ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ತೇರು ಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಇದೇ ತಿಂಗಳು ಫೆ.13 ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಳೆದ ಫೆ.3 ರಿಂದಲೇ ಕಂಕಣೋತ್ಸವ ಕಾರ್ಯಕ್ರಮದೊಂದಿಗೆ ತೇರುಮಲ್ಲೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ಈಗಾಗಲೇ ಗಿಳಿ ವಾಹನೋತ್ಸವ, ಗಂಡಭೇರುಂಡ ವಾಹನೋತ್ಸವ, ನವಿಲು ವಾಹನೋತ್ಸವ, ಸಿಂಹ ವಾಹನೋತ್ಸವ, ನಂದಿ ವಾಹನೋತ್ಸವ, ಸರ್ಪ ವಾಹನೋತ್ಸವ, ಅಶ್ವ ವಾಹನೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿವೆ.
ಫೆ.11 ರಂದು ರಾತ್ರಿ 8 ಗಂಟೆಗೆ ಗಜ ವಾಹನೋತ್ಸವ ನಡೆಯಲಿದೆ. ಫೆ.12 ರಂದು ಬುಧವಾರ ಬಸವ ವಾಹನೋತ್ಸವ ಅಲಿಯಾಸ್ ದೊಡ್ಡ ಉತ್ಸವ ಅಂದರೆ ಅಕ್ಕಿ ತಂಬಿಟ್ಟಿನ ಆರತಿ ಕಾರ್ಯಕ್ರಮವು ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯಲಿದೆ.
ಇಡೇ ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟ ಎಂದರೆ ಬ್ರಹ್ಮ ರಥೋತ್ಸವವು ಫೆ.13 ರಂದು ಮಧ್ಯಾಹ್ನ 12 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.
ತೇರುಮಲ್ಲೇಶ್ವರ ದೇವಾಲಯದಿಂದಾಗಿ ಹಿರಿಯೂರು ನಗರವು ಸಾಕಷ್ಟು ಪ್ರಸಿದ್ಧಿಗಳಿಸಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.
ವಿಶೇಷತೆ: ಶಿವನಿಗೆ ಮುಡಿಪಾದ ಹಾಗೂ ತಾಲೂಕು ಕೇಂದ್ರದ ಅತಿ ಪ್ರಮುಖ ಧಾರ್ಮಿಕ ಕೇಂದ್ರ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣವು ಒಂದು ತಾಲೂಕು ಕೇಂದ್ರವೂ ಹೌದು. ಹಿರಿಯೂರಿನ ಒಂದು ಹೆಗ್ಗಳಿಕೆ ಎಂದರೆ ಕರ್ನಾಟಕದ ಅತಿ ಹಳೆಯದಾದ ಮೊದಲ ವಾಣಿ ವಿಲಾಸ ಜಲಾಶಯದ ಆಣೆಕಟ್ಟು ಹೊಂದಿರುವುದು. ಅದನ್ನೆ ಇಂದು ಮಾರಿ ಕಣಿವೆ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.
ಇದಲ್ಲದೆ ಹಿರಿಯೂರು ಮತ್ತೊಂದಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದೆ ತೇರು ಮಲ್ಲೇಶ್ವರನ ದೇವಸ್ಥಾನ. ಐನೂರು ವರ್ಷಗಳ ಇತಿಹಾಸವಿರುವ ಅದ್ಭುತ ದೇವಾಲಯ. ಇಂದು ಇದರ ಗೋಡೆಗಳಿಗೆ ಸುಣ್ಣ ಬಣ್ಣಗಳನ್ನು ಹಚ್ಚಿ ಸಾಕಷ್ಟು ಸಿಂಗರಿಸಲಾಗಿದೆ. ನಿತ್ಯವೂ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ತೇರು ಮಲ್ಲೇಶ್ವರ ದೇವಾಲಯದ ರಾಜ ಗೋಪುರವು ೪೫ ಅಡಿಗಳಷ್ಟು ಎತ್ತರವಿದ್ದು ದೀಪವನ್ನು ಒಳಗೊಂಡಿದೆ. ವರ್ಷಕ್ಕೊಂದು ಬಾರಿ ಅಂದರೆ ತೇರು ಮಲ್ಲೇಶ್ವರನ ಜಾತ್ರೆಯ ಸಂದರ್ಭದಲ್ಲಿ ಗೋಪುರದಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಕಣ್ತುಂಬಿಕೊಳ್ಳಲು ಇದೊಂದು ಸುಂದರ ದೃಶ್ಯವೆಂದರೂ ತಪ್ಪಾಗಲಾರದು.
ತೇರು ಮಲ್ಲೇಶ್ವರ ದೇವಾಲಯದ ಹಿನ್ನೆಲೆ:
ಹಿಂದೆ ಪರಮ ಶಿವ ಭಕ್ತೆ ಬೆಳವಡಿ ಮಲ್ಲಮ್ಮ ಈ ಊರಿನಲ್ಲಿ ವಾಸಿಸುತ್ತಿದ್ದಳು. ಶಿವನ ಪರಮ ಭಕ್ತೆಯಾದ ಕಾರಣ ಅವಳು ಪ್ರತಿ ವರ್ಷವೂ ಚಾಚೂ ತಪ್ಪದೆ ಶಿವನ ಪರಮ ನಿಲಯವಾದ ವಾರಣಾಸಿ ಅಥವಾ ಕಾಶಿಗೆ ಭೇಟಿ ನೀಡಿ ಬರುತ್ತಿದ್ದಳು.
ಹೀಗೆ ಕಾಲವು ಮುಂದೆ ಸಾಗುತ್ತ ಸಾಗುತ್ತ ಮಲ್ಲಮ್ಮಳಿಗೆ ವಯಸ್ಸಾಯಿತು. ವಯಸ್ಸಾದಂತೆ ದೇಹದ ಶಕ್ತಿಯು ಕುಗ್ಗಿತು. ಒಂದೊಮ್ಮೆ ಅವಳಿಗೆ ಕಾಶಿ ಹೋಗಲೂ ಸಹ ಆಗಲಿಲ್ಲ. ಇದರಿಂದ ತೀವ್ರ ದುಃಖ ಹೊಂದಿದ ಆಕೆ ಮನಸಿನಲ್ಲಿ ಶಿವನನ್ನು ಕುರಿತು ತಾನು ಭೇಟಿ ನೀಡಲಾರದ ಕುರಿತು ಪ್ರಾರ್ಥಿಸಿದಳು.
ಇದರಿಂದ ಪ್ರಸನ್ನಗೊಂಡ ಶಿವನು ಆಕೆಯ ಕನಸಿನಲ್ಲಿ ಬಂದು, ನೀನು ಇನ್ನೆಂದೂ ಕಾಶಿಗೆ ಬರುವ ಅಗತ್ಯವಿಲ್ಲ, ಬದಲಾಗಿ ಸ್ವತಃ ನಾನೆ ನೀನಿದ್ದೆಡೆ ಬಂದು ನೆಲೆಸುತ್ತೇನೆ ಎಂದು ಹೇಳುತ್ತ ಅವಳ ಮನೆಯಲ್ಲಿದ್ದ ಒರಳು(ಒಳಕಲ್ಲು) ಕಲ್ಲಿನಲ್ಲಿ ಪ್ರತಿಷ್ಠಾಪನೆಗೊಂಡನು.
ಹೀಗೆ ಶಿವನು ನೆಲೆಸಿದ ಆ ಒಳಕಲ್ಲೆ ಇಂದು ಶಿವಲಿಂಗ ರೂಪವಾಗಿದ್ದು ತೇರು ಮಲ್ಲೇಶ್ವರನ ದೇವಾಲಯವಾಗಿ ಪ್ರಸಿದ್ಧಿಗಳಿಸಿದೆ. ಅಲ್ಲದೆ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಸಹ ಕರೆಯಲಾಗುತ್ತದೆ. ಫೆಬ್ರುವರಿ ತಿಂಗಳಿನಲ್ಲಿ ಹದಿನೈದು ದಿನಗಳ ಕಾಲ ತೇರು ಮಲ್ಲೇಶ್ವರ ಜಾತ್ರೆಯು ಅದ್ದೂರಿಯಾಗಿ ಜರುಗುತ್ತದೆ. ತಲುಪುವ ಬಗೆ :ಬೆಂಗಳೂರಿನಿಂದ ೧೬೧ ಕಿ.ಮೀ ಹಾಗೂ ಚಿತ್ರದುರ್ಗದಿಂದ 42 ಕಿ.ಮೀ ಗಳಷ್ಟು ದೂರದಲ್ಲಿರುವ ಹಿರಿಯೂರು ಉತ್ತಮ ಸಾರಿಗೆ ಸಂಪರ್ಕ ಹೊಂದಿದ್ದು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಬೆಂಗಳೂರಿನಿಂದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಕಡೆ ತೆರಳುವ ಬಸ್ಸುಗಳು ಹಿರಿಯೂರು ಮುಖಾಂತರವೆ ಸಾಗುತ್ತವೆ.
ಜಾತ್ರೆಯ ವಿಶೇಷತೆ: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ವಾಗಿರುವ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ 15 ದಿನಗಳ ಕಾಲ ಜಾತ್ರೆ ಮಹೋತ್ಸವ ತುಂಬಾ ಅದ್ದೂರಿಯಾಗಿ ನಡೆಯುತ್ತದೆ. ದಿನನಿತ್ಯ ನಡೆಯುತ್ತಿರುವ ವಿಶೇಷ ಜಾತ್ರೆ ಮಹೋತ್ಸವ ಪೂಜಾ ಕಾರ್ಯಕ್ರಮಗಳು.
15 ದಿನಗಳ ಕಾಲ ಶ್ರೀ ತಿರುಮಲ್ಲೇಶ್ವರ ಸ್ವಾಮಿಯ ವಿವಿಧ ಕಾರ್ಯಕ್ರಮದೊಂದಿಗೆ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ನಡೆಯುವುದು ಹಿರಿಯೂರು ತಾಲೂಕು, ಐಮಂಗಲ ಹೋಬಳಿ ಬಿರೇನಹಳ್ಳಿ ಮಜುರೆ ಕರಿಯಣ್ಣ ಹಟ್ಟಿ ಗ್ರಾಮದ ಶ್ರೀ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಮೇಘಶುದ್ಧ ಪೌರ್ಣಮಿ ಫೆಬ್ರವರಿ 13ರಂದು ಗುರುವಾರ ಬೆಳಿಗ್ಗೆ 10:00 ಗಂಟೆಗೆ ಶಿವಧನಸ್ಸಿನ ಗಂಗಾ ಸ್ನಾನದ ಉತ್ಸವ ಮಧ್ಯಾಹ್ನ 12:00 ಗಂಟೆಗೆ ಮೇಘ ನಕ್ಷತ್ರದಲ್ಲಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ.
ಮಧ್ಯಾಹ್ನ 1:30ಕ್ಕೆ ಪ್ರಸಾದ ವಿನಿಯೋಗ ಮತ್ತು ಸಂಜೆ 5ಕ್ಕೆ ಶ್ರೀ ಚಂದ್ರಮೌಳೇಶ್ವರ ಶ್ರೀ ಉಮಾಮಹೇಶ್ವರ ರಥೋತ್ಸವ ನಡೆಯಲಿದೆ. ಶ್ರೀ ಮದಕರಿ ಯುವಕ ಸಂಘದಿಂದ ಜಂಗೀ ಕುಸ್ತಿಯನ್ನು ಫೆ.14ರಂದು ಶುಕ್ರವಾರ ಸಂಜೆ 4:00ಗೆ ಸಿದ್ದನಾಯಕ ವೃತದಲ್ಲಿ ಏರ್ಪಡಿಸಲಾಗಿದೆ. ಫೆ.15 ರಂದು ಶನಿವಾರ ರಾತ್ರಿ 8:00 ಗಂಟೆಗೆ ಸುಮಂಗಲಿಯರಿಂದ ಕರ್ಪೂರದಾರತಿ ಫೆ.16 ರಂದು ಭಾನುವಾರ ಶ್ರೀ ಚೀಟಿಗು ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ ವಸಂತೋತ್ಸವ ಓಕಳಿ ನಡೆಯಲಿದೆ. ಫೆ. 17ರಂದು ಸೋಮವಾರ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಶ್ರೀ ತೇರು ಮಲೇಶ್ವರ ಸ್ವಾಮಿ ಜಾತ್ರೆ ಮಹೋತ್ಸವಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ತನು ಮನ ಧನ ಧ್ಯಾನ ರೂಪದಲ್ಲಿ ಸಹಕರಿಸಿ ಸಾರ್ವಜನಿಕರು ಭಕ್ತಾದಿಗಳು ಶಾಂತಿ ರೀತಿಯಿಂದ ದೇವರ ಆಶೀರ್ವಾದ ಪಡೆಯಬಹುದು.