ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ರಾಜಕಾರಣದ ಇತಿಹಾಸದಲ್ಲಿ 'ಡಿ.ಸುಧಾಕರ್' ಎಂಬ ಹೆಸರು ಕೇವಲ ಒಬ್ಬ ನಾಯಕನದ್ದಲ್ಲ; ಅದೊಂದು ಜನರ ಹೃದಯ ಬಡಿತ. ಇತ್ತೀಚೆಗಷ್ಟೇ ವಿಧಿವಶರಾದ ಮಾಜಿ ಸಚಿವ ಡಿ.ಸುಧಾಕರ್ ಅವರ ಅಗಲಿಕೆ ಹಿರಿಯೂರು ಜನತೆಗೆ ತುಂಬಲಾರದ ನಷ್ಟ. ಕಚೇರಿಯ ಆ ಖಾಲಿ ಕುರ್ಚಿ, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ಆ ಧ್ವನಿ ಇಂದು ಇಲ್ಲದೇ ಇರಬಹುದು, ಆದರೆ ಅವರ ನೆನಪುಗಳು ಮಾತ್ರ ಜನರ ಮನಸ್ಸಿನಲ್ಲಿ ಹಸಿರಾಗಿಯೇ ಇವೆ. ಈ ಅಕಾಲಿಕ ಸಾವಿನ ನಡುವೆ, ಅದೇ ಕಚೇರಿಗೆ ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಹಾಗೂ ಅಳಿಯ ನಿತೀಶ್ ಅವರು ಭೇಟಿ ನೀಡಿದಾಗ, ಅಲ್ಲಿ ನೆರೆದಿದ್ದ ಕಾರ್ಯಕರ್ತರಲ್ಲಿ ದುಃಖದ ನಡುವೆಯೂ ಒಂದು ಹೊಸ ಆಶಾಕಿರಣ ಮೂಡಿತು.
ಜಾತಿ ಬಲವಿಲ್ಲದಿದ್ದರೂ ಪ್ರೀತಿ ನೀಡಿದ ಜನತೆ: ಸುಹಾಸ್ ಕೃತಜ್ಞತೆ
ತಂದೆಯ ಅಕಾಲಿಕ ಅಗಲಿಕೆಯ ನೋವಿನಲ್ಲೂ ಕಾರ್ಯಕರ್ತರನ್ನು ಕಂಡು ಭಾವುಕರಾದ ಸುಹಾಸ್ ಸುಧಾಕರ್ ನುಡಿದ ಮಾತುಗಳು ಹಿರಿಯೂರಿನ ಪ್ರತಿಯೊಬ್ಬ ಮತದಾರನ ಮನ ಮುಟ್ಟುವಂತಿದ್ದವು.
"ನಮ್ಮ ಬೆನ್ನಿಗೆ ನಿಲ್ಲಲು ಯಾವುದೇ ದೊಡ್ಡ ಜಾತಿ ಬಲವಿಲ್ಲದಿದ್ದರೂ, ಹಿರಿಯೂರಿನ ಜನತೆ ಕೇವಲ ಪ್ರೀತಿ ಮತ್ತು ವಿಶ್ವಾಸದ ಮೇಲೆ ನಮ್ಮ ತಂದೆಯನ್ನು ಮೂರು ಬಾರಿ ಶಾಸಕರನ್ನಾಗಿ ಮಾಡಿ, ಎರಡು ಬಾರಿ ಸಚಿವರನ್ನಾಗಿ ನೋಡಿದ್ದಾರೆ. ಈ ಋಣವನ್ನು ನಾನು ಹೇಗೆ ತೀರಿಸಲಿ?" ಎನ್ನುತ್ತಾ ಸುಹಾಸ್ ಭಾವುಕರಾದಾಗ ನೆರೆದಿದ್ದ ಕಾರ್ಯಕರ್ತರ ಕಣ್ಣುಗಳು ತೇವಗೊಂಡವು. ಅಧಿಕಾರದ ಹಪಾಹಪಿಯ ನಡುವೆ ಕೃತಜ್ಞತಾ ಭಾವದ ಈ ಮಾತುಗಳು ಸುಧಾಕರ್ ಅವರ ಸಂಸ್ಕಾರವನ್ನು ನೆನಪಿಸಿದವು.
ನೋವಿನಲ್ಲೂ ರೈತರಿಗಾಗಿ ಮಿಡಿದ ಹೃದಯ-
ಮನೆಯಲ್ಲಿ ತಂದೆಯ ಅಗಲಿಕೆಯ ಸೂತಕದ ಛಾಯೆ ಇನ್ನೂ ಸರಿದಿಲ್ಲ. ಇಂತಹ ವೈಯಕ್ತಿಕ ನೋವಿನ ನಡುವೆಯೂ ಸುಹಾಸ್ ಅವರಿಗೆ ಹಿರಿಯೂರಿನ ಅನ್ನದಾತನ ಸಂಕಟ ಕಣ್ಣಿಗೆ ಕಟ್ಟುತ್ತಿತ್ತು.
"ಇಂದು ಮಳೆಯಿಲ್ಲದೆ ರೈತರು ಬೆಳೆದ ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ಮಳೆರಾಯ ಶೀಘ್ರವೇ ಬಂದು ರೈತರ ಕೈಗೆ ಬೆಳೆ ಸಿಗುವಂತಾಗಲಿ," ಎಂದು ಪ್ರಾರ್ಥಿಸಿದಾಗ, ಅವರಲ್ಲಿ ತಂದೆಯಂತೆಯೇ ರೈತರ ಮೇಲಿರುವ ಅಪಾರ ಕಾಳಜಿ ಎದ್ದು ಕಾಣುತ್ತಿತ್ತು.

"ತಂದೆಯ ಉತ್ತರ ಕ್ರಿಯಾದಿ ಕಾರ್ಯಗಳು ಮುಗಿದ ತಕ್ಷಣವೇ ನಾನು ಜನರ ಬಳಿ ಬರುತ್ತೇನೆ," ಎಂಬ ಮಾತು ಹಿರಿಯೂರಿನ ಜನರೊಂದಿಗೆ ಅವರಿಗಿರುವ ಅವಿನಾಭಾವ ಸಂಬಂಧಕ್ಕೆ ಹಿಡಿದ ಕೈಗನ್ನಡಿ.
ಭರವಸೆಯ ಬೆಳಕಾಗಿ ನಿಂತ ಶಾಸಕ ವೀರೇಂದ್ರ ಪಪ್ಪಿ-
ಸುಹಾಸ್ ಸುಧಾಕರ್ ಅವರ ಜೊತೆಗೆ ಚಿತ್ರದುರ್ಗದ ಶಾಸಕರಾದ ವೀರೇಂದ್ರ ಪಪ್ಪಿ ಅವರು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದು ಇಂದಿನ ಸುಹಾಸ್ ಭೇಟಿಗೆ ಹೊಸ ಚೈತನ್ಯ ನೀಡಿತು. ಸುಧಾಕರ್ ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬ ಮತ್ತು ಕಾರ್ಯಕರ್ತರ ಜೊತೆ ತಾವಿದ್ದೇವೆ ಎಂಬ ಭರವಸೆ ನೀಡಿದ ಶಾಸಕರ ನಡೆ, ಕಾರ್ಯಕರ್ತರ ಮುಖದಲ್ಲಿ ಮಂದಹಾಸ ಮೂಡಿಸಿತು. ರಾಜಕೀಯ ಎಲ್ಲೆಗಳನ್ನು ಮೀರಿ ನಿಂತ ಈ ಆತ್ಮೀಯತೆ ಹಿರಿಯೂರಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗುವ ಮುನ್ಸೂಚನೆ ನೀಡಿತು.
ನಾಯಕರುಗಳ ಒಗ್ಗಟ್ಟು: ಸುಧಾಕರ್ ಆಶಯಕ್ಕೆ ಜೀವ
ಈ ಭಾವುಕ ಸನ್ನಿವೇಶಕ್ಕೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈ. ಲಿಂಗೇಗೌಡ, ಮಾಜಿ ನಗರಸಭೆ ಅಧ್ಯಕ್ಷ ಈ. ಮಂಜುನಾಥ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಗೀತಾ ನಂದಿನಿ ಗೌಡ ಹಾಗೂ ಮುಖಂಡರುಗಳಾದ ವಿ. ಅರುಣ್ ಕುಮಾರ್, ಜ್ಞಾನೇಶ್, ವಕೀಲರಾದ ಮಹಾಂತೇಶ್, ಮಸ್ಕಲ್ ನಾಗರಾಜ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಖಾದಿ ರಮೇಶ್, ತಿಮ್ಮರಾಯಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಸಾಕ್ಷಿಯಾದರು. ಎಲ್ಲರಲ್ಲೂ ಇದ್ದದ್ದು ಒಂದೇ ಸಂಕಲ್ಪ ಸುಧಾಕರ್ ಅವರು ಹಿರಿಯೂರಿಗೆ ನೀಡಿದ ಅಭಿವೃದ್ಧಿಯ ಕನಸನ್ನು ನನಸು ಮಾಡುವುದು.
"ನಾನು ನಿಮ್ಮ ಹುಡುಗ, ಕೈ ಬಿಡಬೇಡಿ"-
"ನಾನು ನಿಮ್ಮ ಮುಂದೆ ಬರುತ್ತೇನೆ, ನಿಮ್ಮ ಹುಡುಗನಿಗೆ ಕೈ ಹಿಡಿಯಬೇಕು" ಎಂದು ಸುಹಾಸ್ ಕೇಳಿಕೊಂಡಾಗ, ಅದು ಕೇವಲ ಮತದ ಭಿಕ್ಷೆಯಾಗಿರಲಿಲ್ಲ; ಬದಲಿಗೆ ತಂದೆಯನ್ನು ಕಳೆದುಕೊಂಡ ಮಗನೊಬ್ಬ ತನ್ನ ದೊಡ್ಡ ಕುಟುಂಬದ (ಹಿರಿಯೂರಿನ ಜನತೆ) ಮುಂದೆ ನಿಂತು ಆಸರೆ ಕೇಳಿದ ಆರ್ತತೆಯಾಗಿತ್ತು.
ಡಿ. ಸುಧಾಕರ್ ಎಂಬ ಧ್ರುವತಾರೆ ಮರೆಯಾಗಿದ್ದರೂ, ಅವರ ಆಶಯ ಮತ್ತು ಅಭಿವೃದ್ಧಿಯ ದಾರಿಯನ್ನು ಮುನ್ನಡೆಸಲು ಸುಹಾಸ್ ಸುಧಾಕರ್ ರೂಪದಲ್ಲಿ ಹೊಸ ನಾಯಕತ್ವ ಸಜ್ಜಾಗುತ್ತಿದೆ. ಹಿರಿಯೂರಿನ ಮಣ್ಣು ಸದಾ ಪ್ರೀತಿಯನ್ನು ಗೌರವಿಸಿದೆ, ಈ ಬಾರಿಯೂ ತಂದೆಯ ಹೆಜ್ಜೆಯಲ್ಲೇ ಹೆಜ್ಜೆ ಇಡ ಹೊರಟಿರುವ ಈ 'ಹುಡುಗನನ್ನು' ಹಿರಿಯೂರು ಎಂದಿಗೂ ಕೈಬಿಡುವುದಿಲ್ಲ ಎಂಬ ನಂಬಿಕೆ ಕಾರ್ಯಕರ್ತರ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು.


