ಚಂದ್ರವಳ್ಳಿ ನ್ಯೂಸ್, ಮೈಸೂರು:
ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲೇ ಇರುತ್ತೇನೆ ಮತ್ತು ಜನರ ಸೇವೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ ವ್ಯಾಪ್ತಿಯ ವರಕೋಡು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಗೆಲುವು-ಸೋಲು ಸಹಜವಾದದ್ದು ಎಂದು ಹೇಳಿದ ಸಿಎಂ, ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ಚುನಾವಣೆಯಲ್ಲಿ ಸೋತಾಗಲೂ ನಾನು ಜನಸೇವೆಯನ್ನು ಎಂದಿಗೂ ಬಿಟ್ಟಿಲ್ಲ ಎಂದು ಹೇಳಿದರು.
ಮಗನನ್ನೂ ಬೆಳೆಸಿ: ನಾನು ಮುಖ್ಯಮಂತ್ರಿಯಾಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚು ಬಾರಿ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ, ನನ್ನ ಮಗ ಯತೀಂದ್ರ ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ನೀವು ನನ್ನನ್ನು ಹೇಗೆ ಬೆಳೆಸಿದಿರೋ ಹಾಗೆಯೇ ಯತೀಂದ್ರನನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಗ್ರಾಮಸ್ಥರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಸಿದ್ದರಾಮಯ್ಯ ದೇವರ ಕುರಿತು ಮಾತನಾಡಿ, ದೇವರ ಮೇಲಿನ ಭಕ್ತಿ ಶುದ್ಧವಾಗಿರಬೇಕು. ದೇವರು ಇದ್ದಾನೆ. ಭಕ್ತಿ ಎಲ್ಲರಲ್ಲೂ ಇರಬೇಕು. ಆದರೆ ಶುದ್ಧವಾದ ಭಕ್ತಿ ಇಲ್ಲದೆ ಎಷ್ಟೇ ದೇವರ ದರ್ಶನ ಮಾಡಿದರೂ ಪ್ರಯೋಜನ ಆಗುವುದಿಲ್ಲ. ಯಾರನ್ನೂ ದ್ವೇಷಿಸದ ಭಕ್ತಿ ಇರಬೇಕು ಎಂದು ಸಿಎಂ ತಿಳಿಸಿದರು.
ನಮಗೂ ಹಾಗೂ ಇತರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದಾಗ ಮಾತ್ರ ದೇವರು ಒಲಿಯುತ್ತಾನೆ. ದೇವರು ದೇವಸ್ಥಾನದಲ್ಲೇ ಮಾತ್ರ ಅಲ್ಲ, ಎಲ್ಲೆಡೆ ಇದ್ದಾನೆ. ಯಾರು ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುತ್ತಾರೋ ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ, ದೇವರು ಪ್ರತಿಕ್ಷಣ ನಾವು ಮಾಡುವ ಕೆಲಸವನ್ನು ನೋಡುತ್ತಾನೆ. ಇತರರಿಗೆ ಕೆಟ್ಟದ್ದು ಬಯಸಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ನಾನು ಸದಾ ಇಡೀ ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸೇಬಿಗಾಗಿ ಮುಗಿಬಿದ್ದ ಜನ-
ಬೀರೇಶ್ವರಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ಅವರು ಗ್ರಾಮಕ್ಕೆ ಆಗಮಿಸಿದಾಗ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಸಿಎಂ ತೆರಳಿದ ನಂತರ ಸೇಬು ಕೀಳಲು ಜನರು ಮುಗಿಬಿದ್ದರು.
ಹೆಚ್ಚು ಜನ ಜಮಾಯಿಸಿದ್ದನ್ನು ಕಂಡು ಕ್ರೇನ್ ಆಪರೇಟರ್ ಹಾರವನ್ನು ಜಗ್ಗಾಡಿ ಆಟವಾಡಿಸಿದ ದೃಶ್ಯ ಕಂಡುಬಂತು. ಹಾರ ಕೆಳಗಿಳಿಸುತ್ತಿದ್ದಂತೆಯೇ ಜನರು ಇಡೀ ಹಾರವನ್ನೇ ತುಂಡರಿಸಿ ಸೇಬನ್ನು ಕಿತ್ತುಕೊಂಡರು. ಕ್ಷಣಾರ್ಧದಲ್ಲಿ ಬೃಹತ್ ಹಾರದ ಒಂದೂ ಸೇಬನ್ನು ಬಿಡದೆ ಕಿತ್ತು ಮುಗಿಸಿದ ಪ್ರಸಂಗ ಜರುಗಿತು.

