ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 19ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಚಿಕ್ಕಮಗಳೂರಿಗೆ ‘ಆರೆಂಜ್ ಅಲರ್ಟ್’ ಮುನ್ನೆಚ್ಚರಿಕೆಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಗೆ ಇಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸುರಕ್ಷಿತ ಸ್ಥಳಗಳಲ್ಲೇ ಇರುವಂತೆ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆಯ ಅಬ್ಬರ?ಧಾರಾಕಾರ ಮಳೆ (ದಕ್ಷಿಣ ಒಳನಾಡು): ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಸಾಧಾರಣ ಮಳೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಉತ್ತರ ಕರ್ನಾಟಕ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯ ನಿರೀಕ್ಷೆಯಿದೆ.ಕರಾವಳಿ ಭಾಗ: ದಕ್ಷಿಣ ಕನ್ನಡ, ಉಡುಪಿ ಮತ್ತು ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಬಹುದು.
ಸಿಡಿಲಿಗೆ ಇಬ್ಬರು ಬಲಿ, ಅಪಾರ ಹಾನಿಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೈಸೂರು, ಹಾವೇರಿ, ಕೊಪ್ಪಳ, ಬಳ್ಳಾರಿ ಭಾಗದಲ್ಲಿ ವರುಣನ ಅಬ್ಬರಕ್ಕೆ ಭಾರಿ ನಷ್ಟ ಸಂಭವಿಸಿದೆ.
ದುರಂತ: ಮೈಸೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ಎರಡು ಹಸುಗಳು ಸಾವನ್ನಪ್ಪಿದ್ದರೆ, ಶನಿವಾರ ಬಳ್ಳಾರಿ ಜಿಲ್ಲೆಯಲ್ಲೂ ಸಿಡಿಲಿನ ಆಘಾತಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ.
ಬಿರುಗಾಳಿಯ ಆರ್ಭಟಕ್ಕೆ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಅನೇಕ ಮನೆಗಳು ಜಖಂಗೊಂಡಿದ್ದು, ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದು ರೈತರನ್ನು ಕಂಗಾಲಾಗಿಸಿದೆ.
ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.


