ಪಾದಚಾರಿ ರಸ್ತೆ ಅತಿಕ್ರಮಣ, ಪರಿಹಾರ ಸಿಗದೆ ಪರದಾಡುತ್ತಿರುವ ಜನತೆ

News Desk

ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪಾದಚಾರಿ ರಸ್ತೆಗಳಲ್ಲಿ ತಳ್ಳುವ ಗಾಡಿ
, ಗೂಡಂಗಡಿಗಳ ಭರಾಟೆ, ಶೆಡ್‌ಗಳ ನಿರ್ಮಾಣ, ತರಕಾರಿಹಣ್ಣು, ಹೂ, ಪಾನೀಯ, ಚಾಟ್ಸ್‌, ನಿತ್ಯ ಬಳಕೆಯ ವಸ್ತುಗಳು, ಬಟ್ಟೆ ವ್ಯಾಪಾರ, ಡಬ್ಬಾ ಅಂಗಡಿ, ಅಕ್ಕಪಕ್ಕದ ಅಂಗಡಿಗಳಿಂದ ಅತಿಕ್ರಮಣ, ವಾಹನ ನಿಲುಗಡೆ ಸೇರಿದಂತೆ ಹಲವು ರೀತಿಯಲ್ಲಿ ಪಾದಚಾರಿ ರಸ್ತೆ ಅತಿಕ್ರಮಸಿಕೊಂಡಿದ್ದು ಹಲವು ಅಡೆತಡೆಗಳಿಂದ ಜನರು ಬೇಸತ್ತಿದ್ದಾರೆ.

ಹಿಂದುಳಿದಿರುವ ಹಿರಿಯೂರು ನಗರವು ರಸ್ತೆ ಅಭಿವೃದ್ಧಿಯಲ್ಲೂ ಸಾಕಷ್ಟು ಹಿಂದುಳಿದಿದೆ. ಎಲ್ಲೆಂದರಲ್ಲೇ ಫುಟ್‌ಪಾತ್‌ಅತಿಕ್ರಮಣವಾಗಿದೆ. ಇದರಿಂದಾಗಿ ಪಾದಚಾರಿಗಳು ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ವಿವಿ(ಕೂನಿಕೆರೆ) ರಸ್ತೆ
, ಬಿಡಿ(ಮುಖ್ಯ) ರಸ್ತೆ,

ಹುಳಿಯಾರು ರಸ್ತೆ, ವೇದಾವತಿ ನಗರದ ನೂರಡಿ ರಸ್ತೆ, ತೇರುಮಲ್ಲೇಶ್ವರ ರಸ್ತೆ, ಬಿದುರು ಪುಟ್ಟಿ  ಬೀದಿ, ಸಂತೇ ಮೈದಾನದ ರಸ್ತೆ, ಕೋಳಿ ಕೆಂಗಣ್ಣನವರ ಅಂಗಡಿ ರಸ್ತೆ, ತಾಲೂಕು ಆಸ್ಪತ್ರೆ ಪಕ್ಕದ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಫುಟ್‌ಪಾತ್‌ಅತಿಕ್ರಮಣವಾಗಿರುವುದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾಗಿದೆ.

ಜನಸಂದಣಿ ಹೆಚ್ಚಿರುವ ನಗರಗಳಲ್ಲಿ ಹಿರಿಯೂರು ನಗರವು ಒಂದು. ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗ ಮಾಲೀಕರು ಕೂಡ ನಾವು ಯಾರಿಗೇನು ಕಮ್ಮಿ ಇಲ್ಲ ಎಂದು ಪೈಪೋಟಿ ಮೇಲೆ ಪಾದಚಾರಿಗಳ ರಸ್ತೆಯಲ್ಲೇ ಅಂಗಡಿಗಳ ದಿನಸಿ ಚೀಲ, ಎಣ್ಣೆಡಬ್ಬಾ, ಉಪ್ಪಿನ ಚೀಲ, ಪ್ಲಾಸ್ಟಿಕ್ ವಸ್ತುಗಳು, ಇಡೀ ಫುಟ್‌ಪಾತ್‌ರಸ್ತೆಯನ್ನ ಅತಿಕ್ರಮಿಸಿವೆ. ಇದರ ಮಧ್ಯ ಆಟೋ ಚಾಲಕರು, ದ್ವಿಚಕ್ರ ವಾಹನಗಳ ಮಾಲೀಕರು, ಅಲ್ಲೊಂದು ಇಲ್ಲೊಂದು ಕಾರುಗಳು ಸಹ ಫುಟ್ ಪಾತ್ ಜಾಗವನ್ನ ಅತಿಕ್ರಮಿಸಿವೆ.

ನಗರದ ವಿವಿಧ ರಸ್ತೆಗಳಲ್ಲಿನ ಬಹುತೇಕ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಗಳಲ್ಲೂ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ.

ಇದೇ ರೀತಿ ನಗರದ ಇತರೆ ರಸ್ತೆಗಳಲ್ಲಿನ ಫುಟ್‌ಪಾತ್‌ಗಳು ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಹೋಟೆಲ್‌ಗಳ ಟೇಬಲ್‌, ಅಂಗಡಿಗಳ ಸಾಮಗ್ರಿಗಳು, ನಾಮಫಲಕ, ಕಟ್ಟಡ ಕಾಮಗಾರಿ ವಸ್ತುಗಳು, ಹಣ್ಣು, ತರಕಾರಿ, ಬೋಂಡಾ-ಬಜ್ಜಿ ಕೈಗಾಡಿಗಳು ಸೇರಿದಂತೆ ಫಾಸ್ಟ್‌ಫುಡ್‌ಅಂಗಡಿಗಳ ವ್ಯಾಪಾರಕ್ಕೆ ಫುಟ್‌ಪಾತ್‌ಗಳು ಬಳಕೆಯಾಗುತ್ತಿವೆ.
ಒಂದೆಡೆ ನಗರದ ಫುಟ್‌ಪಾತ್‌ಗಳು ವ್ಯಾಪಾರಿಗಳಿಂದ ಅತಿಕ್ರಮಣವಾಗಿದ್ದರೆ
, ಮತ್ತೊಂದೆಡೆ ವಾಹನ ನಿಲ್ದಾಣ ಸ್ಥಳಗಳಾಗಿ ಮಾರ್ಪಟ್ಟಿವೆ. ಫುಟ್‌ಪಾತ್‌ಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುವ ವಾಹನಗಳಿಂದ ಪಾದಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.

ನಗರದ ಶ್ರೀರಂಗಪಟ್ಟಣ-ಮೈಸೂರು-ಬೀದರ್ ಹೆದ್ದಾರಿ ಇದೇ ನಗರದೊಳಗೆ ಹಾದು ಹೋಗುತ್ತಿದೆ. ಗಾಂಧಿ ವೃತ್ತದಿಂದ ಫುಟ್‌ಪಾತ್‌ ಸೇರಿದಂತೆ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಕಾಣಬಹುದು. ಹೀಗಾಗಿ ಪಾದಚಾರಿಗಳು ವಾಹನಗಳ ನಡುವೆ ನುಸುಳಿ ಸಂಚರಿಸಬೇಕಾದ ಸ್ಥಿತಿ ಉಂಟಾಗುತ್ತಿದೆ.

ನಗರದ ವಿವಿಧ ಬ್ಯಾಂಕ್‌ ಗಳ ಮುಂಭಾಗ, ಕಬ್ಬಿಣ ಸೀಮೆಂಟ್ ಅಂಗಡಿಗಳು, ಹೋಟೆಲ್, ಶಿಕ್ಷಕರ ಭವನ ಎದುರು ಸಹ ಫುಟ್‌ಪಾತ್‌ಮಾರ್ಗವಿಲ್ಲದೇ ಸಾರ್ವಜನಿಕರು ರಸ್ತೆಗಿಳಿಯುತ್ತಿದ್ದಾರೆ.

ಫುಟ್ ಪಾತ್ ಅತಿಕ್ರಮಣ ಒಂದು ಕಡೆಯಾಗಿದ್ದರೆ ನಗರದ ಹಲವು ರಸ್ತೆಗಳಲ್ಲಿ ಫುಟ್‌ಪಾತ್‌ಗಳೇ ಇಲ್ಲ. ಚರಂಡಿಗಳು ಕಾಣ ಸಿಗುವುದಿಲ್ಲ. ಆಸ್ಪತ್ರೆ ರಸ್ತೆ, ಹೀಗಾಗಿ ಇಲ್ಲೂ ಪಾದಚಾರಿಗಳು ಸಮಸ್ಯೆ ಎದುರಿಸಬೇಕು.
ನಗರದ ಕೆಲ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿವೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ ಪ್ರಕರಣಗಳಿಗೂ ಕಮ್ಮಿ ಇಲ್ಲ. ಹಲವು ರೀತಿ ಅವಘಡಗಳಿಗೆ ಫುಟ್‌ಪಾತ್‌ಇಲ್ಲದಿರುವುದೇ ಕಾರಣ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆಯಲ್ಲಿ ಬಾಕ್ಸ್‌ಚರಂಡಿಗಳ ಮೇಲೆ ಪಾದಚಾರಿಗಳ ಸಂಚಾರ ನಡೆಯುತ್ತಿದೆ. ಅದರಲ್ಲೂ ಕೆಲವು ಕಡೆಗಳಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿದ್ದು, ಇದನ್ನು ಕೇಳುವವರೆ ಇಲ್ಲದಂತಾಗಿದೆ.

ಇನ್ನು ರಸ್ತೆ ಬದಿಯಲ್ಲೇ ಹಣ್ಣು, ತರಕಾರಿ, ಹೂ ಗಳನ್ನು ಕೈಗಾಡಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಬೆಳಗ್ಗೆ-ಸಂಜೆ ಎನ್ನದೆ ಸದಾಕಾಲ ಸಾರ್ವಜನಿಕರ ಓಡಾಟ ಹೆಚ್ಚಿರುವ ಈ ರಸ್ತೆಯಲ್ಲಿ ಸುಗಮ ಸಂಚಾರ ಕನಸಿನ ಮಾತಾಗಿದೆ.
ಪಾದಚಾರಿ ರಸ್ತೆ ಇಲ್ಲದಾಗಿರುವುದರಿಂದ ಸಾರ್ವಜನಿಕರು ಆತಂಕದಲ್ಲೇ ರಸ್ತೆಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಈ ನಡುವೆ ಪ್ರತಿ ಗಂಟೆ ಎರಡು ಗಂಟೆಗಳಿಗೊಮ್ಮೆ ನೂರಷ್ಟು ಟ್ರಾಫಿಕ್ ಜಾಮ್ ಆಗುವುದು ಗ್ಯಾರಂಟಿ, ಏಕೆಂದರೆ ಈ ಟ್ರಾಫಿಕ್ ಜಾಮ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಖಾಸಗಿ, ಸಾರಿಗೆ ಬಸ್ ಗಳು, ಲಾರಿಗಳು, ಕಾರು, ಆಟೋ, ಬೈಕ್‌ದಟ್ಟಣೆ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್‌ಆಗುತ್ತಿರುತ್ತದೆ.

ನಗರದ ಹಲವು ರಸ್ತೆಗಳಲ್ಲಿ ಫುಟ್‌ಪಾತ್‌ಒತ್ತುವರಿ ಮಾಡಿರುವ ಅಂಗಡಿ ಮಾಲೀಕರಿಗೆ ಶೀಘ್ರ ನೋಟಿಸ್‌ನೀಡಬೇಕು, ಅಂಗಡಿ ಸಾಮಗ್ರಿಗಳು, ನಾಮಫಲಕಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಬೇಕು. ಇನ್ನು ನಗರದ ಹಲವೆಡೆ ಫುಟ್‌ಪಾತ್‌ಗಳು ಇಲ್ಲದಿರುವ ಸಂಬಂಧ ಹಂತ-ಹಂತವಾಗಿ ಫುಟ್‌ಪಾತ್‌ಅಭಿವೃದ್ಧಿ ಕಾರ್ಯ ಮಾಡಬೇಕು.

ನಗರದಲ್ಲಿ ಫುಟ್‌ಪಾತ್‌ಗಳಿಲ್ಲದೆ ಸಾರ್ವಜನಿಕರು ರಸ್ತೆಗಳಲ್ಲೇ ಸಂಚರಿಸುತ್ತಿದ್ದಾರೆ. ಕೆಲವೆಡೆ ವಾಹನ ದಟ್ಟಣೆ ಹೆಚ್ಚಾದ ಸಂದರ್ಭಗಳಲ್ಲಿ ಪಾದಚಾರಿಗಳಿಗೆ ಅಪಘಾತಗಳೂ ಆಗಿವೆ. ವಾಹನ ಸವಾರರು ಮತ್ತು ಸಾರ್ವಜನಿರಕ ನಡುವೆ ಜಗಳ ಏರ್ಪಡುತ್ತಿದೆ. ಮಹಿಳೆಯರು ಮತ್ತು ಮಕ್ಕಳು ನಗರದ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟಕರವಾಗಿದ್ದು ಇದಕ್ಕೆಲ್ಲ ಮುಕ್ತಿ ಯಾವಾಗ ಎನ್ನುವ ಚಿಂತೆ ಸಾರ್ವಜನಿಕರನ್ನು ಕಾಡುತ್ತಿದೆ.

ಪ್ರಸ್ತುತ ನಗರಸಭೆ ಫುಟ್ ಪಾತ್ ತೆರವಿಗೆ ಬೃಹತ್ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತೋರ್ಪಡಿಸಿಕೊಂಡಿದ್ದು ನಗರಸಭೆ ಮುಂಭಾಗದ 3-4 ಅಂಗಡಿಗಳನ್ನು ಮಾತ್ರ ರಸ್ತೆಯಿಂದ ಮತ್ತೆ ಪುಟ್ ಪಾತ್ ಮೇಲಕ್ಕೆ ಶಿಫ್ಟ್ ಮಾಡಿಸಿ ಕೈ ತೊಳೆದುಕೊಂಡಿದ್ದಾರೆ.

ನಗರದ ಗಾಂಧಿ ವೃತ್ತದಿಂದ ರಂಜಿತಾ ಹೋಟೆಲ್ ವರೆಗೂ ಪ್ರಧಾನ ರಸ್ತೆಯ ಇಕ್ಕೆಲಗಳಲ್ಲೂ ಪಾದಚಾರಿ ರಸ್ತೆಯನ್ನು ವ್ಯಾಪಾರಸ್ಥರು ಸಿಕ್ಕ ಸಿಕ್ಕಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಗರಸಭೆಯವರು ಪಾದಚಾರಿ ರಸ್ತೆ ಆಕ್ರಮಿಸಿಕೊಂಡ ಅಂಗಡಿ ಮಳಿಗೆಗಳವರ ತಂಟೆಗೆ ಹೋಗುವುದಿಲ್ಲ. ಶನಿವಾರ ಮತ್ತು ಬುಧವಾರ  ವಾರದ ಸಂತೆಯಾಗಿದ್ದು ರಸ್ತೆಗಳು ಜಾತ್ರೆಯಂತಾಗಿರುತ್ತವೆ. ಅಂಗಡಿಗಳ ಅರ್ಧ ವಸ್ತುಗಳನ್ನು ಪಾದಚಾರಿ ರಸ್ತೆ ಮೇಲೆ ಹರಡಿಕೊಂಡಿರುತ್ತವೆ.

ಬೀಡಾಡಿ ದನಗಳು, ಹಂದಿಗಳು, ಮಿತಿ ಮೀರಿದ ನಾಯಿಗಳ ಗುಂಪು ಈಗಾಗಲೇ ನಗರ ಭಾಗದಲ್ಲಿದ್ದು ಅವುಗಳ ನಿಯಂತ್ರಣಕ್ಕೆ ಸಭೆಗಳೇ ನಡೆದು ಹೋದವು. ಆದರೆ ನಿಯಂತ್ರಣ ಮಾತ್ರ ಶೂನ್ಯ. ನೆಹರೂ ಮೈದಾನದಲ್ಲಿ ಶೌಚಾಲಯ ಇದ್ದರೂ ಸಹ ಮೈದಾನದ ಒಂದು ಮಗ್ಗುಲು ಬಯಲು ಶೌಚಾಲಯವಾಗಿ ಮಾರ್ಪಾಟಾಗಿ ವರ್ಷಗಳೇ ಕಳೆದಿದೆ. ನೆಹರೂ ಮೈದಾನದೊಳಗಿನ 20 ಕ್ಕೂ ಹೆಚ್ಚು ಗೋಬಿ ಪಾನಿಪೂರಿ ಅಂಗಡಿಗಳವರನ್ನು ಒಕ್ಕಲೆಬ್ಬಿಸಿದ್ದಾರೆ. ಯಥಾಪ್ರಕಾರ ಅವರು ಇದೀಗ ಗಾಂಧಿ ವೃತ್ತದಿಂದ ಹೊಸ ಬಿಇಓ ಕಚೇರಿವರೆಗೆ ರಸ್ತೆ ಪಕ್ಕಕ್ಕೆ ಇಲ್ಲವೇ ಪಾದಚಾರಿ ರಸ್ತೆ ಮೇಲಕ್ಕೆ ಬಂದು ಕುಳಿತಿದ್ದಾರೆ.

ಟಿಬಿ ವೃತ್ತದ ಚಳ್ಳಕೆರೆ ರಸ್ತೆಯಲ್ಲಿ ಬೆಳಿಗ್ಗೆ ಸಂಜೆಯಾದರೆ ಸಾಕು ಲಾರಿಗಳು ಎರಡೂ ಬದಿ ಸಾಲಾಗಿ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುತ್ತಿದ್ದಾರೆ. ನಗರಸಭೆಯ ಮುಂಭಾಗ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳನ್ನು ನಿಲುಗಡೆ ಮಾಡಬಾರದು ಎಂಬ ನಾಮಫಲಕ ಹಾಕಲಾಗಿದೆ. ದುರಂತವೆಂದರೆ ಅದರ ಪಕ್ಕವೇ ಬಸ್ಸುಗಳು ನಿಲುಗಡೆ ಪಡೆಯುತ್ತವೆ.

- Advertisement -  - Advertisement -  - Advertisement - 
Share This Article
error: Content is protected !!
";