ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಕ್ಷ ನಿಷ್ಟರಾಗಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಮತೀಯ ಶಕ್ತಿಗಳೊಡನೆ ಕೈಜೋಡಿಸುವುದಿಲ್ಲವೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸ್ಪಷ್ಠಪಡಿಸಿದರು.
ಬಚ್ಚಬೋರನಹಟ್ಟಿ ಸಮೀಪವಿರುವ ಎಸ್.ಪಿ.ಆನಂದ್ ರವರ ಕುರಿ ಫಾರಂನ್ನು ಗುರುವಾರ ವೀಕ್ಷಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿ.ರವರು ಬಿಜೆಪಿ ಸೇರುತ್ತಾರೆಂಬ ಊಹಾ ಪೋಹಗಳು ಸತ್ಯಕ್ಕೆ ದೂರವಾದುದು.
ಬಿಜೆಪಿ. ಹಾಗೂ ಅವರ ರಾಜಕೀಯ ವೈರಿಗಳು ಹಬ್ಬಿಸುತ್ತಿರುವ ಇಂತಹ ಅಪ ಪ್ರಚಾರ ನಿಲ್ಲಬೇಕು. ಇಂದಿರಾಗಾಂಧಿ ಕುಟುಂಬಕ್ಕೆ ನಿಷ್ಟರಾಗಿರುವ ಡಿ.ಕೆ.ಶಿವಕುಮಾರ ರವರು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಜಾತ್ಯಾತೀತ ಸಿದ್ದಾಂತಗಳ ಮೇಲೆ ನಂಬಿಕೆಯಿಟ್ಟು ರಾಜಕೀಯ ಬದುಕು ಕಟ್ಟಿಕೊಂಡವರು. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. 2028 ರ ಚುನಾವಣೆಯು ನನ್ನ ನಾಯಕತ್ವದಲ್ಲಿಯೇ ನಡೆಯುತ್ತದೆಂದು ಹೇಳಿರುವಾಗ ಬಿಜೆಪಿ. ಸೇರುವ ಮಾತೆಲ್ಲಿಂದ ಬಂತು. ಇದೆಲ್ಲಾ ವಿರೋಧಿಗಳ ಕುಹಕ ಎಂದು ಡಿಕೆಶಿ ಬಗ್ಗೆ ವಿವಾದ ಹುಟ್ಟು ಹಾಕುತ್ತಿರುವವರಿಗೆ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದರು.
ಪಕ್ಷದಲ್ಲಿ ಯಾವುದೇ ಸ್ಥಾನಮಾನಗಳ ಬಗ್ಗೆ ಡಿ.ಕೆ.ಶಿವಕುಮಾರ್ ಎಂದಿಗೂ ಚಿಂತಿಸಿದವರಲ್ಲ. ಯಾವ ಕಾಲಘಟ್ಟದಲ್ಲಿ ಯಾರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಕಾಂಗ್ರೆಸ್ ಮೇಲೆ ಅಚಲವಾದ ನಂಬಿಕೆಯಿಟ್ಟಿರುವ ಅವರು ಎಂದಿಗೂ ಬಿಜೆಪಿ. ಕಡೆ ಮುಖ ಮಾಡಿದವರಲ್ಲ.
ಪಕ್ಷದಲ್ಲಿಯೇ ಉಳಿದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿಯಾಗಿರುತ್ತಾರೆಂದು ಹೇಳಿದರು. ಎಸ್.ಪಿ.ಆನಂದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಈ ಸಂದರ್ಭದಲ್ಲಿದ್ದರು.