ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಸಾಧನೆಗಳು ಕೇವಲ ಜಾಹೀರಾತು ಮತ್ತು ಕಾಗದದ ಮೇಲಷ್ಟೇ ಇವೆ ಎಂದು ಟೀಕಿಸಿರುವ ಅವರು, ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ "ಇದಾ ನಿಮ್ಮ ಸಾಧನೆ?" ಎಂದು ಹದಿನಾರು ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.
ನಿರುದ್ಯೋಗ ಮತ್ತು ಯುವಜನರ ಹಾದಿ ತಪ್ಪಿಸುವಿಕೆ-
ಉದ್ಯೋಗ ವಂಚನೆ: ಮೂರು ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವ ಬದಲು 'ನಿರುದ್ಯೋಗ ಭಾಗ್ಯ' ಕಲ್ಪಿಸಲಾಗಿದೆ. ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸದೆ ಅಭಿವೃದ್ಧಿಯನ್ನು ಶೂನ್ಯಗೊಳಿಸಲಾಗಿದೆ.
ಡ್ರಗ್ಸ್ ಮಾಫಿಯಾ: ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲೇ ಡ್ರಗ್ ಫ್ಯಾಕ್ಟರಿ ತೆರೆದುಕೊಂಡಿದೆ. ರಾಜ್ಯದಾದ್ಯಂತ ಡ್ರಗ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದ್ದು, ಉದ್ಯೋಗ ವಂಚಿತ ಯುವಕರು ವ್ಯಸನಿಗಳಾಗುತ್ತಿದ್ದಾರೆ.
ಮಹಿಳಾ ಮತ್ತು ರೈತ ಕಲ್ಯಾಣದ ನಿರ್ಲಕ್ಷ್ಯ-
ಮಹಿಳಾ ಸುರಕ್ಷತೆ ಮತ್ತು ಗೃಹಲಕ್ಷ್ಮಿ: ಮಹಿಳೆಯರಿಗಾಗಿ ಯಾವುದೇ ಹೊಸ ಕಾರ್ಯಕ್ರಮ ನೀಡಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣವೂ ಸಕಾಲದಲ್ಲಿ ತಲುಪುತ್ತಿಲ್ಲ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ.
ರೈತರ ಹತ್ತಿಕ್ಕುವಿಕೆ: ರೈತರ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ರೂಪಿಸದ ಸರ್ಕಾರ, ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ರೈತರನ್ನು ನಿರಂತರವಾಗಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ.
ಹಗರಣಗಳು ಮತ್ತು ದಲಿತ/ಹಿಂದುಳಿದ ವರ್ಗಗಳ ವಂಚನೆ-
ಮುಡಾ ಹಗರಣ: ಸೂರುರಹಿತ ಬಡ ಜನರಿಗೆ ನಿವೇಶನ ಅಥವಾ ಮನೆಗಳನ್ನು ವಿತರಿಸದ ಸರ್ಕಾರ, ಮೈಸೂರು ಮುಡಾದಲ್ಲಿ ಸಾವಿರಾರು ಕೋಟಿ ಮೌಲ್ಯದ ನಿವೇಶನಗಳ ಲೂಟಿಗೆ ಸೂತ್ರಧಾರಿಯಾಗಿದೆ.
ವಾಲ್ಮೀಕಿ ನಿಗಮದ ಹಣ ಲೂಟಿ: ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಬ್ಯಾಂಕ್ ಖಾತೆಯ ಮೂಲಕ ಕನ್ನ ಹಾಕಿ ಲೂಟಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ನಿರ್ಲಕ್ಷ್ಯ: ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.
ಸಾಮಾಜಿಕ ಸಮೀಕ್ಷೆ (ಜಾತಿ ಗಣತಿ) ಮತ್ತು ಮೀಸಲಾತಿ ಗೊಂದಲ-
ಕಾಂತರಾಜು ವರದಿ ಕಸದ ಬುಟ್ಟಿಗೆ: 165 ಕೋಟಿ ರೂ. ವೆಚ್ಚದ ಕಾಂತರಾಜು ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ಹೊಸ ಸಮೀಕ್ಷೆಗೆ 400 ಕೋಟಿ ರೂ. ಮೀಸಲಿಟ್ಟು, ಈವರೆಗೂ ವರದಿ ಬಿಡುಗಡೆ ಮಾಡದೆ ತೆರಿಗೆ ಹಣ ಪೋಲು ಮಾಡಲಾಗಿದೆ.
ಒಳ ಮೀಸಲಾತಿ ಗೊಂದಲ: ಒಳ ಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲ ಮೂಡಿಸಲಾಗಿದೆ. ಬಿಜೆಪಿ ಸರ್ಕಾರ ನೀಡಿದ್ದ ಹೆಚ್ಚುವರಿ ಮೀಸಲಾತಿಯನ್ನು ರಕ್ಷಿಸದೆ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲಾಗಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ದುಸ್ಥಿತಿ-
ಶಿಕ್ಷಣದಲ್ಲಿ ಮತೀಯ ವಿಷ: ಸರ್ಕಾರಿ ಶಾಲೆಗಳ ಸುಧಾರಣೆಗೆ ಮುಂದಾಗದ ಸರ್ಕಾರ, ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್‌ಗೆ ಅವಕಾಶ ಮಾಡಿಕೊಡುವ ಮೂಲಕ ಮತೀಯ ವಿಷ ಬೆರೆಸಲು ಹೊರಟಿದೆ.
ಆರೋಗ್ಯ ಇಲಾಖೆ ವೈಫಲ್ಯ: ಸರ್ಕಾರಿ ಆಸ್ಪತ್ರೆಗಳು ಕೊಳೆತು ನಾರುತ್ತಿವೆ. ಗರ್ಭಿಣಿಯರು ಮತ್ತು ಬಾಣಂತಿಯರ ಸರಣಿ ಸಾವುಗಳು ಸರ್ಕಾರದ ಕರಾಳ ಆಡಳಿತಕ್ಕೆ ಸಾಕ್ಷಿ. ಆಸ್ಪತ್ರೆಗಳು ಯಮನ ಸ್ವರೂಪಿಯಾಗಿವೆ.
ಕಾನೂನು ಸುವ್ಯವಸ್ಥೆ ಮತ್ತು ಭ್ರಷ್ಟಾಚಾರ-
ಕುಡುಕರ ರಾಜ್ಯ: ಗಾಂಧಿ, ಬಸವಣ್ಣನವರ ಚಿಂತನೆಗಳನ್ನು ಮೂಲೆಗುಂಪು ಮಾಡಿ, ಪ್ರತಿ 500 ಮೀಟರ್‌ಗೊಂದು ಮದ್ಯದಂಗಡಿ ತೆರೆದು ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಪರಿವರ್ತಿಸಲಾಗಿದೆ.
ಪರ್ಸೆಂಟೇಜ್ ಮತ್ತು ಕಮಿಷನ್ ದಂಧೆ: ಬಾಕಿ ಹಣ ಪಾವತಿಸದೆ ಗುತ್ತಿಗೆದಾರರ ಕತ್ತು ಹಿಸುಕಲಾಗುತ್ತಿದೆ. ಕಮಿಷನ್ ಮುಷ್ಟಿ ಬಳಸಿ ಶೇ.40 ರಷ್ಟು ಲೂಟಿ ಮಾಡಲಾಗುತ್ತಿದ್ದು, ಇದು 'ಪರ್ಸೆಂಟೇಜ್ ಸರ್ಕಾರ'ವಾಗಿದೆ.
"ತಳಮಟ್ಟದಿಂದ ಉನ್ನತ ಮಟ್ಟದವರೆಗೆ ಭ್ರಷ್ಟಾಚಾರ, ಲೂಟಿ, ಕಮಿಷನ್ ದಂಧೆ ಮತ್ತು ಬೆಲೆಯೇರಿಕೆ ತಾಂಡವವಾಡುತ್ತಿದೆ. ಪ್ರಸ್ತುತ ಸರ್ಕಾರ ಆಯೋಜಿಸುತ್ತಿರುವ ಸಮಾವೇಶವು 'ಸಾಧನಾ ಸಮಾವೇಶ'ವಲ್ಲ, ಬದಲಿಗೆ ಅದು ಸರ್ಕಾರದ ಭಂಡತನದ ಪರಾಕಾಷ್ಠೆಯ ಪ್ರದರ್ಶನ" ಎಂದು ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.


