ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡತುಮಕೂರು ವಿ. ಎಸ್. ಎಸ್. ಎನ್ ಚುನಾವಣೆ ಮತ ಎಣಿಕೆ ಮುಂದೂಡಲಾಗಿದ್ದರಿಂದ ದೊಡ್ಡತುಮಕೂರಿನ ಬಿಜೆಪಿ ಹಾಗೂ ಕೆಲ ಜೆಡಿಎಸ್ ಮುಖಂಡರು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬಿ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕರಾದ ಚುಂಚಗೌಡ ಹಾಗೂ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡರ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ದೊಡ್ಡತುಮಕೂರು ವಿ ಎಸ್.ಎಸ್. ಎನ್ ಮಾಜಿ ಅಧ್ಯಕ್ಷ ಹಾಗೂ ದಳದ ಮುಖಂಡ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡತುಮಕೂರು ಗ್ರಾಮಸ್ಥರಿಂದ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪ್ರಭಾಕರ್ ಮಾತನಾಡಿ, ದಳದ ನಾಯಕರಾದ ಹರೀಶ್ ಗೌಡ್ರು ಯಾರು ದೊಡ್ಡಬಳ್ಳಾಪುರಕ್ಕೆ ಅವರ ಕೊಡುಗೆ ಏನು ಎಂದು ನಮ್ಮದೇ ಪಕ್ಷದ ಮುಖಂಡರಾದ ವಸಂತ್ ರವರು ಪ್ರಶ್ನೆ ಮಾಡಿದ್ದಾರೆ. ಬಹುಷಃ ಹರೀಶ್ ಗೌಡ್ರನ್ನಗ್ರಾಮಕ್ಕೆ ಕರೆ ತಂದು ಗ್ರಾಮದ ಹಾಗೂ ಪಂಚಾಯ್ತಿ ವ್ಯಾಪ್ತಿಯ ಕ್ರೀಡೆ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರಿಂದ ದೇಣಿಗೆ ಪಡೆದಿದ್ದು ಇದೆ ವಸಂತ್ ಮತ್ತವರ ತಂಡ.
ವಿದ್ಯುತ್ ಸಮಸ್ಯೆಯಿಂದ ತೊಂದರೆ ಪಡುತ್ತಿದ್ದ ಗ್ರಾಮ ಒಂದಕ್ಕೆ ಸುಮಾರು 8ಲಕ್ಷ ಸ್ವಂತ ಹಣ ಖರ್ಚು ಮಾಡಿ ವಿದ್ಯುತ್ ಸಮಸ್ಯೆ ನೀಗಿಸಿದ್ದು ಹರೀಶ್ ಗೌಡ್ರು, ತಾಲೂಕಿನ ಯಾವುದೇ ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ, ಬಡಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡದವರು ಹರೀಶ್ ಗೌಡರು.
ತಾಲೂಕಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಹರೀಶ್ ಗೌಡರನ್ನು ಟೀಕಿಸುತ್ತಿರುವವರು ಸ್ವಲ್ಪ ಕಣ್ಣು ಬಿಟ್ಟು ನೋಡಲಿ ಗೌಡ್ರು ತಾಲೂಕಿಗೆ ಏನೂ ಮಾಡಿದ್ದರೆಂದು ಕಾಣಿಸುತ್ತೆ ಎಂದ ಪ್ರಭಾಕರ್ ಎಚ್ಚರಿಸಿದರು.
ಬಿಜೆಪಿ ಮುಖಂಡ ಟಿ. ಜಿ. ಮಂಜುನಾಥ್ ರವರು ಕಳೆದ ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ದೊಡ್ಡತುಮಕೂರಿನಲ್ಲಿ ದಳ ಅಸ್ತಿತ್ವದಲ್ಲೇ ಇಲ್ಲಾ ಎಂದು ಹೇಳಿಕೆ ನೀಡಿದ ಪರಿಣಾಮ ಏನಾಯಿತು ಎಂದು ಅವರಿಗೂ ಗೊತ್ತು. ಮೊನ್ನೆ ನಡೆದ ವಿ. ಎಸ್. ಎಸ್. ಎನ್. ಚುನಾವಣಾ ಸಂದರ್ಭದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿ ಕೋರ್ಟಿಗೆ ಹೋಗುವಂತೆ ಮಾಡಿ ಈಗ ದೊಡ್ಡ ತುಮಕೂರಿನಲ್ಲಿ ಸೊಸೈಟಿ ಸ್ಥಾಪನೆಗೆ ಕಾರಣರಾದ ಚುಂಚಗೌಡ್ರನ್ನು ಹಾಗೂ ಹರೀಶ್ ಗೌಡ್ರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಒಬ್ಬ ಶಾಸಕರಾದವರು ಗ್ರಾಮದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಆದರೆ ತಮ್ಮ ಹಿಂಬಾಲಕರ ಮಾತು ಕೇಳಿ ವಿ. ಎಸ್. ಎಸ್. ಎನ್. ವಿವಾದವನ್ನು ಶಾಂತಿ ರೀತಿಯಿಂದ ಬಗೆಹರಿಸದೆ ಮತ್ತಷ್ಟು ವಿವಾದಕ್ಕೆ ಕಾರಣರಾದ ಶಾಸಕರ ನಡೆಯನ್ನು ಪ್ರಶಿಸಿದ್ದಕ್ಕೆ ಹರೀಶ್ ಗೌಡರ ಮುಖಕ್ಕೆ ಮಸಿ ಬಳಿಯುತ್ತೆವೆಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ನಾವೂ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಪ್ರಭಾಕರ್ ಹೇಳಿದರು.
ಕೆಪಿಸಿಸಿ ಎಸ್.ಸಿ ಘಟಕದ ಸದಸ್ಯ ಸಿ. ರಾಮಕೃಷ್ಣ ಮಾತನಾಡಿ ದೊಡ್ಡತುಮಕೂರು ವಿ. ಎಸ್. ಎನ್. ಸ್ಥಾಪನೆಗೆ ಮೂಲ ಕಾರಣ ಚುಂಚಗೌಡರು ಹಾಗೂ ಕೆಂಪೇಗೌಡರು. ಸೊಸೈಟಿ ಪ್ರಾರಂಭವಾದಾಗ ಪಂಚಾಯ್ತಿ ಹಿತ ದೃಷ್ಟಿಯಿಂದ ಯಾವುದೇ ರಾಜಕೀಯಕ್ಕೆ ಅವಕಾಶ ವಾಗದಂತೆ ಮೂರು ಪಕ್ಷಗಳಿಗೆ ಪ್ರಾತಿನಿದ್ಯ ನೀಡಿ ಪ್ರತಿ ಪಕ್ಷಕ್ಕೆ 20 ತಿಂಗಳ ಅವಧಿಯ ಆಧಾರದಲ್ಲಿ ಅಧಿಕಾರದ ಒಪ್ಪಂದವಾಗಿತ್ತು.
ಅದನ್ನು ಉಲ್ಲಂಘಸಿದ್ದು ಮಾತ್ರವಲ್ಲದೆ ಚುನಾವಣೆ ಸಂಬಂಧ ಕೋರ್ಟಿಗೆ ಹೋಗುವಂತೆ ಮಾಡಿದ್ದವರೆ ಇಂದು ಚುಂಚಗೌಡ್ರು ಹಾಗೂ ಹರೀಶ್ ಗೌಡ್ರ ಮೇಲೆ ವಿನಾಕಾರಣ ವಿ. ಎಸ್. ಎಸ್. ಎನ್. ಚುನಾವಣಾಧಿಕಾರಿಯನ್ನು ಶಾಸಕರ ಅಣತಿಯಂತೆ ನೇಮಿಸಿ ಅಧಿಕಾರಿ ಇವರು ಹೇಳಿದಂತೆ ಕೇಳಲಿಲ್ಲ ಎನ್ನುವ ಕಾರಣಕ್ಕಾಗಿ ಎಣಿಕೆ ಸಂದರ್ಭದಲ್ಲಿ ಗದ್ದಲ ಎಬ್ಬಿಸಿ ಗ್ರಾಮದಲ್ಲಿ ಶಾಂತಿ ಕದಡಿದ್ದು ಇವರೇ.
ಶಾಸಕರು ಇದನ್ನು ಕೂಲಂಕುಶವಾಗಿ ಗಮನಿಸಿ ಬಗೆಹರಿಸಬಹುದಿತ್ತು. ಆದರೆ ಒಂದು ಗುಂಪಿನ ಪರವಾಗಿ ತಾವೇ ಮುಂದೆ ನಿಂತು ಗೊಂದಲ ಸೃಷ್ಟಿಸಿ ಈಗ ಮತ ಎಣಿಕೆ ಮಾಡದಿರಲು ಚುಂಚಗೌಡರು ಹಾಗೂ ಕಾಂಗ್ರೆಸ್ ನವರು ಕಾರಣ ಎಂದು ಅಪಪ್ರಚಾರಕ್ಕಿಳಿದಿರುವುದು ಖಂಡನಿಯ.
ಜೊತೆಗೆ ವಾಟ್ಸಪ್ ಗ್ರೂಪಿನಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಹಾಕಿ ಗ್ರಾಮದಲ್ಲಿ ಅಶಾಂತಿ ಮೂಡಿಸಲು ಶಾಸಕರ ಬೆಂಬಲಿಗರು ಯತ್ನಿಸಿದ್ದಾರೆ. ಗ್ರಾಮದಲ್ಲಿ ಎಲ್ಲಾ ಪಕ್ಷದವರು ಸೌಹಾರ್ದವಾಗಿದ್ದೇವೆ. ಪ್ರಸ್ತುತ ಸೊಸೈಟಿ ಮೂರು ಲಕ್ಷ ಸಾಲದಲ್ಲಿದೆ.
ಚುನಾವಣೆ ನಡೆಸದೆ ಅವಿರೋಧ ಆಯ್ಕೆಯಾಗಿದ್ದರೆ ಖರ್ಚಾದರೂ ಉಳಿಯುತ್ತಿತ್ತು. ಜೊತೆಗೆ ಸೊಸೈಟಿಯ ಸಾಲದ ಸಮಸ್ಯೆ ಬಗೆಹರಿಯುತ್ತಿತ್ತು. ಈಗ ದುಂದು ವೆಚ್ಚ ಹಾಗೂ ಮತ ಎಣಿಕೆ ಸ್ಥಗಿತಕ್ಕೂ ಇವರು ಕಾರಣವಾಗದ್ದಾರೆ. ಈಗ ಸೊಸೈಟಿ ಸಾಲ ಸರಿದೂಗಿಸದಿದ್ದರೆ ಸೂಪರ್ ಸೀಡ್ ಆಗುವ ಸಾಧ್ಯತೆ ಇದೆ. ಇನ್ನಾದರೂ ಅಪಪ್ರಚಾರಗಳನ್ನು ಬಿಟ್ಟು ಗ್ರಾಮದ ಹಾಗೂ ಸೊಸೈಟಿ ಅಭಿವೃದ್ಧಿಗೆ ಗಮನ ಹರಿಸಲಿ ನಾವೂ ಪಕ್ಷತೀತವಾಗಿ ಸಹಕಾರ ಕೊಡುತ್ತೇವೆ ಎಂದು ರಾಮಕೃಷ್ಣ ಹೇಳಿದರು.
ಯುವ ಜನತಾದಳದ ದೀಪು ಗೌಡ, ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್, ಅಜಯ್, ವೀರೇಗೌಡ ಮುಂತಾದವರು ಮಾತನಾಡಿ ಸೊಸೈಟಿ ಚುನಾವಣೆ ಬೇಡ. ಎಲ್ಲರೂ ಅವಿರೋಧ ಆಯ್ಕೆಗೆ ಸಹಕರಿಸೋಣ ಎಂಬುದು ನಮ್ಮ ಆಶಾಯವಾಗಿತ್ತು.
ಆದರೆ ಅದನ್ನು ತಪ್ಪಿಸಿ ಅವಿರೋಧ ಆಯ್ಕೆಗೆ ಚುಂಚಗೌಡ್ರು ಹಾಗೂ ಹರೀಶ್ ಗೌಡ್ರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುವ ವಸಂತ್ ಮತ್ತು ಟಿ ಜಿ ಮಂಜು ತಂಡ ಏನೇನು ಒಳಸಂಚು ಮಾಡಿತೆಂದು ಇಡೀ ಗ್ರಾಮಕ್ಕೆ ಗೊತ್ತು. ಸುಖ ಸುಮ್ಮನೆ ಚುಂಚೆಗೌಡ್ರು ಮೇಲೆ ಆರೋಪ ಮಾಡ್ತಿದ್ದಾರೆ.
ಚುಂಚೇಗೌಡ್ರು ಎಲ್ಲಾ ಪಕ್ಷಗಳನ್ನು ನೋಡಿ ಬಂದವರು. ಆದರೆ ಎಲ್ಲೂ ಕೂಡಾ ಪಕ್ಷ ನಿಷ್ಠೆ ಮರೆಯಲಿಲ್ಲ. ನೀವೂ ಕೂಡಾ ಪಕ್ಷಾಂತರ ಮಾಡಿದವರೇ ಆದ್ರೆ ನೀವ್ಯಾರು ಪಕ್ಷ ನಿಷ್ಠೆ ಮೆರೆಯಲಿಲ್ಲ ಎನ್ನುವುದು ನಿಮಗೂ ಗೊತ್ತು ಎಲ್ಲರಿಗೂ ಗೊತ್ತು.
ಜೊತೆಗೆ ಹರೀಶ್ ಗೌಡ್ರಿಗೆ ಮಸಿ ಬಳಿಯುತ್ತೆವೆಂದು ಹೇಳಿರುವ ನಿಮ್ಮ ದುರಹಂಕಾರದ ಹೇಳಿಕೆಯನ್ನು ಕೇಳಿಸಿಕೊಂಡು ನಾವೂ ಸುಮ್ಮನಿರುವುದಿಲ್ಲ. ಇದಕ್ಕೆ ಪ್ರತ್ಯುತ್ತರ ಕೊಡುತ್ತೇವೆ. ನಿಮ್ಮಂತವರಿಂದ ಚುಂಚಗೌಡ್ರಾಗಲಿ, ಹರೀಶ್ ಗೌಡರನ್ನಾಗಲಿ ಏನೂ ಮಾಡಲಾಗುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆಂಪಣ್ಣ, ಚೈತ್ರ ಭಾಸ್ಕರ್, ವೀರೇಶ್, ಚೈತ್ರ ಶ್ರೀಧರ್, ಟಿ. ಹೆಚ್. ಮಂಜುನಾಥ್ ಸೇರಿದಂತೆ ಹಲವಾರು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.