ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ, ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯಸ್ಸನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ 'ನುಡಿದಂತೆ ನಡೆದ' ಹೆಮ್ಮೆ ನಮಗಿದೆ. ಸಶಕ್ತ, ಸಮೃದ್ಧ ಹಾಗೂ ಸ್ವಾಭಿಮಾನಿ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ನಾವು ಬಹಳಷ್ಟು ದೂರ ಕ್ರಮಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಈ ಪ್ರಯತ್ನ ಇನ್ನಷ್ಟು ಶೀಘ್ರ ಮತ್ತು ಪರಿಣಾಮಕಾರಿಯಾಗಿರಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ನೀರಾವರಿ ಮತ್ತು ಜನಕಲ್ಯಾಣ ಕ್ಷೇತ್ರಗಳಲ್ಲಿ ಸರ್ಕಾರ ಕೈಗೊಂಡಿರುವ ಪ್ರಮುಖ ಸಾಧನೆಗಳ ವಿವರ ಹೀಗಿದೆ:
ಎತ್ತಿನಹೊಳೆ ಯೋಜನೆ ಮೊದಲ ಹಂತ ಲೋಕಾರ್ಪಣೆ:
ರಾಜ್ಯದ ಬಯಲುಸೀಮೆಯ ಪ್ರಮುಖ ೭ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ 'ಎತ್ತಿನಹೊಳೆ ಯೋಜನೆ'ಯ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯೋಜನೆಯ ಮೊದಲ ಹಂತದ ಲಿಫ್ಟ್‌ಘಟಕ ಕಾಮಗಾರಿಗಳು ಮತ್ತು ವಿದ್ಯುತ್‌ಘಟಕ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲಾಗಿದೆ.
ಮೇಕೆದಾಟು ಯೋಜನೆಗೆ ವಿಶೇಷ ಕಚೇರಿಗಳ ಸ್ಥಾಪನೆ:
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಭಾಗಗಳಿಗೆ ಕುಡಿಯುವ ನೀರು ಕಲ್ಪಿಸುವ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯನ್ನು ತ್ವರಿತಗೊಳಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮತ್ತು ಕಾಮಗಾರಿಗಳಿಗೆ ವೇಗ ನೀಡಲು ವಿಶೇಷ ವಿಭಾಗ ಮತ್ತು ಉಪವಿಭಾಗ ಕಚೇರಿಗಳನ್ನು ರಚಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ: ರೈತರಿಗೆ ೪೪೬.೪೦ ಕೋಟಿ ಭೂ ಪರಿಹಾರ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ರ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದ್ದು, ಯೋಜನೆಯಿಂದ ಮುಳುಗಡೆ ಹೊಂದಲಿರುವ ೮ ಗ್ರಾಮಗಳ ರೈತರಿಗೆ ಸೂಕ್ತ ಸಾಂತ್ವನ ನೀಡಲಾಗಿದೆ. ಸ್ವಯಂಪ್ರೇರಿತರಾಗಿ ಭೂ ಪರಿಹಾರ ಪಡೆಯಲು ಒಪ್ಪಿಗೆ ಸೂಚಿಸಿದ ರೈತರಿಗೆ ಒಟ್ಟು ೪೪೬.೪೦ ಕೋಟಿ ಮೊತ್ತದ ಭೂ ಪರಿಹಾರದ ಚೆಕ್‌ಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
"ರಾಜ್ಯದ ಜನರ ಆಶೀರ್ವಾದದಿಂದ ಮೂರು ವರ್ಷಗಳ ಜನಪರ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ."
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು.


