Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನನ್ನ ಎಫ್ಐಆರ್ (ಪ್ರಥಮ ತನಿಖಾ ವರದಿ)

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನ ಎಫ್ಐಆರ್ (ಪ್ರಥಮ ತನಿಖಾ ವರದಿ)
ಆರ್ಸಿಬಿಯ ಐ ಪಿ ಎಲ್ ಗೆಲುವಿನ ಸಂಭ್ರಮದ ಸಾವುಗಳ ಘಟನೆಯಲ್ಲಿ ......


ಮೊದಲಿಗೆ ಐಪಿಎಲ್ ಎಂಬುದು ಕ್ರೀಡೆಯೇ ಅಲ್ಲ. ಅದು ಕ್ರಿಕೆಟ್ ಎಂಬ ಕ್ರೀಡೆಯ ರೂಪಾಂತರಗೊಂಡ ಜೂಜಾಟದ ಒಂದು ಪ್ರಕಾರ. ಕೆಲವು ಶ್ರೀಮಂತ ಸಂಸ್ಥೆಗಳು ಬಿಸಿಸಿಐ ಅಡಿಯಲ್ಲಿ ನೊಂದಾಯಿಸಿಕೊಂಡು ಅದರ ನಿಯಮದ ಪ್ರಕಾರ ಫ್ರಾಂಚೈಸಿ ಅಥವಾ ಕ್ಲಬ್ ರೂಪದ ಆಕಾರ ಪಡೆದು, ವಿಶ್ವದ ಪ್ರಖ್ಯಾತ ಕ್ರಿಕೆಟ ಆಟಗಾರರನ್ನು ವಸ್ತುವಿನ ರೀತಿಯಲ್ಲಿ ಹರಾಜಿನಲ್ಲಿ ಬೆಲೆ ನೀಡಿ ತಂಡ ಕಟ್ಟಿ, ಆ ಮುಖಾಂತರ ಕೇವಲ 120/120 ಎಸೆತಗಳ ಆಟವನ್ನು ಆಡಿಸಿ, ಜನರನ್ನು ಹುಚ್ಚೆಬ್ಬಿಸಿ ದುಡ್ಡು ಮಾಡುವ ವ್ಯಾಪಾರ, ಮನರಂಜನೆ, ವಿಕೃತತೆಯ ಒಂದು ರೂಪ. ಇದರಿಂದ ಐಪಿಎಲ್ ಎಂಬ ಜೂಜಾಟ ಮಾತ್ರವಲ್ಲ, ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್, ಪೆಪ್ಸಿ, ಕೋಕ್, ಅನೇಕ ಕ್ಲಬ್, ಬಾರ್, ರೆಸಾರ್ಟ್, ರೆಸ್ಟೋರೆಂಟ್, ಕ್ಯಾಸಿನೊ ಮುಂತಾದ ಮನರಂಜನಾ ಉದ್ಯಮಗಳ ಆರ್ಥಿಕ ಲಾಭ ಹಾಗೂ ಇಂದಿನ ಯುವ ಜನಾಂಗದ ಸೀಡ್ಲೆಸ್ ಮನಸ್ಥಿತಿಯ ಸಂಪೂರ್ಣ ಉಪಯೋಗ ಪಡೆಯುವ ಒಂದು ವಿಸ್ತೃತ ರೂಪ. ಇಂತಹ ಜೂಜಾಟ ವನ್ನು ಇಡೀ ರಾಷ್ಟ್ರಕ್ಕೆ ಹುಚ್ಚಿನಂತೆ ಹಬ್ಬಿಸಿ ಅದೊಂದು ಮಹಾನ್ ಸಾಧನೆಯಂತೆ ಬಿಂಬಿಸಿ ಜನರನ್ನು ಮರಳು ಮಾಡಿ ಇದೀಗ ಇದರಲ್ಲಿ ಗೆದ್ದ ಆರ್ಸಿಬಿ ಆಟಗಾರರನ್ನು ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮುಂದೆ ಸನ್ಮಾನಿಸುವ ಸರ್ಕಾರದ ನಿರ್ಧಾರವೇ ತುಂಬಾ ಕೀಳು ಮಟ್ಟದ್ದು.

ಏಕೆಂದರೆ ಇದರಲ್ಲಿ ಭಾಗವಹಿಸಿದ ಆಟಗಾರರು ಬಹುತೇಕ ಜೂಜುಕೋರರು, ಜೂಜನ್ನು ಪ್ರೇರೇಪಿಸುವವರು ಪೆಪ್ಸಿ ಕೋಲಾಗಳ ಜಾಹೀರಾತು ಮಾಡೆಲ್ ಗಳು ಇತ್ಯಾದಿಗಳು. ಇವರು ಒಂದು ದಿನಕ್ಕೂ ಈ ವ್ಯವಸ್ಥೆಯ ಎಳನೀರು, ಕಬ್ಬಿನ ಹಾಲು, ರಾಗಿ ಗಂಜಿ, ಸಿರಿಧಾನ್ಯಗಳ ಜ್ಯೂಸ್ ಅಥವಾ ಇನ್ಯಾವುದೇ ಆರೋಗ್ಯಕರ ಪೇಯಗಳ ಬಗ್ಗೆ ಜಾಹೀರಾತು ನೀಡಿಲ್ಲ. ಯಾವುದೇ ಸಾಮಾಜಿಕ ಜವಾಬ್ದಾರಿ ಮೆರೆದಿಲ್ಲ. ಕೇವಲ ಹೊಡಿಬಡಿ ಆಟ ಮತ್ತು ಹಣದ ಹಿಂದೆ ಹೋದವರನ್ನು ಯಾವ ಆಧಾರದ ಮೇಲೆ ಸನ್ಮಾನಿಸಬೇಕು. ಇರಲಿ ಇದೀಗ ಜನರ ಈ ಹುಚ್ಚು 11 ಜನರ ಸಾವಿಗೆ, 25 ಕ್ಕೂ ಹೆಚ್ಚು ಜನರ ಗಾಯಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಒಂದು ವೇಳೆ ನಾನು ತನಿಖಾಧಿಕಾರಿಯಾಗಿದ್ದರೆ ದಾಖಲಿಸುತ್ತಿದ್ದ ಎಫ್ಐಆರ್ ಹೀಗಿದೆ.

1) A 1 ಆರೋಪಿ-1
ಮೊದಲನೇ ಆರೋಪಿ  ಕರ್ನಾಟಕದ ಎಲ್ಲಾ ಟೆಲಿವಿಷನ್ ಸುದ್ದಿ ಮಾಧ್ಯಮಗಳು. ಏಕೆಂದರೆ ಈ ಆರ್‌ಸಿಬಿ ಎಂಬ ತಂಡವನ್ನು ನಿಜವಾಗಲೂ ಪ್ರಮೋಟ್ ಮಾಡಿದ್ದೇ ಈ ಮಾಧ್ಯಮಗಳು.
18 ವರ್ಷಗಳ ನಂತರ ಪ್ರಶಸ್ತಿ ಎಂಬಂತೆ ದೇಶವನ್ನು ಗೆದ್ದವರೋ, ಸಮಾಜವನ್ನು ಕಟ್ಟಿದವರೋ, ಕ್ರಿಯಾತ್ಮಕವಾಗಿ ಸಾಧನೆ ಮಾಡಿದವರೋ ಎಂಬಂತೆ ಈ ಹರಾಜಿನ ಮಾರಾಟಗಾರರ ಬಗ್ಗೆ ಭಾವನಾತ್ಮಕವಾಗಿ ಹುಚ್ಚೆಬ್ಬಿಸಿದವರು ಇದೇ ಮಾಧ್ಯಮಗಳು. 3:00 ಗಂಟೆಯ ಆಟವನ್ನು 30 ಗಂಟೆ ಚರ್ಚಿಸಿ ವಿಕೃತಿ ಮೆರೆದವರು. ಜ್ಯೋತಿಷಿಗಳನ್ನು, ಸಂಖ್ಯಾಶಾಸ್ತ್ರದವರನ್ನು, ಕ್ರೀಡೆಯ ಗಂಧ ಗಾಳಿ ಇಲ್ಲದ ಮಾಡೆಲ್, ಸಿನಿಮಾ, ಧಾರವಾಹಿ ನಟ ನಟಿಯರನ್ನು ಚರ್ಚೆಗಳಲ್ಲಿ ಭಾಗವಹಿಸುವಂತೆ ಮಾಡಿ ಕಿಚ್ಚೆಬ್ಬಿಸಿದವರು. ಅದಕ್ಕೆ ಅತಿಯಾದ ಪ್ರಚಾರ ನೀಡಿ ಮ್ಯಾಚ್ ಗೆದ್ದ ರಾತ್ರಿ ಅತ್ಯಂತ ಕೆಟ್ಟ ರೀತಿಯ ಕಪಿ ಚೇಷ್ಟೆಯ ಚರ್ಚೆಗಳನ್ನು ಪ್ರೋತ್ಸಾಹಿಸಿ ಮ್ಯಾಚ್ ನಡೆದ ಮರುದಿನವೇ ಈ ರೀತಿಯ ಹುಚ್ಚಾಟಕ್ಕೆ ಪ್ರೋತ್ಸಾಹ ನೀಡಿ ಲಕ್ಷಾಂತರ ಜನ ಸಮೂಹ ಅನಾವಶ್ಯಕವಾಗಿ ಒಂದು ಕಡೆ ಸೇರಿ ಈ ದುರಂತಕ್ಕೆ ಕಾರಣವಾಗಿದ್ದರಿಂದ ಅವರು ಮೊದಲ ಆರೋಪಿಗಳು.

2) A 2 ಆರೋಪಿ-2
ಎರಡನೇ ಆರೋಪಿಗಳು ಆರ್ ಸಿ ಬಿ ಕ್ಲಬ್ ನ ಫ್ರಾಂಚೈಸಿ, ಆರ್ಸಿಬಿ ಫ್ಯಾನ್ಸ್ ಕ್ಲಬ್ ಮತ್ತು ಕೆ ಎಸ್ ಸಿ ಎ. ಏಕೆಂದರೆ 35000 ಸೀಟುಗಳ ಕ್ರೀಡಾಂಗಣಕ್ಕೆ ಲಕ್ಷಾಂತರ ಜನರ ಹುಚ್ಚುಹೊಳೆ ಹರಿಯುವಂತೆ ಮಾಡಿದ್ದಲ್ಲದೆ, ಹಿಂದಿನ ಅನೇಕ ಅನುಭವಗಳ ಹೊರತಾಗಿಯೂ ಯಾವುದೇ ಸಿದ್ಧತೆ ಮಾಡಿಕೊಳ್ಳದೆ, ಫೈನಲ್ ಮುಗಿದ ಮಾರನೇ ದಿನವೇ ಆಟಗಾರರನ್ನು ವಿಶೇಷ ವಿಮಾನದಲ್ಲಿ ಕರೆತಂದು ಇಲ್ಲಿ ಕಾರ್ಯಕ್ರಮ ಮಾಡುವ ಅವಶ್ಯಕತೆಯೇ ಇರಲಿಲ್ಲ. ನಿಧಾನವಾಗಿ ಯೋಚಿಸಿ, ಅಗತ್ಯ ಇರುವವರಿಗೆ ಪಾಸ್ ನೀಡಿ, ಪೊಲೀಸರ ಅನುಮತಿ ಪಡೆದು ಮಾಡಿದ್ದರೆ ಅಪಘಾತವನ್ನು ತಡೆಯಬಹುದಿತ್ತು. ತಮ್ಮ ಶೋಕಿಗಾಗಿ ಜನರನ್ನು ಬಲಿಕೊಟ್ಟರು ಇವರು.

3) A 3 ಆರೋಪಿ-3
ಮೂರನೇ ಆರೋಪಿಗಳು  ಕರ್ನಾಟಕ ಸರ್ಕಾರ. ಮುಖ್ಯವಾಗಿ ಕರ್ನಾಟಕದ ಸರ್ಕಾರ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್. ಈ ರೀತಿ ಜೂಜಾಟದಲ್ಲಿ ಗೆದ್ದ ವ್ಯಕ್ತಿಗಳನ್ನು ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮುಂದೆ ಸನ್ಮಾನಿಸುವ ಅನೈತಿಕತೆಯನ್ನು ಇವರು ಪ್ರದರ್ಶಿಸಬಾರದಿತ್ತು. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕ್ರಿಕೆಟ್ ಬಗ್ಗೆ ರಾಮ್ ಮನೋಹರ್ ಲೋಹಿಯಾ ಅವರ ಮಾತುಗಳು ನೆನಪಾಗಬೇಕಿತ್ತು. ವಿಧಾನಸೌಧದ ಮುಂಬಾಗ ಸನ್ಮಾನಿಸುವ ಅವಶ್ಯಕತೆಯಾದರೂ ಏನು. ಬಹುಶಃ ಈ ರೀತಿಯ ಕೆಟ್ಟ ಸಂಪ್ರದಾಯವನ್ನು ಕೇಂದ್ರದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆ ಪಡೆದಿರಬಹುದು. ಈ ರೀತಿ ಕ್ರೀಡಾಪಟುಗಳನ್ನು
, ದೊಡ್ಡ ಹೆಸರು ಗಳಿಸಿದವರನ್ನು ತಾವು ಸನ್ಮಾನಿಸಿ ಆ ಮೂಲಕ ಪ್ರಚಾರ ಪಡೆಯುವ ಕೀಳು ಅಭಿರುಚಿ ಸರ್ಕಾರಗಳಿಗೆ ಒಳ್ಳೆಯ ಲಕ್ಷಣವಲ್ಲ. ಭದ್ರತಾ ವೈಫಲ್ಯದ ಹೊಣೆ ಅವರು ಸಹ‌ ಹೊರಬೇಕಾಗುತ್ತದೆ.

4) A 4 ಆರೋಪಿ-4
ನಾಲ್ಕನೆಯ ಆರೋಪಿ ಬೆಂಗಳೂರು ಪೊಲೀಸ್ ಕಮಿಷನರ್
, ಬೇಹುಗಾರಿಕೆ ಮತ್ತು ಇಂಟಲಿಜೆನ್ಸ್ ವಿಭಾಗಗಳ ಮುಖ್ಯಸ್ಥರು. ಏಕೆಂದರೆ ಕೆಎಸ್ಸಿಎ ಅಥವಾ ಸರ್ಕಾರ ಅಥವಾ ಕ್ರಿಕೆಟ್ ಅಭಿಮಾನಿಗಳ ಎಷ್ಟೇ ಒತ್ತಡವಿದ್ದರೂ ಇಂತಹ  ಭಾವನಾತ್ಮಕ ವಿಷಯದಲ್ಲಿ, ಬಹುದೊಡ್ಡ ಸಂಖ್ಯೆಯ ಜನ ಸೇರುವ ಸಂದರ್ಭದಲ್ಲಿ ಇಷ್ಟು ಬೇಗ ಕಾರ್ಯಕ್ರಮ ಆಯೋಜಿಸುವ ಸಲಹೆಯನ್ನು ತಿರಸ್ಕರಿಸಬೇಕಾಗಿತ್ತು, ಅನುಮತಿ ನೀಡಬಾರದಿತ್ತು ಅಥವಾ ಲಾಠಿ ಚಾರ್ಜ್ ಮಾಡಿ ಚದುರಿಸಬೇಕಿತ್ತು. ಆ ವಿಷಯದಲ್ಲಿ ಅವರು ವಿಫಲವಾಗಿರುವುದನ್ನು ಕಾಣಬಹುದು. ಜನರಿಗೆ ತಮ್ಮ ರಕ್ಷಣೆಯ ಹೊಣೆ ಪೊಲೀಸರು ಎಂಬ ಭಾವನೆ ಇರುವುದರಿಂದ ಅವರ ಮೇಲೆ ಅವಲಂಬಿತರಾಗಿರುತ್ತಾರೆ. ಜನರ ಹುಚ್ಚುತನಕ್ಕೆ ಪೊಲೀಸರೇ ಮದ್ದು. ಇತರ ಯಾರಿಂದಲೂ ನಿಯಂತ್ರಿಸಲು. ಸಾಧ್ಯವಿಲ್ಲ.

5) A 5 ಆರೋಪಿ-5
ಐದನೆಯ ಆರೋಪಿಗಳು ನಮ್ಮಂತ ಅಸಹಾಯಕ ಕ್ಷೀಣ ಧ್ವನಿಯ ಸಾಮಾಜಿಕ ಹೋರಾಟಗಾರರು. ಏಕೆಂದರೆ ಈ ಸಮಾಜದ ಮನಸ್ಥಿತಿಯನ್ನು ಪ್ರಬುದ್ಧತೆಗೆ ತೆಗೆದುಕೊಂಡು ಹೋಗಲು ನಾವುಗಳು ವಿಫಲರಾಗಿದ್ದೇವೆ. ಕ್ರಿಕೆಟ್ ಎಂಬ ಅದ್ಭುತ ಆಟವನ್ನು ಜೂಜಾಟವಾಗಿ ಮಾರ್ಪಡಿಸಿದಾಗಲು ಅದರ ವಿರುದ್ಧ ಜನರನ್ನು ಜಾಗೃತಿ ಮೂಡಿಸುವಲ್ಲಿ ಸೋತಿದ್ದೇವೆ. ಈ ರೀತಿಯ ಹುಚ್ಚಾಟಗಳನ್ನು ಯುವ ಜನಾಂಗ ಮೆರೆಯುವುದನ್ನು ತಡೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾವು ಕೂಡ ಅಸಹಾಯಕರು. ಆದ್ದರಿಂದ ನಾವು ಸಹ ಐದನೇ ಆರೋಪಿಗಳು.


ನಾನು ಆಗಾಗ ಹೇಳುವಂತೆ ಇದು ಸೀಡ್ಲೆಸ್ ಯುವ ಜನಾಂಗ. ಯೋಚನಾ ಶಕ್ತಿಗೆ ಬದಲು ಗುಲಾಮಿ ಮನಸ್ಥಿತಿ ಬೆಳೆದಿದೆ. 18 ವರ್ಷ ಕಾದಿದ್ದೇವೆ ಎಂಬ ಹುಚ್ಚನ್ನು, ಕಿಚ್ಚನ್ನು ಎಬ್ಬಿಸಿದ್ದು ಈ ಮಾಧ್ಯಮಗಳು. ಆದರೆ ವಾಸ್ತವವೇನು ಗೊತ್ತೆ...

ಫುಟ್ಬಾಲ್ ಆಟದಲ್ಲಿ ಭಾರತ ವಿಶ್ವಕಪ್ ಸ್ಪರ್ಧೆಯ ಅಂತಿಮ ಹಂತಕ್ಕೆ ತಲುಪುವುದನ್ನು ನೋಡಲು ನಾವು ಸಹ 70 ವರ್ಷಗಳಿಂದ ಕಾಯುತ್ತಿದ್ದೇವೆ...

ಹಾಕಿಯಲ್ಲಿ ಮತ್ತೆ ಭಾರತ ಒಲಂಪಿಕ್ ಸ್ವರ್ಣ ಪದಕ ಗೆಲ್ಲಲು 40 ವರ್ಷಗಳಿಂದ ಕಾಯುತ್ತಿದ್ದೇವೆ. ಒಲಂಪಿಕ್ 100/200 ಮೀಟರ್ ಓಟದಲ್ಲಿ ಚಿನ್ನ ಗೆಲ್ಲಲು ನೂರು ವರ್ಷದಿಂದ ಕಾಯುತ್ತಿದ್ದೇವೆ. ಭಾರತದ ಚಿತ್ರವೊಂದು ಆಸ್ಕರ್ ಪ್ರಶಸ್ತಿ ಗೆಲ್ಲಲು 50 ವರ್ಷಗಳಿಂದ ಕಾಯುತ್ತಿದ್ದೇವೆ.

ಸಾಹಿತ್ಯದಲ್ಲಿ ಮತ್ತೆ ನೊಬೆಲ್ ಪ್ರಶಸ್ತಿ ಗಳಿಸಲು 60 ವರ್ಷದಿಂದ ಕಾಯುತ್ತಿದ್ದೇವೆ.. ಅಷ್ಟೇ ಏಕೆ ಈ ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಲು ಸಾವಿರಾರು ವರ್ಷಗಳಿಂದ ಕಾಯುತ್ತಿದ್ದೇವೆ.

ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಿ ಸಾಮಾನ್ಯರಿಗೆ ನ್ಯಾಯ ದೊರೆಯಲು 75 ವರ್ಷಗಳಿಂದ ಕಾಯುತ್ತಿದ್ದೇವೆ. ಈ ದೇಶದಲ್ಲಿ ಮಹಿಳಾ ಸಮಾನತೆ ಸ್ವಾತಂತ್ರ್ಯಕ್ಕಾಗಿ ಅನೇಕ ಶತಮಾನಗಳಿಂದ ಕಾಯುತ್ತಿದ್ದೇವೆ. ಅಂತಹುದರಲ್ಲಿ ಐಪಿಎಲ್ ಟ್ರೋಪಿ ಗೆಲ್ಲಲು 18 ವರ್ಷ ಎಂಬುದು ಎಷ್ಟೊಂದು ಕ್ಷುಲ್ಲಕ ಯೋಚಿಸಿ ನೋಡಿ.

ದಯವಿಟ್ಟು ಕನಿಷ್ಠ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದು ಮಾಡಬೇಕು, ಯಾವುದು ಮಾಡಬಾರದು, ಯಾವುದು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಎಂಬುದನ್ನಾದರೂ ಆಲೋಚಿಸುವ ಪ್ರಬುದ್ಧತೆ ನಮ್ಮ ಜನರಿಗೆ ಬರಲಿ ಎಂದು ಆಶಿಸುತ್ತಾ....... ಸತ್ತ ಆ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ.......
ಲೇಖನ-ವಿವೇಕಾನಂದ. ಎಚ್. ಕೆ.
9844013068........

 



Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ