ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜರುಗಿದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು, ಮಾಜಿ ಸಚಿವರಾದ ಸಾ.ರಾ. ಮಹೇಶ್, ಶಾಸಕರಾದ ಜಿ.ಡಿ. ಹರೀಶ್ ಗೌಡ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಜನತಾದಳ ಪಕ್ಷ 25 ವರ್ಷಗಳಿಂದ ರಾಜ್ಯದಲ್ಲಿ ಗಟ್ಟಿಯಾಗಿ ನಿಂತು, ರಾಜ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಪಕ್ಷ ನಡೆದು ಬಂದ ಹಾದಿಯ ಕುರಿತು ಜನತೆಗೆ ಕುಮಾರಸ್ವಾಮಿ ತಿಳಿಸಿದರು.
"ಜನರೇ ನನ್ನ ನಿಜವಾದ ಆಸ್ತಿ" ಎಂಬ ಭಾವನೆಯಿಂದ ಬದುಕುತ್ತಿರುವ ಕುಮಾರಸ್ವಾಮಿ ಅವರು, ಪ್ರಾದೇಶಿಕ ಅಸ್ಮಿತೆ ಹಾಗೂ ಸಮಾನತೆಯ ಆಧಾರದ ಮೇಲೆ ನಮ್ಮ ಪಕ್ಷ ಆಡಳಿತ ನಡೆಸುತ್ತಾ ಬಂದಿದೆ. ಸಾಮಾಜಿಕ ಬದ್ಧತೆ, ಸಾಮಾಜಿಕ ನ್ಯಾಯಕ್ಕಾಗಿ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿ, 2028ರಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ತರಲು ತಾವೆಲ್ಲರೂ ಒಗ್ಗೂಡಿ ಪಕ್ಷ ಸಂಘಟನೆಗೆ ಶ್ರಮಿಸೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕರಾದ ಕೆ. ಮಹದೇವ್, ಮೈಸೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶ್ವಿನ್ ಕುಮಾರ್, ಮೈಸೂರು ನಗರ ಜಿಲ್ಲಾಧ್ಯಕ್ಷ ಎಸ್.ಬಿ.ಎಂ. ಮಂಜು, ಮುಖಂಡರಾದ ಅಭಿಷೇಕ್, ಕೃಷ್ಣನಾಯಕ್, ಕಡೂರು ಚೇತನ್, ನಗರ ಅಧ್ಯಕ್ಷರಾದ ಮಂಜಣ್ಣ, ಯುವ ಘಟಕದ ಅಧ್ಯಕ್ಷ ಮದನ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಸ್ಥಳೀಯ ಮುಖಂಡರಾದ ಲಿಂಗಪ್ಪ, ಸ್ವಾಮಣ್ಣ, ಶಿವಮೂರ್ತಿ, ಗಂಗಾಧರ ಗೌಡ, ಸಿದ್ದರಾಜು, ಪ್ರೇಮಾ ಸೇರಿದಂತೆ ಪಾಲಿಕೆ ಸದಸ್ಯರು, ಗುರುಹಿರಿಯರು, ತಾಯಂದಿರು, ಅಣ್ಣತಮ್ಮಂದಿರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.


