ಚಂದ್ರವಳ್ಳಿ ನ್ಯೂಸ್, ಹಾವೇರಿ :
ಹಾವೇರಿ ತಾಲೂಕು ಗುತ್ತಲ ಗ್ರಾಮದಲ್ಲೊಂದು ಗಣಪತಿ ಮೂರ್ತಿ ತಯಾರಿಸುವ ವಿಶಿಷ್ಟ ಅವಿಭಕ್ತ ಕುಟುಂಬವಿದೆ. ನೆಗಳೂರುಮಠ ಹೆಸರಿನ ಈ ವಿಶಿಷ್ಠ ಕಲಾವಿದ ಕುಟುಂಬದಲ್ಲಿ ನಲವತ್ತಕ್ಕೂ ಅಧಿಕ ಸದಸ್ಯರಿದ್ದಾರೆ. ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10 ಕ್ಕೂ ಅಧಿಕ ಜನರು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಇಂಜಿನಿಯರ್, ಖಾಸಗಿ ನೌಕರಿಯನ್ನ ಈ ಕುಟುಂಬದ ಸದಸ್ಯರು ಮಾಡುತ್ತಿದ್ದಾರೆ.
ಆದರೆ ಗಣೇಶನ ಹಬ್ಬ ಬಂದರೆ ಸಾಕು ಈ ಕುಟುಂಬದ ಸದಸ್ಯರೆಲ್ಲ ಗುತ್ತಲದ ತಮ್ಮ ಮನೆಗೆ ಬರುತ್ತಾರೆ. ತಮ್ಮ ತಾತ ಮುತ್ತಾತ ಕಾಲದಿಂದ ಬಂದ ಗಣೇಶ ಮೂರ್ತಿ ತಯಾರಿಕೆಯತ್ತ ಈ ಕುಟುಂಬದ ಸದಸ್ಯರು ಮುಂದಾಗುತ್ತಾರೆ. ಕೆಲವರು ತಿಂಗಳ ಕಾಲ ಮೊದಲೇ ಮುಂದೆ ಬಂದು ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಗಣೇಶ ಮೂರ್ತಿಗಳು ತಯಾರಾದ ನಂತರವಂತೂ ಗಣೇಶ ಮೂರ್ತಿಗಳಿಗೆ ಬಣ್ಣ ಹಚ್ಚಲು ನಲವತ್ತಕ್ಕೂ ಅಧಿಕ ಸದಸ್ಯರು ಗುತ್ತಲಕ್ಕೆ ಬರುತ್ತಾರೆ. ತಮ್ಮ ಸರ್ಕಾರಿ ಕೆಲಸಕ್ಕೆ ವಾರದ ಕಾಲ ರಜೆ ಹಾಕಿ ಗಣೇಶ ಮೂರ್ತಿಗೆ ಬಣ್ಣ ಬಳಿಯಲು ಮುಂದಾಗುತ್ತಾರೆ. ಇನ್ನು ಕೆಲವರು ದೂರದ ಬೆಂಗಳೂರು ಮೈಸೂರು ಮುಂಬೈಯಿಂದ ಖಾಸಗಿ ಕೆಲಸಕ್ಕೆ ರಜೆ ಹಾಕಿ ಗಣೇಶ ಮೂರ್ತಿಗೆ ಬಣ್ಣ ಹಚ್ಚಲು ಬರುತ್ತಾರೆ.
ಗಣೇಶನ ಹಬ್ಬ ಹತ್ತೀರವಾಗುತ್ತಿದ್ದಂತೆ ನೆಗಳೂರುಮಠ ಮನೆ ಗಣೇಶನ ಮೂರ್ತಿ ತಯಾರಿಸುವ ಕಾರ್ಖಾನೆಯಂತೆ ಬಾಸವಾಗುತ್ತೆ. ಕೆಲವರು ಕೈಯಲ್ಲಿ ಕುಂಚ ಹಿಡಿದು ಬಣ್ಣ ಬಳೆಯುತ್ತಿದ್ದರೆ ಇನ್ನು ಕೆಲವರು ಗಣೇಶ ಮೂರ್ತಿಗಳಿಗೆ ಅಂತಿಮ ಹಂತದ ಸ್ಪರ್ಷ ನೀಡುತ್ತಾರೆ.ಶತಮಾನದಿಂದ ಈ ಕುಟುಂಬ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದೆ. ಸಂಪೂರ್ಣ ಮಣ್ಣಿನ ಮತ್ತು ಪರಿಸರ ಸ್ನೇಹಿ ಬಣ್ಣಗಳನ್ನು ಈ ಕುಟುಂಬ ಬಳಿಸುತ್ತದೆ. ಗುತ್ತಲ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಥಾಪಿಸುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಈ ಕುಟುಂಬದ ಸದಸ್ಯರೇ ಮಾಡುವದು ವಿಶೇಷ. ಈ ಕುಟುಂಬದ ಸದಸ್ಯರು ಈ ರೀತಿ ಉನ್ನತ ಸ್ಥಾನಗಳಿಸಲು ಗಣೇಶ ಮೂರ್ತಿಗಳನ್ನು ಸೇವೆಯಂದು ಪರಿಗಣಿಸಿರುವುದೇ ಕಾರಣ ಎಂದು ಈ ಕುಟುಂಬದ ಸದಸ್ಯರು ನಂಬಿದ್ದಾರೆ.
ಹೀಗಾಗಿ ಗಣೇಶ ಮೂರ್ತಿಗಳನ್ನು ತಯಾರಿಸಲು ಈ ಕುಟುಂಬದ ಸದಸ್ಯರು ಯಾವುದೇ ಕೆಲಸದಲ್ಲಿದ್ದರು ಬಿಟ್ಟು ಗುತ್ತಲ ಗ್ರಾಮಕ್ಕೆ ಬರುತ್ತಾರೆ. ಈ ಮನೆಗೆ ಹೊಸದಾಗಿ ಬರುವ ಸೊಸೆಯಂದಿರು ಮತ್ತು ಅಳಿಯಂದಿರು ಸಹ ಗಣಪತಿ ಮೂರ್ತಿ ತಯಾರಿಸುತ್ತಾರೆ ಗಣೇಶ ಮೂರ್ತಿಗೆ ಬಣ್ಣ ಬಳಿಯುತ್ತಾರೆ. ಈ ಕುಟುಂಬದ ಇನ್ನೊಂದು ವಿಶೇಷ ಅಂದರೆ ಇವರು ನೀಡುವ ಗಣೇಶ ಮೂರ್ತಿಗಳಿಗೆ ಯಾವುದೇ ದರ ನಿಗದಿ ಮಾಡುವದಿಲ್ಲ. ಭಕ್ತರು ಎಷ್ಟು ಹಣ ನೀಡುತ್ತಾರೆ ಅದನ್ನೆ ಪಡೆಯುವ ಈ ಕುಟುಂಬ ಗಣೇಶ ಮೂರ್ತಿಯನ್ನ ಭಕ್ತರಿಗೆ ನೀಡುತ್ತಾರೆ. ಈ ಕುಟುಂಬದ ನಿಜಗುಣಯ್ಯ ಆರಂಭಿಸಿರುವ ಈ ಗಣೇಶ ಮೂರ್ತಿ ತಯಾರಿಕೆಯನ್ನಮಕ್ಕಳು ಮೊಮ್ಮಕ್ಕಳು ಮುಂದುವರೆಸಿಕೊಂಡಿದ್ದಾರೆ.
ಶತಮಾನದ ಹಿನ್ನೆಲೆಈ ಕುಟುಂಬದ ಗಣೇಶ ಮೂರ್ತಿ ತಯಾರಿಕೆಗೆ ಶತಮಾನದ ಹಿನ್ನೆಲೆ ಇದೆ. ನಿಜಗುಣಯ್ಯ ಕಲಾಪರಂಪರೆಯನ್ನು ಉಳಿಸಿಕೊಂಡು ಸೇವೆಯನ್ನ ಮುಂದುವರೆಸಿಕೊಂಡು ಹೋಗುವುದೇ ನಮ್ಮ ಜವಬ್ದಾರಿ ಎನ್ನುತ್ತಾರೆ ಈ ಕುಟುಂಬದ ಸದಸ್ಯರು. ಈ ಗಣೇಶ ಹಬ್ಬ ದೂರ ದೂರ ಇರುವ ಮನೆಯ ಸದಸ್ಯರನ್ನ ಒಂದು ಕಡೆ ಸೇರುವಂತೆ ಮಾಡುತ್ತೆ. ಈ ದಿನಗಳು ಹೇಗೆ ಕಳೆದು ಹೋದವು ಎನ್ನುವುದೇ ನಮಗೆಗೊತ್ತಾಗುವದಿಲ್ಲಾ. ಗಣೇಶ ಹಬ್ಬ ಮುಗಿಸಿ ಮತ್ತೆ ಕೆಲಸಕ್ಕೆ ಹೋಗುವಾಗ ಬೇಸರವಾಗುತ್ತೆ ಗಣೇಶನ ಹಬ್ಬ ಮತ್ತೆ ಯಾವಾಗ ಬರುತ್ತೆ ಎನಿಸುತ್ತೆ ಎನ್ನುತ್ತಾರೆ ಈ ಕುಟುಂಬದ ಸದಸ್ಯರು. ಈ ವಿಶಿಷ್ಟ ಕುಟುಂಬವನ್ನ ಗುತ್ತಲ ಗ್ರಾಮಸ್ಥರು ಸಹ ವಿಶೇಷ ಗೌರವದಿಂದ ಕಾಣುತ್ತಾರೆ.
ಇಂತಹ ಕುಟುಂಬ ನಮ್ಮ ಗ್ರಾಮದಲ್ಲಿರುವದು ಗ್ರಾಮದ ಹೆಮ್ಮೆ ಎನ್ನುತ್ತಾರೆ ಗ್ರಾಮಸ್ಥರು. ಈ ಕುಟುಂಬದ ನಿಜಗುಣಯ್ಯ 75 ವರ್ಷದ ಹಿಂದೆ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಈ ಕುಟುಂಬದ ಸದಸ್ಯರು ಉಳಿಸಿಕೊಂಡು ಬಂದಿದ್ದಾರೆ.