“ಈ ಸಿನಿಮಾ ಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಆರ್.ಕೆ.ಗಾಂಧಿ ನಿರ್ದೇಶನದ ಹೊಸ ಚಿತ್ರಕ್ಕೆ ಮುಹೂರ್ತ
ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ
ರಾಜೀವ್ ಕೃಷ್ಣ ಅವರು ಈ ಸಿನಿಮಾ ಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹೊಸಕೋಟೆ ತಾಲ್ಲೂಕಿನ ಎಂ. ಸತ್ಯವಾರದ ಶ್ರೀ ಮಹೇಶ್ವರಮ್ಮ ದೇವಿಯ ಸನ್ನಿಧಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿತು,
ಚಿತ್ರದ ಮೊದಲ ದೃಶ್ಯಕ್ಕೆ ಸಮಾಜ ಸೇವಕ ಸತ್ಯವಾರ ನಾಗೇಶ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ಗ್ರಾ. ಪಂಅಧ್ಯಕ್ಷರಾದ ಕಮಲೇಶ್ ಅವರು ಕ್ಲಾಪ್ ಮಾಡಿದರು. ನಂತರ ಮಾತನಾಡಿದ ಕಮಲೇಶ್, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಎಲೆ ಮರೆಯ ಕಾಯಂತಿರುವ ಪ್ರತಿಭಾವಂತ ಕಲಾವಿದರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸುತ್ತಿರುವ ಆರ್.ಕೆ.ಗಾಂಧಿ ಅವರ ಕೆಲಸ ಶ್ಲಾಘನೀಯ ಎಂದರು,
ನಂತರ ಸತ್ಯವಾರ ನಾಗೇಶ್ ಮಾತನಾಡಿ ಚಿತ್ರರಂಗಕ್ಕೆ ಯಾವುದೋ ಮಾಯೆ ಕಾಡುತ್ತಿದೆ, ಥಿಯೇಟರಿಗೆ ಜನ ಬರುತ್ತಿಲ್ಲ. ಹಾಗಾಗಿ ಜನ ಸಿನಿಮಾ ಥಿಯೇಟರಿಗೆ ಬರಲು ಗಿಮಿಕ್ ಉಪಯೋಗಿಸಬೇಕು. ಈ ಸಿನಿಮಾಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ. ಎಂಬ ಟೈಟಲ್ ಅಂತಹ ಗಿಮಿಕ್ ಆಗಿದೆ.. ನಿರ್ದೇಶಕ, ನಿರ್ಮಾಪಕರ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದರು.
ಗೋವಾಗೆ ಟ್ರಿಪ್ ಹೊರಡುವ 6 ಜನ ಹುಡುಗ, ಹುಡುಗಿಯರ ಜೀವನದಲ್ಲಿ ಆಗಂತುಕನೊಬ್ಬ ಬಂದಾಗ ಅವರಿಗೆ ಎದುರಾದಾಗ ಸಂಕಷ್ಟಗಳು ಹಾಗೂ ಅವುಗಳನ್ನು ಆ ಸ್ನೇಹಿತರು ಹೇಗೆ ಎದುರಿಸುತ್ತಾರೆ ಎಂಬುದನ್ನು ಈ ಸಿನಿಮಾ ಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ಆರ್.ಕೆ.ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಬಾಹುಬಲಿ ಸಿನಿಮಾದ ಕಾಲಕೇಯ ಖ್ಯಾತಿಯ ಪ್ರಭಾಕರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಹರಿ ಬಂಗಾರಪೇಟ್, ದೀನ ಉಪ್ಪಾಡ, ರಾಮ್ ಜನಾರ್ದನ್, ರೂಪಶ್ರೀ, ಅಶೋಕ್ ರೆಡ್ಡಿ, ದೇವರಾಜ್, ಎಂ ವಿ. ಸಮಯ್, ಬಲರಾಂ ಮೊದಲಾದವರು ನಟಿಸುತ್ತಿದ್ದಾರೆ.
ಎರಡೂವರೆ ಗಂಟೆಯ ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಇರುವುದಿಲ್ಲ, ಆದರೆ ಸಿನಿಮಾ ನೋಡಿದ ನಂತರ ಪ್ರೇಕ್ಷಕರೇ ಚಿತ್ರಕ್ಕೊಂದು ಒಳ್ಳೆಯ ಕ್ಲೈಮ್ಯಾಕ್ಸ್ ನೀಡಬೇಕೆಂದು ನಿರ್ದೇಶಕರು ವಿನಂತಿಸುತ್ತಾರೆ, ಅದರಂತೆ ಪ್ರೇಕ್ಷಕ ಪ್ರಭುಗಳು ನೀಡಿದ ಅತ್ಯುತ್ತಮ ಕ್ಲೈಮ್ಯಾಕ್ಸ್ ಗೆ ನಗದು ಬಹುಮಾನ ವಿತರಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಸಕಲೇಶಪುರ, ಮಂಗಳೂರು, ಬೆಂಗಳೂರು, ಚಿಕ್ಕಬಳ್ಳಾಪುರ ಸುತ್ತ ಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿರುವ ಈ ಚಿತ್ರಕ್ಕೆ ಪ್ರಮೋದ್ ಆರ್ ಮತ್ತು ಬಿ ಯುವರಾಜ್ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ಪ್ರತಾಪ್ ಬಟ್ ಹಾಗು ಆರ್ ಕೆ. ಗಾಂಧಿ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಅವರ ಸಾಹಸ, ಸೂರ್ಯ ಕಿರಣ್ ಅವರ ನೃತ್ಯ ಸಂಯೋಜನೆ, ಮಲ್ಲಿಕಾರ್ಜುನ ಅವರ ಕಲೆ, ಮೋಹನ್ ಕುಮಾರ್ ಪ್ರಸಾದನ, ಅಶೋಕ್ ರೆಡ್ಡಿ ನಿರ್ಮಾಣ ನಿರ್ವಹಣೆ ಇದೆ.
ಎಲ್ಲವೂ ಅಂದುಕೊಂಡಂತೆ ಆದಲ್ಲಿ ನವೆಂಬರ್ ಅಂತ್ಯದಲ್ಲಿ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ.