ಚಂದ್ರವಳ್ಳಿ ನ್ಯೂಸ್, ಕೋಲಾರ:
ಪದೇ ಪದೇ ಓದಬಹುದಾದ ಪುಸ್ತಕಗಳು ಕೆಲವಿದ್ದಾವೆ. ಅವುಗಳಲ್ಲಿ ಧಮ್ಮಪದ ಒಂದು. ಇದು ಪ್ರಮುಖವಾಗಿ ಬುದ್ಧನ ವಚನಗಳ ಸಂಗ್ರಹ. ಬುದ್ಧನ ವಚನಗಳ ಜೊತೆಗೆ ಬೌದ್ಧ ಪರಂಪರೆಯ ಅನೇಕರು ಧ್ಯಾನಿಸಿದ ಸಂಗತಿಗಳಿವೆ.
ಈ ಕೃತಿಯ ಕುರಿತು ನಾನೇಕೆ ಬರೆಯುತ್ತಿದ್ದೇನೆ ಎಂದರೆ ಇದನ್ನು ನಾನು ಹತ್ತಾರು ಸಾರಿ ಓದಿದ್ದೇನೆ ಮತ್ತು ಈಗಲೂ ಓದುತ್ತಿದ್ದೇನೆ. ಮೈಸೂರಿನಲ್ಲಿ ಪಿಎಚ್ ಡಿ ಮಾಡುತ್ತಿದ್ದಾಗ ಕ್ಯಾಸೆಟ್ ಮೂಲಕ ಓಶೋ ಅವರ ಪ್ರವಚನಗಳನ್ನು ಕೇಳುತ್ತಿದ್ದೆ. ಜಗತ್ತಿನ ಮಹತ್ವದ ಕೃತಿಗಳು ಅವರ ಮೂಲಕ ಪರಿಚಯವಾಗತೊಡಗಿದವು. ಧಮ್ಮಪದ ಮತ್ತು ಟಾವೋ ತ್ಸೆ ಚಿಂಗ್ ನನ್ನನ್ನು ಸೆಳೆದವು. ಇಂದು ಧಮ್ಮಪದದ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ, ಇದರ ಪರಿಚಯದಿಂದ ಮಹತ್ವದ ಜ್ಞಾನ ಸಿಗಬಹುದು ಎಂಬ ನಿರೀಕ್ಷೆಯಿಂದ.
ಪಾಲಿ ಭಾಷೆಯ ‘ಖುದ್ದಕ ನಿಕಾಯ’ದ ಭಾಗವಾಗಿದ್ದ ಧಮ್ಮಪದವನ್ನು ಹಲವರು ಇಂಗ್ಲಿಷಿಗೆ ಅನುವಾದಿಸಿ ಹೊರಜಗತ್ತಿಗೆ ಪರಿಚಯಿಸಿದ್ದಾರೆ. 1840 ರಲ್ಲಿ ಡೇನಿಯಲ್ ಜಾನ್ ಗೊಗೆರ್ಲಿ ಎಂಬುವವರು ಶ್ರೀಲಂಕದಲ್ಲಿ ಈ ಧಮ್ಮಪದದ ಅನುವಾದವನ್ನು ತಂದರು. ನಂತರ 1870 ರಲ್ಲಿ ಬಹು ಪ್ರಸಿದ್ದ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಬಹು ಸೊಗಸಾದ ಇಂಗ್ಲಿಷ್ ಅನುವಾದವನ್ನು ಜಗತ್ತಿಗೆ ಕೊಟ್ಟರು. ಇದೇ ಅನುವಾದ ಹೆಚ್ಚು ಚಾಲ್ತಿಯಲ್ಲಿರುವುದು. ಜಗತ್ತಿನ ಬಹುತೇಕ ಭಾಷೆಗಳಿಗೆ ಧಮ್ಮಪದ ಅನುವಾದಗೊಂಡಿದೆ. ಕನ್ನಡದಲ್ಲೂ ಬಂದಿದೆ.
ಧಮ್ಮಪದ ಒಮ್ಮೆ ಓದಿ ಪಕ್ಕಕ್ಕಿಡುವ ಪುಸ್ತಕ ಇದಲ್ಲ. ಪ್ರತಿ ದಿನವೂ ಹತ್ತಿಪ್ಪತ್ತು ಗಾಥೆ ಅಥವಾ ವಚನ ಓದಿ ನಮಗೆ ಅನ್ವಯಿಸಿಕೊಳ್ಳಬೇಕಾದ ಕೃತಿ. ಒಟ್ಟು 423 ಗಾಥೆಗಳಿವೆ. ಶೀಲ, ಸಮಾಧಿ ಮತ್ತು ಪ್ರಜ್ಞೆಯನ್ನು ಉತ್ತೇಜಿಸುವ ಈ ಕೃತಿ ಜಗತ್ತಿಗೆ ದೀಪವಾಗಬಲ್ಲದು. ಇದನ್ನು ಓದುವ, ಕೇಳುವ ಬಯಕೆ ಇದ್ದರೆ ಸಾಕು. ಉಚಿತ ಪಿಡಿಎಪ್ ಗಳು ಕೂಡ ಗೂಗಲ್ ನಲ್ಲಿ ಸಿಗುತ್ತವೆ. ಯೂ ಟ್ಯೂಬ್ನಲ್ಲಿ ಉಚಿತವಾಗಿ ಪೂರ್ಣ ಕೃತಿಯನ್ನು ಕೇಳಿಸಿಕೊಳ್ಳಬಹುದು.
ಲೇಖಕರು:ಡಾ.ಶಿವಪ್ಪ ಅರಿವು, ಚಿಂತಕರು, ಕೋಲಾರ.



