ದೀಪವಾಗಿ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಎದೆಗಳಲ್ಲಿ ಬೆಳಗುತ್ತಿರುವ ಪ್ರೊ.ಜಿಎಂಎಸ್ ಒಂದು ನೆನಪು..

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರು ನಮ್ಮನ್ನು ಅಗಲಿದ್ದಾರೆ. ತುಮಕೂರು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಾನು ಐಚ್ಛಿಕ ಆಂಗ್ಲ ಸಾಹಿತ್ಯದಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿ ಪ್ರೊ.ಜಿ.ಎಂ‌.ಶ್ರೀನಿವಾಸಯ್ಯನವರು ನಮಗೆ ಪ್ರಾಂಶುಪಾಲರಾಗಿದ್ದರು. ಮಟ್ಟಸ ನಿಲುವು
, ದುಂಡು ಮುಖ, ಬೋಳು ಮಂಡೆ, ಮೂಗಿನ ಮೇಲೆ ಧರಿಸಿದ್ದ ಕನ್ನಡಕದ ಗಾಜಿನಿಂದ ವಿದ್ಯಾರ್ಥಿಗಳ ಮುಖಕ್ಕೆ ತಿವಿಯುವಂತೆ ಚಿಮ್ಮಿ ಬರುತ್ತಿದ್ದ ಕಡಕ್ ನೋಟದ ಬಾಣ.

ಜಿಎಂಎಸ್ ಕಾಲೇಜಿನ ಕಾರಿಡಾರುಗಳಲ್ಲಿ ಓಡಾಡುತ್ತಿದ್ದಾರೆಂದರೆ ವಿದ್ಯಾರ್ಥಿಗಳು ತರಗತಿ ಕೋಣೆಯಿಂದ ಹೊರಕ್ಕೆ ಬರಲು ಅಂಜುತ್ತಿದ್ದರು. ತರಗತಿಗಳು ಮುಗಿದ ಬಳಿಕ ಕಾಲೇಜಿನ ಒಳಾಂಗಣದಲ್ಲಿ ನೆಟ್ ಕಟ್ಟಿಕೊಂಡು ಸಹೋದ್ಯೋಗಿ ಶಿಕ್ಷಕರೊಂದಿಗೆ ಶಟಲ್ ಕಾಕ್ ಆಟವಾಡುತ್ತಿದ್ದ ಜಿಎಂಎಸ್ ಒಬ್ಬ ಕ್ರೀಡಾಳು. ಇತಿಹಾಸ ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಭಡ್ತಿ ಪಡೆದ ಬಳಿಕವೂ ಪಾಠ ಮಾಡುವುದನ್ನು ಬಿಟ್ಟಿರಲಿಲ್ಲ. ಐಚ್ಛಿಕ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನಾನು ಇತಿಹಾಸದ ವಿದ್ಯಾರ್ಥಿಯಾಗಿರಲಿಲ್ಲ. ಹಾಗಾಗಿ ಜಿಎಂಎಸ್ ಅವರ ಇತಿಹಾಸದ ಪಾಠಗಳಿಂದ ನಾನು ವಂಚಿತನಾಗಿದ್ದೆ. ಜಿಎಂಎಸ್ ಇತಿಹಾಸ ಪ್ರಾಧ್ಯಾಪಕರಾಗಿದ್ದರೂ ಸಾಹಿತ್ಯದ ಮೇಲೆ ಅವರಿಗಿದ್ದ ಪ್ರೀತಿಯಿಂದಾಗಿ ನನಗೆ ತುಂಬಾ ಮೆಚ್ಚಿನವರಾಗಿದ್ದರು.

ದಲಿತ ವಿದ್ಯಾರ್ಥಿ ಒಕ್ಕೂಟದ (DSF) ನಾಯಕನಾಗಿದ್ದ ನಾನು ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರಿಗೆ ಅತ್ಯಂತ ನೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಇದಕ್ಕೆ ಮುಖ್ಯ ಕಾರಣವೆಂದರೆ, ನಾನು ಬಿಎ ಓದುತ್ತಿದ್ದ ಕಾಲಕ್ಕಾಗಲೇ ಸಾಮಾಜಿಕ ಕಾರ್ಯಕರ್ತನಾಗಿ ಪ್ರಗತಿಪರ ಚಳವಳಿಗಳಲ್ಲಿ ಭಾಗವಹಿಸುವ ಜೊತೆ ಜೊತೆಗೆ ತುಮಕೂರಿನ ಸ್ಥಳೀಯ ಪ್ರಜಾಪ್ರಗತಿ ದಿನಪತ್ರಿಕೆ ಮತ್ತಿತರ ಪತ್ರಿಕೆಗಳಿಗೆ ಸಮಕಾಲೀನ ವಿದ್ಯಮಾನಗಳನ್ನು ಕುರಿತು ಲೇಖನಗಳನ್ನು ಮತ್ತು ಕವಿತೆಗಳನ್ನು ಬರೆಯುತ್ತಿದ್ದೆ. ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕರು ಮತ್ತು ನನ್ನ ಸಹಪಾಠಿಗಳ ನಡುವೆ ಪ್ರತಿಭಾವಂತನಾಗಿ ಗಮನ ಸೆಳೆದಿದ್ದೆ. ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಸಶಕ್ತ ಪ್ರತಿಭೆಗಳನ್ನಾಗಿ ರೂಪಿಸುವ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದ ಜಿಎಂಎಸ್ ಅವರ ಗುಣಗ್ರಾಹ್ಯಕ್ಕೆ ಹೊಂದಿಕೆಯಾಗುವ ಘಟಾನುಘಟಿ ಶಿಕ್ಷಕರು ನಮಗಿದ್ದರು.

 ಆಭೀಪ್ಸೆ‘  ಎಂಬ ಕವನ ಸಂಕಲನ ಹಾಗೂ ಏಕಾಂತ ಮತ್ತು ಇತರ ಪ್ರಬಂಧಗಳುಕೃತಿಯ ಪ್ರಕಟಣೆಯೊಂದಿಗೆ ಹೆಸರುವಾಸಿಯಾಗಿದ್ದ ಸಾಹಿತಿ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ, ‘ಹಳಗನ್ನಡ ವ್ಯಾಕರಣಗಳ ತೌಲನಿಕ ವಿಮರ್ಶೆ‘, ‘ಕೇಶಿರಾಜನ ಶಬ್ದಮಣಿ ದರ್ಪಣ ದಿಗ್ದರ್ಶಿಕೆಮುಂತಾದ ವ್ಯಾಕರಣ ಕೃತಿಗಳನ್ನು ಪ್ರಕಟಿಸಿ ಹೆಸರಾಗಿದ್ದ ಪ್ರೊ.ದೊಡ್ಡಸ್ವಾಮಿ, ಹಳಗನ್ನಡ ಕಾವ್ಯ ಮತ್ತು ಶರಣರ ವಚನಗಳನ್ನು ಕುರಿತು ಮನಮುಟ್ಟುವಂತೆ ಬೋಧಿಸುತ್ತಿದ್ದ ಆವಿನಮಡು ಪ್ರೊ.ಶಿವರಾಮಯ್ಯ, ತುಮಕೂರು ಸಾಹಿತ್ಯ ವಲಯದಲ್ಲಿ ಜನಪದ ಬೇರುಗಳ ಕವಿಯಾಗಿ ಗುರುತಿಸಿಕೊಂಡಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮುಂತಾದವರು ನಮಗೆ ಕನ್ನಡ ಬೋಧಿಸುತ್ತಿದ್ದರು.

ಪ್ರೊ.ಫಿಲೋಮಿನಾ ಫ್ರೀಡಾ, ಪ್ರೊ.ಎಂ.ಎಸ್.ಮಾಳವೀಕ, ಅರೆಕಾಲಿಕ ಆಂಗ್ಲ ಉಪನ್ಯಾಸಕರಾಗಿ ಕವಿ ಕೆ.ಬಿ.ಸಿದ್ದಯ್ಯ, ಬಿ.ಎಲ್.ಎನ್.ಸ್ವಾಮಿ ಮುಂತಾದವರು ಆಂಗ್ಲ ಸಾಹಿತ್ಯವನ್ನು ಬೋಧಿಸುತ್ತಿದ್ದರು. ನಾವು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಆಗಾಗ ನಡೆಯುತ್ತಿದ್ದ ಕಾರ್ಯಕ್ರಮಗಳಿಗಾಗಿ ಪ್ರೊ.ಎಚ್.ಎಸ್.ಶಿವಪ್ರಕಾಶ್, ಪ್ರೊ. ಜಿ.ಎಸ್.ಶಿವರುದ್ರಪ್ಪ, ಪ್ರೊ.ಟಿ.ಎಸ್.ಲೋಹಿತಾಶ್ವ, ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಸಾ.ಶಿ.ಮರುಳಯ್ಯ ಇನ್ನೂ ಮುಂತಾದ ಘಟಾನುಗಟಿ ಕವಿ ಸಾಹಿತಿಗಳು ಬಂದುಹೋಗುತ್ತಿದ್ದರು. ಇವರು ಬಂದಾಗಲೆಲ್ಲಾ ಪ್ರೊ.ಕೆ.ಜಿ.ನಾಗರಾಜಪ್ಪ, ಕೆ.ಆರ್.ನಾಯಕ್, ಕವಿ ವಿ.ಚಿಕ್ಕವೀರಯ್ಯ ಮುಂತಾದವರ ಪಾಲ್ಗೊಳ್ಳುವಿಕೆ ಬಹುತೇಕ ಕಡ್ಡಾಯವೆಂಬಂತೆ ಇದ್ದೇ ಇರುತ್ತಿತ್ತು.

ನಾನು ನಿಲಯಾರ್ಥಿಯಾಗಿದ್ದ ಬೆಂಗಳೂರು ಗೇಟ್ ನ ಸೆಕೆಂಡ್ ಹಾಸ್ಟೆಲಿನಲ್ಲಿ ಆಗಾಗ ನಡೆಯುತ್ತಿದ್ದ ವಿದ್ಯಾರ್ಥಿಗಳ ಸಭೆ ಮತ್ತು ದಿನಾಚರಣೆಗಳಿಗೆ ನಮಗೆ ಪ್ರಾಂಶುಪಾಲರಾಗಿದ್ದ ಪ್ರೊ.ಜಿಎಂಎಸ್, ಎನ್.ಆರ್.ಕಾಲೋನಿಯ ನರಸಿಂಹರಾಜು, ಕೆ.ಬಿ.ಸಿದ್ದಯ್ಯ, ಬಂದಕುಂಟೆ ನಾಗರಾಜಯ್ಯ, ಬೆಲ್ಲದಮಡು ರಂಗಸ್ವಾಮಿ, ನರಸೀಯಪ್ಪ ಇನ್ನೂ ಮುಂತಾದವರನ್ನು ಅತಿಥಿಗಳಾಗಿ ಬರಲು ನಾನು ಆಹ್ವಾನಿಸುತ್ತಿದ್ದೆ. 1985 ರಲ್ಲಿ ನಾನು ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ ನಮಗೆ ದಲಿತ ಚಳವಳಿಯ ನಾಯಕರಾಗಿದ್ದ ಬೆಲ್ಲದಮಡು ಕೃಷ್ಣಪ್ಪನವರ ಮುತುವರ್ಜಿಯಿಂದ ತುಮಕೂರಿನ ಎನ್.ಆರ್. ಕಾಲೋನಿ     ನರಸಿಂಹರಾಜು ಅವರು ಕೊರಟಗೆರೆಯ ನಮ್ಮ ಕಾಲೇಜಿಗೆ ಅತಿಥಿಯಾಗಿ ಬಂದುಹೋಗಿದ್ದರು. ಆಗ ಬೆಳೆದ ನಮ್ಮ ಗೆಳೆತನ ನಾನು ತುಮಕೂರಿಗೆ ಸೇರಿದ ಬಳಿಕ ಮತ್ತಷ್ಟು ಗಾಢವಾಯಿತು.‌ನರಸಿಂಹರಾಜು ‌ಮತ್ತು ಪ್ರೊ.ಜಿಎಂಎಸ್ ಇಬ್ಬರೂ ಅತ್ಯಂತ ನಿಕಟವಾಗಿದ್ದರು. ನಮ್ಮ ವಿದ್ಯಾರ್ಥಿ ನಿಲಯದ ಸಭೆಗಳಿಗೆ ಬರುವಾಗ ಒಮ್ಮೊಮ್ಮೆ ಇಬ್ಬರೂ ಜೊತೆಗೂಡಿ ಬರುತ್ತಿದ್ದರು. ವಿದ್ಯಾರ್ಥಿ ನಾಯಕನಾಗಿದ್ದ ನನ್ನ ಮೇಲೆ ಇಂತಹ ಮಹನೀಯರೆಲ್ಲರ ಪ್ರೇರಣೆ ಮತ್ತು ದಲಿತ ಸಂಘರ್ಷ ಸಮಿತಿಯ ಪ್ರಭಾವದಿಂದ ನಾನು ನನ್ನ ಸುತ್ತಮುತ್ತಲಿನ ಜನರ ನಡುವೆ ಘನತೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಯಿತು.

ನಮ್ಮ ಕಾಲೇಜಿನಲ್ಲಿ ಅದೇ ಕಾಲದಲ್ಲಿ ಚಿಗುರು ಕವಿಕಥೆಗಾರನಾಗಿ ಗುರುತಿಸಿಕೊಂಡಿದ್ದ ನನ್ನ ಆತ್ಮೀಯ ಗೆಳೆಯ ಬಾಲಗುರುಮೂರ್ತಿ  ಬರೆದ ಬ್ಯಾಡಯ್ಯನ ನೇರಳೆ ಮರಎಂಬ ಕಥೆಯು ತರಂಗ ವಾರ ಪತ್ರಿಕೆಯಲ್ಲಿ ತಿಂಗಳ ಬಹುಮಾನಿತ ಕಥೆಯಾಗಿ ಆಯ್ಕೆಯಾಗಿ 500 ರೂಪಾಯಿ ಬಹುಮಾನ ಬಂದಿತ್ತು.  ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರು, ಕಾಲೇಜಿನಲ್ಲಿ ನಡೆಯುವ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಎಲ್ಲಾ ವಿದ್ಯಾರ್ಥಿ ಮತ್ತು ಶಿಕ್ಷಕರೆದುರು “ತರಂಗ” ಪತ್ರಿಕೆಯಲ್ಲಿ ಪ್ರಕಟವಾದ ಕಥೆಯನ್ನು ಎತ್ತಿಡಿದು ತೋರಿಸಿ ಚಪ್ಪಾಳೆ ಹೊಡೆಯಿಸಿದ್ದರು. ಅದಾದ ನಂತರ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ನಾನು ಮತ್ತು ಸೊಂಡೆಕೊಪ್ಪದ ಎಸ್.ಟಿ.ಸೋಮಶೇಖರ್ ಸಮಾಜದ ಮೇಲೆ ಅಂಬೇಡ್ಕರ್ ಅವರ ಚಿಂತನೆಗಳ ಪ್ರಭಾವಎಂಬ ವಿಷಯ ಕುರಿತು ಮಾತನಾಡಿ ನಮ್ಮ ಕಾಲೇಜಿಗೆ ಪರ್ಯಾಯ ಪಾರಿತೋಷಕ ಮತ್ತು 500 ರೂಪಾಯಿ ನಗದು ಬಹುಮಾನ ಗೆದ್ದುಕೊಂಡು ಬಂದಿದ್ದೆವು. ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಮತ್ತು ನಮ್ಮ ಕಡಕ್ ಪ್ರಾಂಶುಪಾಲರಾಗಿದ್ದ ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರು ಕಾಲೇಜಿನ ಸಮಾರಂಭವೊಂದರಲ್ಲಿ ನಮಗೆ ಪಾರಿತೋಷಕವನ್ನು ಮತ್ತು ಬಹುಮಾನವನ್ನು ಪ್ರದಾನ ಮಾಡಿ ಬೆನ್ನು ತಟ್ಟಿದ್ದರು.

ಮಿತ ಮಾತುಗಾರರಾಗಿದ್ದ ಪ್ರೊ.ಜಿಎಂಎಸ್ ಅವರು ಪ್ರಾಮಾಣಿಕ‌ಮತ್ತು ನೇರ ನಿಷ್ಟುರ‌ನಡೆಯ ಆಡಳಿತಗಾರರಾಗಿದ್ದರು. ಜಿಎಂಎಸ್ ಅವರ ಮಾರ್ಗದರ್ಶನದಲ್ಲಿ  ಪ್ರೊ.ಸಣ್ಣಗುಡ್ಡಯ್ಯ ಮತ್ತು ಪ್ರೊ. ಎಸ್.ಜಿ.ಸಿದ್ದರಾಮಯ್ಯನವರು ನಮ್ಮ ಕಾಲೇಜಿನ ಸಾಹಿತ್ಯದ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ಆಕಾಶವಾಣಿಯಿಂದ “ಸಾಹಿತ್ಯ ಮತ್ತು ಸಾಮಾನ್ಯ” ಎಂಬ ವಿಷಯದ ಮೇಲೆ ರೇಡಿಯೋ ಸಂವಾದವನ್ನು ಆಯೋಜಿಸಿದ್ದರು ಅದರಲ್ಲಿ ಪ್ರಥಮವಾಗಿ ನಾನು ಮತ್ತು ನನ್ನ ಕೆಲವು ಗೆಳೆಯರು ಮಾತನಾಡಿದೆವು. ಈಗ ದೂರದರ್ಶನ ವಾಹಿನಿಗಳಲ್ಲಿ ಬಿತ್ತರವಾಗುವಾಗಿನ ವಿಷಯಗಳಿಗಿಂತಲೂ ಹೆಚ್ಚಿನದ್ದಾದ ಮಹತ್ವ ಆಗಿನ ರೇಡಿಯೋ ಕಾರ್ಯಕ್ರಮಗಳಿಗಿತ್ತು.

ಕವಿತೆ- ಲೇಖನಗಳನ್ನು ಬರೆಯುತ್ತಿದ್ದ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ನಾಯಕತ್ವವನ್ನು ವಹಿಸಿಕೊಂಡಿದ್ದ ನಾನು, ನಮ್ಮ ಕಾಲೇಜಿನಲ್ಲಿ ಕಥೆ -ಕವಿತೆಗಳನ್ನು ಬರೆಯುತ್ತಿದ್ದ ನನ್ನ ವಾರಿಗೆ ಗೆಳೆಯನಾದ  ಆರ್.ಉಮೇಶ್ ಮತ್ತು ಕ್ರೈಸ್ಟ್ ಯೂನಿಯನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಜಿ.ಇಂದ್ರಕುಮಾರ್ ಮುಂತಾದ ಗೆಳೆಯರು ಸೇರಿಕೊಂಡು ಕಾಲೇಜಿನ ವಿದ್ಯಾರ್ಥಿಗಳಿಂದ ಆಗಾಗ ಕವಿಗೋಷ್ಠಿ ಆಯೋಜಿಸುತ್ತಿದ್ದೆವು. ನಾವು ತುಮಕೂರು ಜಿಲ್ಲಾ ಮಟ್ಟದ ವಿದ್ಯಾರ್ಥಿ ಕವಿಗೋಷ್ಠಿಯನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿ ಪ್ರೊ.ಎಚ್.ಜಿ.ಸಣ್ಣ ಗುಡ್ಡಯ್ಯ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮುಂತಾದವರನ್ನು ಆಹ್ವಾನಿಸಿದ್ದೆವು. ಇದು ಆ ಕಾಲದಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿ ತುಮಕೂರು ನಗರದಲ್ಲಿ ಸಾರ್ವಜನಿಕರ ಗಮನ ಸೆಳೆದಿತ್ತು.

ಇದೆಲ್ಲವೂ ಪ್ರೊ.ಜಿಎಂಎಸ್ ಅವರು ನನ್ನ ಮೇಲಿರಿಸಿದ್ದ ಪ್ರೀತಿಯನ್ನು ಉತ್ಕಟಗೊಳಿಸಿದವು.‌ನಮಗೆ ಹಾಸ್ಟೆಲ್ ವಾರ್ಡನ್ ಆಗಿದ್ದ ಮಧುಗಿರಿಯ ಸೋಮಶೇಖರ್ ಎಂಬ ಖದೀಮನೊಬ್ಬ ನಮಗೆ ಆಗಾಗ ಹುಳು ತುಂಬಿದ ಮುಗ್ಗಲಿಡಿದ ಅಕ್ಕಿಯ ಅನ್ನ ಬೇಯಿಸಿ ಹಾಕುತ್ತಿದ್ದ. ಇವನ ವಿರುದ್ಧ ಕ್ರಮ ಜರುಗಿಸಲು ಪ್ರೊ.ಜಿಎಂಎಸ್ ಅವರಿಗೆ ಹಲವಾರು ಸಲ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ರೋಸಿಹೋದ ನಾನು ಹಾಸ್ಟೆಲಿನ ಎಲ್ಲಾ ವಿದ್ಯಾರ್ಥಿಗಳನ್ನು ಮುಗ್ಗಲನ್ನ ತುಂಬಿದ್ದ ತಟ್ಟೆಗಳ ಸಹಿತ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋದೆ. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಾಯಿಪ್ರಕಾಶ್ ಅವರು ನಮ್ಮ ಮೆರವಣಿಗೆಯ ಸಾಲು ನೋಡಿ, ”ಪೊಲೀಸ್ ಇಲಾಖೆಯ ನಮಗೆ ಮಾಹಿತಿ ಕೊಡದೆ ಇದೇನಿದು ಬೀದಿಗಳಲ್ಲಿ ತಟ್ಟೆಗಳ ಮೆರವಣಿಗೆ?’ ಎಂದು ನಮ್ಮ ಮೇಲೆ ಲಾಠಿ ಬೀಸಲು ಬಂದರು. ಸ್ವಲ್ಪವೂ ವಿಚಲಿತರಾಗದೆ, “ನಾವು ಹಾಸ್ಟೆಲ್ ಹುಡುಗರು. ಈ ಹುಳು ತುಂಬಿದ ಅನ್ನ ನೋಡಿ ಸರ್? ಇದನ್ನು ಡಿಸಿ ಸಾಹೇಬರಿಗೆ ತೋರಿಸಿ ದೂರು ಕೊಡಲು ಹೋಗುತ್ತಿದ್ದೇವೆ” ಎಂದು ಎಲ್ಲಾ ವಿದ್ಯಾರ್ಥಿಗಳು ಅನ್ನದಲ್ಲಿದ್ದ ಹುಳುಗಳನ್ನು ತೋರಿಸಿದೆವು.‌ಹುಳುಗಳನ್ನು ನೋಡಿದ ಸಾಯಿಪ್ರಕಾಶ್ , “ಅಯ್ಯೋ! ಇಂತಹ ಅನ್ನವನ್ನು ಹಂದಿಗಳಿಗೂ ಹಾಕಬಾರದು” ಎಂದು ಹೇಳಿ ಸ್ವಯಂ ಮುಂದೆನಿಂತು ನಮ್ಮ ಮೆರವಣಿಗೆಯ ಸಾಲನ್ನು ಸಾವಧಾನವಾಗಿ ಡಿಸಿ ಕಚೇರಿವರೆಗೂ ಮುನ್ನಡೆಸಿದರು.

 ಜಿಲ್ಲಾಧಿಕಾರಿಗಳು ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರನ್ನು ತಮ್ಮ ಕಚೇರಿಗೆ ಕರೆಸಿಕೊಂಡರು. ಡಿಸಿ ಸಾಹೇಬರು ನಮ್ಮ‌ಜಿಎಂಎಸ್ ಜೊತೆಯಲ್ಲಿ ಅದೇನು ‌ಮಾತಾಡಿದರೋ ನಮಗೆ ತಿಳಿಯದು. ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರು ಕಚೇರಿಯಿಂದ ಹೊರಗೆ ಬಂದು ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ನೋಡುವಾಗ ಅವರ ಕಣ್ಣುಗಳಿಂದ ಹನಿಗಳು ಜಾರುತ್ತಿದ್ದವು. ಒದ್ದೆಯಾದ ಕನ್ನಡಕವನ್ನು ಒರೆಸಿಕೊಂಡು ನನ್ನ ತಲೆ ನೇವರಿಸಿದರು.

ಮುಂದಿನ ಕೆಲವು ತಿಂಗಳಿನಲ್ಲಿ ಪ್ರೊ.ಜಿಎಂಎಸ್ ಸ್ವಯಂ ನಿವೃತ್ತಿ ತೆಗೆದುಕೊಂಡರು. ನಾನು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಸೇರಿಕೊಂಡೆ. ಬೆಂಗಳೂರಿನಿಂದ ತುಮಕೂರಿಗೆ ಹೋದಾಗ ಆಗಾಗ ಜಿಎಂಎಸ್ ಅವರನ್ನು ಭೇಟಿಯಾಗುತ್ತಲೇ ಇದ್ದೆ. ಉನ್ನತ ಶಿಕ್ಷಣ ಮುಗಿಸಿಕೊಂಡು ವಾಪಸ್ ತುಮಕೂರಿಗೆ ಅರೆಕಾಲಿಕ ಇಂಗ್ಲಿಷ್ ಉಪನ್ಯಾಸಕನಾಗಿ ಸೇರಿಕೊಂಡ ಬಳಿಕ ಸಾಹಿತ್ಯ ಗೋಷ್ಠಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ನಾವು ಭೇಟಿಯಾಗುತ್ತಿದ್ದೆವು. 2000-01 ನೇ ಸಾಲಿನಲ್ಲಿ ನನ್ನ ಚೊಚ್ಚಲ ಆಸಾದಿಖಂಡಕಾವ್ಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಬಂದಕುಂಟೆ ನಾಗರಾಜಯ್ಯ, ಚೇಳೂರು ವೆಂಕಟೇಶ್ ಮುಂತಾದ ಗೆಳೆಯರು ದಲಿತ ಸಾಂಸ್ಕೃತಿಕ ವೇದಿಕೆವತಿಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿದ್ದರು.

ಪ್ರೊ.ಬರಗೂರು ರಾಮಚಂದ್ರಪ್ಪನವರು ಅಭಿನಂದನಾ ನುಡಿಗಳನ್ನಾಡಿದ ಆ ಸಮಾರಂಭದ ವೇದಿಕೆಯ ಮೇಲೆ ಪ್ರೊ. ಜಿ.ಎಂ‌.ಎಸ್ ನನ್ನನ್ನು ಬಾಚಿ ತಬ್ಬಿಕೊಂಡರು. ತುಮಕೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ತೆರೆದಿದ್ದ ಸಿರಿಗನ್ನಡ ಪುಸ್ತಕದ ಅಂಗಡಿಯನ್ನು ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಮತ್ತು ಕೆ.ದೊರೈರಾಜ್ ಅವರು ಕೆಲಕಾಲ ನೋಡಿಕೊಂಡಿದ್ದರು. ನಾನು ಆಗಾಗ ಹೋಗಿ ಇಬ್ಬರನ್ನೂ ಮಾತಾಡಿಸಿಕೊಂಡು ಬರುತ್ತಿದ್ದೆ. ಪುಸ್ತಕ ಮಳಿಗೆ ಮುಚ್ಚಿಹೋಯಿತು. ಅಕ್ಷರಗಳು ಹಚ್ಚಿದ ಜ್ಞಾನದ ಬೆಳಕಿಗೆ ಸಾವಿಲ್ಲ. ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದು ಕಣ್ಣುಮುಚ್ಚಿ ನಮ್ಮನ್ನು ಅಗಲಿ ಹೋಗಿರುವ ಪ್ರೊ.ಜಿಎಂಎಸ್, ಅಕ್ಷರದ ದೀಪವಾಗಿ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಎದೆಗಳಲ್ಲಿ ಬೆಳಗುತ್ತಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ಗೌರವಪೂರ್ವಕ ಅಂತಿಮ ನಮನಗಳು

ಲೇಖನ:ಡಾ.ವಡ್ಡಗೆರೆ ನಾಗರಾಜಯ್ಯ

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon