ಚಂದ್ರವಳ್ಳಿ ನ್ಯೂಸ್, ಕಾಲಮಸ್ಸೇರಿ (ಕೇರಳ):
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇರಳದ ಕಾಲಮಸ್ಸೇರಿಯಲ್ಲಿರುವ ಹೆಚ್‌ಎಂಟಿ ಮೆಷಿನ್ ಅಂಡ್ ಟೂಲ್ಸ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಸುಧಾರಿತ ಎಂಜಿನಿಯರಿಂಗ್ ಹಾಗೂ ಉತ್ಪಾದನಾ ಸಾಮರ್ಥ್ಯಗಳನ್ನು ಪರಿಶೀಲಿಸಿದರು.
ಘಟಕದ ವಿವಿಧ ವಿಭಾಗಗಳಾದ ಮಷಿನ್ ಟೂಲ್ ವಿಭಾಗ, ಫೌಂಡ್ರಿ ವಿಭಾಗ ಹಾಗೂ ಕಾರ್ಯತಂತ್ರದ ವ್ಯವಸ್ಥೆಗಳ ಉತ್ಪಾದನಾ ವಿಭಾಗಗಳಿಗೆ ಭೇಟಿ ನೀಡಿದ ಸಚಿವರು, ಅಲ್ಲಿನ ತಾಂತ್ರಿಕ ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಿದರು.
ತಾಂತ್ರಿಕ ಪರಿಣತಿಗೆ ಪ್ರಶಂಸೆ:
ಭೇಟಿಯ ವೇಳೆ ಹೆಚ್ಚಿನ ನಿಖರತೆಯ ಯಂತ್ರೋಪಕರಣಗಳು, ಸಿಎನ್‌ಸಿ ವ್ಯವಸ್ಥೆ, ವಿಶೇಷ ಎಂಜಿನಿಯರಿಂಗ್ ಉಪಕರಣಗಳು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸೋನಾರ್ ಡೈರೆಕ್ಟಿಂಗ್ ಗೇರ್ ವ್ಯವಸ್ಥೆಗಳ ಉತ್ಪಾದನೆ, ಜೋಡಣೆ ಹಾಗೂ ಪರೀಕ್ಷಾ ಪ್ರಕ್ರಿಯೆಗಳನ್ನು ಸಚಿವರು ಸೂಕ್ಷ್ಮವಾಗಿ ಪರಿಶೀಲಿಸಿದರು. ಅಲ್ಲಿನ ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಕಾರ್ಮಿಕರ ಸಮರ್ಪಣಾ ಭಾವ ಹಾಗೂ ತಾಂತ್ರಿಕ ಪರಿಣತಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ಆತ್ಮನಿರ್ಭರ ಭಾರತಕ್ಕೆ ಹೆಚ್‌ಎಂಟಿ ಕೊಡುಗೆ:
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, "ಇಲ್ಲಿನ ತಾಂತ್ರಿಕ ಸಾಮರ್ಥ್ಯವು ಭಾರತವು ಸುಧಾರಿತ ಉತ್ಪಾದನೆ, ಕಾರ್ಯತಂತ್ರದ ಎಂಜಿನಿಯರಿಂಗ್ ಮತ್ತು ರಕ್ಷಣಾ ಸಲಕರಣೆಗಳ ತಯಾರಿಕೆಯಲ್ಲಿ ನಿರ್ಮಿಸಿರುವ ಬಲವಾದ ಅಡಿಪಾಯಕ್ಕೆ ಸಾಕ್ಷಿಯಾಗಿದೆ. ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದು ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' ಮತ್ತು 'ವಿಕಸಿತ ಭಾರತ 2047'ರ ದೃಷ್ಟಿಕೋನಕ್ಕೆ ಪೂರಕವಾಗಿದೆ" ಎಂದು ತಿಳಿಸಿದರು.
ಭಾರತದ ಕೈಗಾರಿಕಾ ರಂಗ ಹಾಗೂ ರಕ್ಷಣಾ ವಲಯದ ಕಾರ್ಯತಂತ್ರದ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಹೆಚ್‌ಎಂಟಿಯಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವರು ಇದೇ ವೇಳೆ ಉಲ್ಲೇಖಿಸಿದರು.



