಗಾರಿಕೆ ನಡೆಸಿದ ಕಾಂಗ್ರೆಸ್‌ಗೆ ಅಂತಿಮವಾಗಿ ಯಾವುದೇ ನೈತಿಕ ಅಥವಾ ರಾಜಕೀಯ ಲಾಭ ಸಿಕ್ಕಿಲ್ಲ. ಮೈತ್ರಿಕೂಟದ ಒಗ್ಗಟ್ಟನ್ನು ಮುರಿಯಲು ಕಾಂಗ್ರೆಸ್ ಹೆಣೆದಿದ್ದ ಜಾಲ ಸಂಪೂರ್ಣವಾಗಿ ವಿಫಲವಾಗಿದ್ದು, ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರ ಶೂನ್ಯಕ್ಕಿಳಿದಿದೆ ಎಂದು ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ.
ಎನ್‌ಡಿಎ ಒಗ್ಗಟ್ಟು: ಜೆಡಿಎಸ್ ಮತ್ತು ಬಿಜೆಪಿ ಎನ್‌ಡಿಎ ಮೈತ್ರಿಕೂಟವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಅಡ್ಡಮತದ ಮೂಲಕ ತಾತ್ಕಾಲಿಕ ಲಾಭ ಪಡೆಯಲು ಯತ್ನಿಸಿದ ನಾಯಕರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ದೃಢವಾಗಿ ಹೇಳಿದ್ದಾರೆ.
ರಾಜಕೀಯ ವಿಶ್ಲೇಷಣೆ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ಜೆಡಿಎಸ್ ಶಾಸಕರ ಅಡ್ಡಮತದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್.ಡಿ. ಕೆ, ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಶಿಸ್ತುಕ್ರಮದ ಸುಳಿವು ನೀಡುವ ಜತೆಗೆ, ಇದನ್ನು ಪ್ರಚೋದಿಸಿದ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಸಾರ್ವತ್ರಿಕ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟವು ಈ ಅಡ್ಡಮತದ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಲಿದೆ ಎಂಬುದು ಎಚ್.ಡಿ.ಕುಮಾರಸ್ವಾಮಿ ಅವರ ಈ ಪೋಸ್ಟ್‌ನಿಂದ ಸ್ಪಷ್ಟವಾಗುತ್ತದೆ.



