ಚಂದ್ರವಳ್ಳಿ ನ್ಯೂಸ್, ತಿರುಮಲ:
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ದೇವರ ದರ್ಶನದ ಬಳಿಕ ಮಾತನಾಡಿದ ಅವರು, "ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ದೇಶದ ಹಾಗೂ ರಾಜ್ಯದ ಸಮಸ್ತ ಜನರ ಕಲ್ಯಾಣಕ್ಕಾಗಿ, ಸುಭಿಕ್ಷೆಗಾಗಿ ಮತ್ತು ಸರ್ವರ ಏಳಿಗೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ," ಎಂದು ತಿಳಿಸಿದರು.
ದೇವಾಲಯದ ಮಂಡಳಿಯ ಅಧಿಕಾರಿಗಳು ಹಾಗೂ ಅರ್ಚಕರು ಡಿ.ಕೆ. ಶಿವಕುಮಾರ್ ಅವರಿಗೆ ತೀರ್ಥ ಪ್ರಸಾದ ನೀಡಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಕುಟುಂಬಸ್ಥರು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.


