ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವು ವರ್ಷಗಳಿಂದ ಕಾನೂನು ಸಮರ ಹಾಗೂ ಮನಸ್ತಾಪಗಳಿಂದ ಸುದ್ದಿಯಲ್ಲಿದ್ದ ಸ್ಯಾಂಡಲ್‌ವುಡ್ ನಟ 'ದುನಿಯಾ' ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರ ವೈವಾಹಿಕ ಬದುಕಿಗೆ ಇದೀಗ ಅಧಿಕೃತವಾಗಿ ತೆರೆಬಿದ್ದಿದೆ. ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್‌ವಿಭಾಗೀಯ ಪೀಠವು ಈ ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.
ನ್ಯಾಯಮೂರ್ತಿ ಡಿಕೆ ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಈ ತೀರ್ಪನ್ನು ಪ್ರಕಟಿಸಿದ್ದು, ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ದಂಪತಿಯ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದಿರುವುದನ್ನು ಗಮನಿಸಿ, ಇಬ್ಬರ ಒಳಿತಿಗಾಗಿ ಹಾಗೂ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಚ್ಛೇದನ ನೀಡಿದೆ.
2 ಕೋಟಿ ರೂಪಾಯಿ ಖಾಯಂ ಜೀವನಾಂಶ:
ದುನಿಯಾ ವಿಜಯ್ ಹಾಗೂ ನಾಗರತ್ನ ಅವರಿಗೆ ಮೊನಿಷಾ, ಮೋನಿಕಾ ಮತ್ತು ಸಾಮ್ರಾಟ್‌ಎಂಬ ಮೂವರು ಮಕ್ಕಳಿದ್ದಾರೆ. ಪತ್ನಿ ಹಾಗೂ ಅವಿವಾಹಿತರಾಗಿರುವ ಮೂವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಜೊತೆಗೆ ವಿಜಯ್ ಅವರ ಸಾಮಾಜಿಕ ಸ್ಥಾನಮಾನ ಹಾಗೂ ಹಣಕಾಸಿನ ಸ್ಥಿತಿಯನ್ನು ಪರಿಗಣಿಸಿ, ನಾಗರತ್ನ ಅವರಿಗೆ 2 ಕೋಟಿ ರೂಪಾಯಿಗಳ 'ಒನ್ ಟೈಮ್ ಸೆಟಲ್‌ಮೆಂಟ್' (ಖಾಯಂ ಜೀವನಾಂಶ) ಪಾವತಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ದಶಕಗಳ ದಾಂಪತ್ಯ ಕಲಹಕ್ಕೆ ಅಂತ್ಯ: ದುನಿಯಾ ವಿಜಯ್ ಹಾಗೂ ನಾಗರತ್ನ ನಡುವಿನ ದಾಂಪತ್ಯ ಕಲಹ 2013ರಲ್ಲೇ ಕೋರ್ಟ್‌ಮೆಟ್ಟಿಲೇರಿತ್ತು. 2014ರಲ್ಲಿ ನಡೆದ ಸಂಧಾನದ ಬಳಿಕ ಇಬ್ಬರೂ ಸಹಬಾಳ್ವೆ ನಡೆಸಲು ಮುಂದಾಗಿದ್ದರೂ, ಕೆಲವೇ ವರ್ಷಗಳಲ್ಲಿ ಮತ್ತೆ ಮನಸ್ತಾಪಗಳು ಉಲ್ಬಣಗೊಂಡಿದ್ದವು. 2016ರಲ್ಲಿ ವಿಜಯ್‌ಎರಡನೇ ಮದುವೆಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ಬಳಿಕ 2018ರಲ್ಲಿ, ಪತ್ನಿಯು ತಮಗೆ ಹಾಗೂ ತಮ್ಮ ಪೋಷಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯದಲ್ಲಿ ಕ್ರೌರ್ಯದ ಆರೋಪಗಳನ್ನು ಸಾಬೀತುಪಡಿಸಲು ವಿಜಯ್ ವಿಫಲರಾದ ಕಾರಣ ಅವರ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಲಾಗಿತ್ತು.
ಹೈಕೋರ್ಟ್‌ನಲ್ಲಿ ಜಯ: ಕೌಟುಂಬಿಕ ನ್ಯಾಯಾಲಯದಲ್ಲಿ "ನನಗೆ ವಿಚ್ಛೇದನ ಬೇಡ, ಪತಿಯೊಂದಿಗೇ ಬಾಳುತ್ತೇನೆ" ಎಂದು ನಾಗರತ್ನ ವಾದಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದುನಿಯಾ ವಿಜಯ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಇದೀಗ ವಿಚ್ಛೇದನ ಮಂಜೂರು ಮಾಡುವ ಮೂಲಕ ದಶಕಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟಕ್ಕೆ ಪೂರ್ಣವಿರಾಮ ಇಟ್ಟಿದೆ.




