ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಿಧನದ ಹಿನ್ನೆಲೆಯಲ್ಲಿ ನಡೆಯಲಿರುವ ಉಪಚುನಾವಣೆಗೆ ದಿನಾಂಕ ಘೋಷಣೆ ಆಗುವ ಮುನ್ನವೇ ವಿವಿಧ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಹತ್ತಾರು ವ್ಯಕ್ತಿಗಳು ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಕ್ಷೇತ್ರದಲ್ಲಿ ಅಘೋಷಿತ ಪ್ರಚಾರ ಆರಂಭಿಸಿರುವುದರಿಂದ ತಾಲ್ಲೂಕಿನಲ್ಲಿ ವಿಚಿತ್ರ ನಾಟಕೀಯ ಬೆಳವಣಿಗೆಗಳು ಜರುಗುತ್ತಿವೆ.
ನಿರಂತರ ಬರದ ಛಾಯೆ, ಅಂತರ್ಜಲ ಮಟ್ಟ ಕುಸಿತ, ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಕೊರತೆ, ಪುನಃಶ್ಚೇತನಗೊಳ್ಳದ ವಾಣಿ ಸಕ್ಕರೆ ಕಾರ್ಖಾನೆ, ಯುವಕರಿಗೆ ಉದ್ಯೋಗ, ಕುಂಟುತ್ತಾ ಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಂತೆ ತಾಲ್ಲೂಕಿನ ಜ್ವಲಂತ ಸಮಸ್ಯೆ ಕುರಿತು ಘೋಷಣೆಗಳು, ಹುಸಿ ಭರವಸೆಗಳು ಕ್ಷೇತ್ರದಲ್ಲಿ ಮತ್ತೆ ಮೊಳಗುತ್ತಿವೆ.
ಈ ಮಧ್ಯೆ ಬೆಂಗಳೂರಲ್ಲಿ ಭೇಟಿಯಾದ ಜಿಲ್ಲೆಯ ಶಾಸಕರು, ಮುಖಂಡರಿಗೆ 'ಅಭ್ಯರ್ಥಿ ಆಯ್ಕೆ ನಮ್ಮದು, ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಟಿಕೆಟ್ ಘೋಷಣೆ ಆಗುವ ಮುನ್ನವೇ ತಾನೇ ಅಭ್ಯರ್ಥಿ ಎಂದು ಬಿಂಬಿಕೊಳ್ಳಬಾರದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಆದಾಗ್ಯೂ ಅವರದೇ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಮಾತ್ರ ಕ್ಷೇತ್ರದಲ್ಲಿ ಸಭೆ ನಡೆಸಿ ಭರವಸೆಗಳ ಮಳೆಗರೆಯುವುದು ನಿಂತಿಲ್ಲ. ಇದುವರೆಗಿನ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಕ್ಷೇತ್ರದ ಹೊರಗಿನವರೇ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆ ಆಗಿರುವುದರಿಂದ ಈ ಬಾರಿ ಸ್ಥಳೀಯರು, ಹೊರಗಿನವರು ಎಂಬ ಹೊಸ ಮಂತ್ರವನ್ನು ಕೂಡ ಕೆಲವರು ಪಠಿಸುತ್ತಿದ್ದಾರೆ.
ಭರವಸೆಗಳು, ಆಮಿಷಗಳಿಗೆ ಒಳಗಾಗದೆ ಅರ್ಹ ವ್ಯಕ್ತಿಯನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂಬುದು ಪ್ರಜ್ಞಾವಂತರ ಅನಿಸಿಕೆ. ಆದರೆ ಮತದಾರರ ಚಿತ್ತ ಎತ್ತವಿದೆ ಎಂಬುದನ್ನು ಮತದಾನದ ದಿನದವರೆಗೆ ಕಾದು ನೋಡಬೇಕಿದೆ.
ಲೇಖಕರು:ಎಂ.ಜಿ. ರಂಗಸ್ವಾಮಿ, ಹಿರಿಯೂರು.



