ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ 68ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಸಭೆಯಲ್ಲಿ 29,679.20 ಕೋಟಿ ಮೌಲ್ಯದ 17 ಬೃಹತ್ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ 66,360ಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಯೋಜನೆಗಳ ವಿವರ: ಅನುಮೋದನೆ ಪಡೆದ 17 ಪ್ರಸ್ತಾವನೆಗಳಲ್ಲಿ 9 ಹೊಸ ಮತ್ತು ವಿಸ್ತರಣಾ ಯೋಜನೆಗಳು ಸೇರಿದ್ದರೆ, 8 ಹೆಚ್ಚುವರಿ ಬಂಡವಾಳ ಹೂಡಿಕೆ ಯೋಜನೆಗಳಾಗಿವೆ.
ಪ್ರಮುಖ ಹೂಡಿಕೆದಾರ ಸಂಸ್ಥೆಗಳು: ಟೊಯೋಟಾ ಕಿರ್ಲೋಸ್ಕರ್, ಮಹೀಂದ್ರಾ ಏರೋಸ್ಟ್ರಕ್ಚರ್ಸ್, ಹೀರೋ ಫ್ಯೂಚರ್ ಎನರ್ಜೀಸ್, ಟಿವಿಎಸ್ ಮೋಟಾರ್, ಟ್ರೂಆಲ್ಟ್ ಬಯೋಎನರ್ಜಿ ಹಾಗೂ ವೈಬ್ರನ್ಸಿ ರಿಯಲ್ ಎಸ್ಟೇಟ್ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ಕರ್ನಾಟಕದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿವೆ.
ರಾಜ್ಯದಲ್ಲಿ ಕೈಗಾರಿಕಾ ಪ್ರಗತಿಯನ್ನು ಕ್ಷಿಪ್ರಗೊಳಿಸಲು ಮತ್ತು ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದ್ದಾರೆ.




